ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಪುರಾತನ ಗೋಪುರಗಳಿಗೆ ರಕ್ಷಣೆ ನೀಡಲಿ

Mainashree
Updated On : 6 Mar 2013, 10:19 am

ಇತ್ತೀಚೆಗೆ ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯದ ಗೋಪುರದ ಮೇಲಿನ ಕಳಶ ಕಳಚಿ ಬಿದ್ದಿದೆ. ಕರ್ನಾಟಕದಲ್ಲಿ ಪುರಾತನವಾದ ದೇವಾಲಯಗಳಲ್ಲಿಯೂ ಇದೇ ಸ್ಥಿತಿಯಾಗುವಂತಹ ಸಂಭವವಿದೆ. ಗೋಪುರಗಳು ಬಿರುಕು ಬಿಡುತ್ತಿದೆ. ಇದಕ್ಕೆ ಯುನೆಸ್ಕೋ ಸಂಸ್ಥೆಯೇ ಕಾರಣವೆನ್ನಬೇಕೋ ತಿಳಿಯುತ್ತಿಲ್ಲ. ಪ್ರಾಚೀನ ಪರಂಪರೆಗಳನ್ನು ರಕ್ಷಿಸುತ್ತೇವೆ ಎಂದು ರಾಜ್ಯ ಸರ್ಕಾರದ ಆಡಳಿತದ ಸುಪರ್ದಿಯನ್ನು ತನ್ನ ಕೈಗೆ ತೆಗೆದುಕೊಳ್ಳುತ್ತದೆ. ಇಲ್ಲಿ ನಿರ್ಧಾರ ಅದರದೇ ಆಗಿರುತ್ತದೆ. ಪ್ರಸಿದ್ಧ ಹಂಪೆ ಗೋಪುರವಾದ 'ಬಿಷ್ಟಪ್ಪಯ್ಯ ಗೋಪುರ'ವು ಜೀರ್ಣ ಸ್ಥಿತಿ ತಲುಪಿದೆ. ಪುರಾತತ್ವ ಇಲಾಖೆಯು ಸೂಕ್ಷ್ಮವಾಗಿ ಅವಲೋಕಿಸಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು. ತಪ್ಪು ಆದ ಮೇಲೆ ಎಚ್ಚೆತ್ತುಕೊಳ್ಳುವುದಕ್ಕಿಂತ, ಪ್ರವಾಸಿಗರ ಭಕ್ತರ ಮೆಚ್ಚುಗೆಗೆ ಪಾತ್ರವಾಗುವಂತಹ ಕೆಲಸ ಮಾಡಬೇಕು. ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳಲಿ. ಇನ್ನು ಸಾಕಷ್ಟು ಮಂದಿರಗಳನ್ನು ಪುರಾತತ್ವ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡು ರಕ್ಷಿಸಲಿ.
-ಹನುಮಂತ. ಮ. ದೇಶಕುಲಕರ್ಣಿ, ಸಾ॥ ಭೋಗೇನಾಗರಕೊಪ್ಪ.
ನಿಜ, ನಮಗೆಲ್ಲ ನಾಚಿಕೆ ಆಗಲೇಬೇಕು!
"ನಾಚಿಕೆ ಆಗಬೇಕಾಗಿರುವುದು ಭಾರತಕ್ಕೆ!" (ಕನ್ನಡಪ್ರಭ 28 ಫೆಬ್ರವರಿ 2013) ಅಫ್ಜಲ್ ಗುರುವಿನ ಅಭಿಪ್ರಾಯ ಸರಿಯಾಗಿಯೇ ಇದೆ. ಆದರೆ ಕಾಶ್ಮೀರ ಭಾರತದ ಭಾಗ ಎಂದು ಹೇಳಿರುವುದಕ್ಕಲ್ಲ. ಬದಲಾಗಿ -1)ಪಾಕಿಸ್ತಾನ, ಚೀನಾ, ಬಾಂಗ್ಲಾದೇಶಗಳಂತಹ ಮಗ್ಗಲು ಮುಳ್ಳುಗಳು ಚುಚ್ಚುತ್ತಿದ್ದರೂ ಅವುಗಳೊಂದಿಗೆ ಸ್ನೇಹದ ಹಸ್ತ ಚಾಚುತ್ತಿರುವುದಕ್ಕೆ. 2) ಪಾಕಿಸ್ತಾನ, ಬಾಂಗ್ಲಾದೇಶಗಳು ಭಯೋತ್ಪಾದನೆಯೆಂಬ ಮಾರಕ ಸರಕನ್ನು ಭಾರಿ ಪ್ರಮಾಣದಲ್ಲಿ ಭಾರತಕ್ಕೆ ರಫ್ತು ಮಾಡುತ್ತಿದ್ದರೂ ಸಹನೆಯಿಂದ ಸಹಿಸಿಕೊಂಡಿರುವುದಕ್ಕೆ. 3) ಕಾಶ್ಮೀರಕ್ಕೆ ಎಲ್ಲಾ ಸೌಲತ್ತುಗಳನ್ನು, ವಿಶೇಷ ಸ್ಥಾನಮಾನ ನೀಡಿದ್ದರೂ ತನ್ನ ವಿರುದ್ಧವೇ ಸೆಟೆದು ನಿಂತಿರುವ ಕಾಶ್ಮೀರಿ ಭಯೋತ್ಪಾದಕರೊಂದಿಗೆ ಮೃದು ಧೋರಣೆಯನ್ನು ಅನುಸರಿಸುತ್ತಿರುವುದಕ್ಕೆ. 4)ದೇಶಾದ್ಯಂತ ಕ್ಯಾನ್ಸರ್‌ನಂತೆ ಹಬ್ಬಿಕೊಂಡಿರುವ ಭಯೋತ್ಪಾದನಾ ಸಂಘಟನೆಗಳು/ ತರಬೇತಿ ಕೇಂದ್ರಗಳ ಮೇಲೆ ಕ್ರಮಕೈಗೊಳ್ಳಲು ಹಿಂಜರಿಯುತ್ತಿರುವುದಕ್ಕೆ. 5)ಸರಣಿ ಬಾಂಬ್ ಸ್ಫೋಟಗಳನ್ನು ಅವುಗಳಿಂದಾಗುವ ಸಾವು ನೋವುಗಳನ್ನು ಸ್ಥಿತಪ್ರಜ್ಞತೆಯಿಂದ ಸಹಿಸಿಕೊಂಡಿರುವುದಕ್ಕೆ 6)ಕಡೆಯದಾಗಿ ಕಸಬ್, ಅಫ್ಜಲ್ ಗುರುವಿನಂತಹ ಭಯೋತ್ಪಾದಕರ ಕೃತ್ಯಗಳು ಸಂಶಯಾತೀತವಾಗಿ ಸಾಬೀತಾಗಿದ್ದರೂ ಶಿಕ್ಷೆ ವಿಧಿಸಲು ಮೀನಮೇಷ ಎಣಿಸಿದ್ದಕ್ಕೆ ಹಾಗೂ ಇವರಿಗೆ ಶಿಕ್ಷೆ ಜಾರಿ ಮಾಡದೆ  ದೀರ್ಘ ಕಾಲ ವೈಭವದ ಆತಿಥ್ಯ ನೀಡಿದ್ದಕ್ಕೆ ನಿಜವಾಗಲೂ ಭಾರತಕ್ಕೆ ನಾಚಿಕೆ ಆಗಬೇಕು. ಇಷ್ಟೆಲ್ಲಾ ಆದರೂ ಮೌನವಾಗಿ ಎಲ್ಲವನ್ನು ಸಹಿಸಿಕೊಂಡಿರುವ ನಮಗೆಲ್ಲಾ ನಿಜವಾಗಿಯೂ ನಾಚಿಕೆಯಾಗಬೇಕು.
-ಕೆ.ಎಂ. ಲಿಂಗರಾಜು, ನಂಜನಗೂಡು
ಪ್ರಸನ್ನ ಮೈದಾನ
ಉತ್ತರ ಕರ್ನಾಟಕದ ಪ್ರಮುಖ ಸ್ಥಳ ಹುಬ್ಬಳ್ಳಿಯಲ್ಲಿರುವ ಈದ್ಗಾ ಮೈದಾನದ ಪ್ರಕರಣವು ಸಮಾಪ್ತ್ತಿಗೊಂಡು ಸದರಿ ಮೈದಾನವು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಶಕ್ಕೆ ಬಂದದ್ದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಈ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಲು ಪ್ರಯತ್ನಿಸಿದವರು ಅನೇಕ ಜನ ಹೋರಾಟಗಾರರು. ಈ ಪೈಕಿ ಹೋರಾಟಗಳಲ್ಲಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟವರು. ಐದು ಜನರು ಈ ಐದು ಜನ ಹುತಾತ್ಮರಲ್ಲಿ ಪರಸ್ಥಳದಿಂದ ಬಂದು ಪ್ರಾಣತೆತ್ತ ಏಕೈಕ ವ್ಯಕ್ತಿ ಶಿರಹಟ್ಟಿಯ ಅಂದಿನ ನವಯುವಕ 28 ವರ್ಷದ ದಿ. ಪ್ರಸನ್ನ ರಾನಡೆ. ಆದ್ದರಿಂದ ಈದ್ಗಾ ಮೈದಾನಕ್ಕೆ ಈ ದಿವಂಗತ ಪ್ರಸನ್ನ ರಾನಡೆ ಹೆಸರಿನ ಸ್ಮರಣಾರ್ಥವಾಗಿ "ಪ್ರಸನ್ನ ಮೈದಾನ" ಎಂದು ಮರುನಾಮಕರಣ ಮಾಡಬೇಕು. ಸದ್ಯ ಹುಬ್ಬಳ್ಳಿಯಿಂದಲೇ ಮುಖ್ಯಮಂತ್ರಿಯಾಗಿರುವ ಜಗದೀಶ ಶೆಟ್ಟರ್ ಇವರಲ್ಲಿ ಈ ಕೆಲಸವನ್ನು  ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ಇದಕ್ಕಾಗಿ ಶಿರಹಟ್ಟಿ ಕ್ಷೇತ್ರದ ಎಂಎಲ್‌ಎಗಳಾದ ರಾಮಣ್ಣ ಲಮಾಣಿ ಇವರು ಹಾಗೂ ಸಂಸದರಾದ ಪ್ರಹ್ಲಾದ ಜೋಷಿ ಹಾಗೂ ಶಿವಕುಮಾರ್ ಉದಾಸಿ ಇವರು ವಿಶೇಷ ಗಮನ ಹರಿಸಿ ಕೆಲಸ ಮಾಡಿಕೊಡಬೇಕೆಂದು ಕಳಕಳಿಯಿಂದ ಬೇಡಿಕೊಳ್ಳುತ್ತೇನೆ.
-ವಾಸುದೇವ ಸುಬ್ಬಣ್ಣಾಚಾರ ಕುಬೇರ, ಗದಗ

-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement