ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಜನರ ಸನ್ನದಿಗೆ ಕೇಂದ್ರದ ಅಸ್ತು

Mainashree
Updated On : 8 Mar 2013, 11:55 am

ಕೊನೆಗೂ ಕೇಂದ್ರ ಸರ್ಕಾರ ಪ್ರಜೆಗಳಿಗೆ ಸಲ್ಲಬೇಕಾದ ಸೇವಾ ಸೌಲಭ್ಯಗಳು ಸಕಾಲದಲ್ಲಿ, ಅವಧಿಬದ್ಧವಾಗಿ ಸಲ್ಲಬೇಕೆನ್ನುವ ತತ್ವವನ್ನು ಒಪ್ಪಿದೆ. ಈ ಜವಾಬ್ದಾರಿಯನ್ನು ನೌಕರ ಷಾಹಿ ಹಾಗೂ ಸರ್ಕಾರದ ಸಿಬ್ಬಂದಿಯ ಮೇಲೇ ಹೊರಿಸುವುದು. ಈ ವಿಚಾರದಲ್ಲಿ ಕೇಂದ್ರ ಸಚಿವ ಸಂಪುಟ ಗುರುವಾರ ಅಂಗೀಕರಿಸಿದ ಕರಡು ವಿಧೇಯಕದ ಉದ್ದೇಶ. ಇದುವರೆಗೆ ಸರ್ಕಾರಕ್ಕೆ ಇದ್ದ ಅಧಿಕಾರ ಹಾಗೂ ಸವಲತ್ತು ಇನ್ನು ಮುಂದೆ ಸಾರ್ವಜನಿಕರ ಸನ್ನದಿನ ಚೌಕಟ್ಟಿಗೆ ಒಳಪಡುತ್ತದೆ. ಜನರಿಗೆ ಸಿಗಬೇಕಾದ ಸೌಲಭ್ಯದ ನಿರಾಕರಣೆ ಅಥವಾ ವಿಳಂಬ ಸಂಬಂಧಪಟ್ಟ ಸಿಬ್ಬಂದಿಯ ಶಿಕ್ಷಾರ್ಹ ಅಪರಾಧವಾಗಲಿದೆ. ಅದಕ್ಕೆ ದಿನಕ್ಕಿಷ್ಟು ಎನ್ನುವ ಲೆಕ್ಕದ ಮೇಲಿನ ದಂಡ ವಿಧಿಸುವುದಕ್ಕೂ ವಿಧೇಯಕದಲ್ಲಿ ನಿಯಮಗಳನ್ನು ಅಳವಡಿಸಲಾಗಿದೆ. ವಾಸ್ತವದಲ್ಲಿ ಇಂತಹ ಒಂದು ಪ್ರಸ್ತಾಪವನ್ನು ಸಂವಿಧಾನದಲ್ಲೇ ಅಳವಡಿಸಬೇಕಾಗಿತ್ತು. ದೇಶದಲ್ಲಿ ಈಗ ಜಾರಿಯಲ್ಲಿರುವ ಎಲ್ಲಾ ಕಾಯಿದೆಗಳಲ್ಲೂ ಜನರು ಮಾಡಬೇಕಾದ ಕೆಲಸ ಮಾಡದೇ ಹೋದರೆ ದಂಡ ವಿಧಿಸುವ ಅಧಿಕಾರ ಸರ್ಕಾರಕ್ಕೆ ಇತ್ತು. ಈಗಲೂ ಇದೆ. ಈಗ ಜನರಿಗೆ ಸಲ್ಲಬೇಕಾದ ಸೇವೆ - ಸೌಲಭ್ಯ ಸಕಾಲದಲ್ಲಿ ಒದಗಿಸದೇ ಹೋದರೆ ಸಿಬ್ಬಂದಿಗೆ ದಂಡ ವಿಧಿಸುವ ಚಿಂತನೆಯನ್ನು ಶಾಸನ ರೂಪಕ್ಕೆ ಇಳಿಸುವ ಕೇಂದ್ರದ ಪ್ರಯತ್ನ ಮೆಚ್ಚುವಂತಹದ್ದೇ.
ಆದರೆ ಕೇಂದ್ರದ ಉದ್ದೇಶಿತ ವಿಧೇಯಕ ಕೇಂದ್ರ ಸರ್ಕಾರ ಜನರಿಗೆ ನೀಡಬೇಕಾದ ನೇರ ಸೌಲಭ್ಯಕ್ಕಷ್ಟೇ ಸೀಮಿತವಾಗಿಲ್ಲ. ಅದನ್ನು ಎಲ್ಲ ರಾಜ್ಯಗಳಿಗೂ ಅನ್ವಯಿಸುವ ಪ್ರಯತ್ನವೂ ಇದೆ. ಈಗಾಗಲೇ ಕರ್ನಾಟಕದ ಜನಪ್ರಿಯ ವ್ಯವಸ್ಥೆಯಾದ ಸಕಾಲ ಕಾಯಿದೆಯೂ ಸೇರಿದಂತೆ ಸುಮಾರು ಹತ್ತು ರಾಜ್ಯಗಳಲ್ಲಿ ನಾಗರಿಕರ ಸನ್ನದಿನ ಮಾನ್ಯತೆಯ ಕಾಯಿದೆಗಳು ಜಾರಿಯಲ್ಲಿವೆ. ಇದರ ಜತೆಯಲ್ಲೇ ಇದೇ ವಿಚಾರದಲ್ಲಿ ರಾಜ್ಯಗಳಲ್ಲಿ ರಾಜ್ಯ ಸರ್ಕಾರಿ ಸೇವೆ - ಸೌಲಭ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಕಾಯಿದೆಯೂ ಜಾರಿಗೆ ಬರಬೇಕು ಎನ್ನುವುದರಲ್ಲಿ ಯಾವ ಪುರುಷಾರ್ಥ ಸಾಧನೆಯ ಉದ್ದೇಶವಿದೆಯೋ ಗೊತ್ತಾಗುತ್ತಿಲ್ಲ.
ಈಗಿನ ಭಾರತದ ರಾಜಕೀಯ ಭೂಪಟದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಕೂಟದ ಸರ್ಕಾರ ಇದ್ದರೆ, ರಾಜ್ಯಗಳಲ್ಲಿ ಒಂದು ಕಡೆ ಕಾಂಗ್ರೆಸ್ ಕೂಟದ ಸರ್ಕಾರ ಇದೆ. ಕೆಲವೇ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರಗಳಿವೆ. ಉಳಿದಂತೆ, ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ವಿರೋಧಿ ಪಕ್ಷಗಳ ಸರ್ಕಾರಗಳೇ ಅಧಿಕಾರದಲ್ಲಿರುವುದು. ಇತ್ತೀಚಿನ ದಿನಗಳಲ್ಲಿ ಭಾರತೀಯ ಜನತಾ ಪಾರ್ಟಿ ರಾಜ್ಯಗಳ ಸರ್ಕಾರಗಳ ಮೇಲೆ ಕೇಂದ್ರದ ಸವಾರಿ ಮಾಡುವ ಪ್ರವೃತ್ತಿಯನ್ನು ಪ್ರಬಲವಾಗಿ ವಿರೋಧಿಸುತ್ತಿದೆ.
ನಿಜ. ಹಿಂದೆ ಭಾರತೀಯ ಜನತಾ ಪಾರ್ಟಿ ಶಕ್ತಿಯುತ ಕೇಂದ್ರ ಸರ್ಕಾರ ಹಾಗೂ ರಾಜ್ಯಗಳ ಸರ್ಕಾರಗಳ ವ್ಯವಸ್ಥೆಯನ್ನು ಪ್ರತಿಪಾದಿಸಿತ್ತು. ಎಲ್ಲ ರಾಜ್ಯಗಳೂ, ಕೇಂದ್ರದ ಅಧಿಕಾರಕ್ಕೆ ಒಳಪಟ್ಟ ವಿಚಾರಗಳಲ್ಲಿ ಕೇಂದ್ರದ ಕಾಯಿದೆಗಳನ್ನೇ ಜಾರಿಗೆ ತರಲು ಸಹಕಾರ ನೀಡಬೇಕೆನ್ನುವುದರಲ್ಲಿ ಎರಡನೇ ಮಾತೇ ಇಲ್ಲ. ಅದು ರಾಜ್ಯಗಳ ಕರ್ತವ್ಯ. ಆದರೆ ಕೇಂದ್ರ ಸರ್ಕಾರವೂ ರಾಜ್ಯಗಳಿಗೆ ಸೇರಿದ ವಿಚಾರಗಳಲ್ಲಿ, ಅಥವಾ ಕೇಂದ್ರ ಹಾಗೂ ರಾಜ್ಯಗಳೆರಡಕ್ಕೂ ಅಧಿಕಾರದ ಚಲಾವಣೆಗೆ ಅವಕಾಶ ಇರುವ ವಿಚಾರಗಳಲ್ಲಿ, ಶಾಸನ ರಚಿಸುವಾಗ ರಾಜ್ಯಗಳ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿ ಒಟ್ಟಾರೆ ಅಭಿಪ್ರಾಯದ ಆಧಾರದ ಮೇಲೇ ಕಾಯಿದೆಯನ್ನು ರಚಿಸುವುದು ಸೂಕ್ತ.
ಕೇಂದ್ರ - ರಾಜ್ಯಗಳ ಸಂಯುಕ್ತ ಜವಾಬ್ದಾರಿಯಲ್ಲಿ ಜಾರಿಗೆ ಬಂದಿರುವ ಹಲವಾರು ಕಾಯಿದೆಗಳು ಜಾರಿಯಲ್ಲಿವೆ. ಬಹುತೇಕವಾಗಿ ಕಾರ್ಮಿಕ ಕಾಯಿದೆಗಳು ಈ ವ್ಯವಸ್ಥೆಗೆ ಸಾಕ್ಷಿಗಳಾಗಿವೆ. ಆದರೆ ಈಗ ಕೇಂದ್ರ ಸಚಿವ ಸಂಪುಟ, ಈಗಾಗಲೇ ರಾಜ್ಯಗಳಲ್ಲಿ ಜಾರಿಯಲ್ಲಿರುವ ಕಾಯಿದೆಯ ರೀತಿಯಲ್ಲೇ ಕೇಂದ್ರ ಶಾಸನ ರಚನೆಗೆ ನಿರ್ಧರಿಸಿ, ವಿಧೇಯಕವನ್ನು ಅಂಗೀಕರಿಸಿರುವುದು ಸರಿಯಲ್ಲ. ಆದರೆ ಇದನ್ನೇ ದೊಡ್ಡದನ್ನಾಗಿ ಮಾಡಿ ಕೇಂದ್ರದ ಸೇವೆ-ಸೌಲಭ್ಯಗಳ ವಿಚಾರದಲ್ಲಿ ನಾಗರಿಕರ ಹಕ್ಕುಗಳ ಸನ್ನದು ಮನ್ನಣೆ ಪಡೆಯುವ ಪ್ರಕ್ರಿಯೆ ನಿಧಾನವಾಗಬಾರದು. ಜನರಿಗೆ ಅಧಿಕಾರ ಕೊಡುವ ವಿಚಾರ ರಾಜಕೀಯ ವಿವಾದಕ್ಕೆ ಸಿಗುವಂತೆ ಆಗಬಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement