ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Mainashree
Updated On : 10 Mar 2013, 10:14 am

ಬೆಂಗಳೂರಿನ ಜೆ.ಪಿ.ನಗರದಿಂದ ಮಲ್ಲಿಕಾ.ಎಂ ಪತ್ರ ಬರೆದಿದ್ದಾರೆ. 'ಈಗ ಕನ್ನಡಪ್ರಭದಲ್ಲಿ ಕಣ್ಣಿಗೆ ರಾಚುವಂತಹ ತಪ್ಪುಗಳು ಪ್ರಕಟವಾಗುತ್ತಿಲ್ಲ ಎಂದು ಮೊನ್ನೆ ತಾನೆ ಖುಷಿಪಟ್ಟಿದ್ದೆ. ಮರುದಿನ ಎಂದರೆ ಮಾ.7ರಂದು 'ಬೈಟು ಕಾಫಿ' ಕೈಗೆತ್ತಿಕೊಂಡರೆ ಮೊದಲ ಪುಟದ ಮೊದಲ ಪ್ಯಾರಾದಲ್ಲಿಯೇ ತಪ್ಪು! ಆಲಿಯಾಳನ್ನು ಢಿ/್ಟ ಮಹೇಶ್ ಭಟ್ ಎಂದು ಬರೆಯಲಾಗಿದೆ, 'ಭಟ್ಟರ ಮಗಳು' ಎಂಬ ಸರಿಯಾದ ಶೀರ್ಷಿಕೆ ಕೊಟ್ಟ ಮೇಲೂ. ಇನ್ನು ಎರಡನೇ ಪುಟದಲ್ಲಿ 'ಸಣ್ ಸ್ಟೋರಿ' ಶೀರ್ಷಿಕೆಯಡಿ ಸಣ್ಣ ಕಥೆಗಳು ಓದಲು ಸಿಗಲಿಲ್ಲ. ಶೀರ್ಷಿಕೆಯನ್ನು 'ಬನ್ನಿಮಂಟಪ' ಎಂದು ಬದಲಾಯಿಸಬೇಕಿತ್ತು.'
'ಮಾರ್ಚ್ 9ರ ಸಂಚಿಕೆಯ ಪುಟ4ರ 'ವೀಕೆಂಡ್ ಗ್ಯಾಲರಿ'ಯಲ್ಲಿ 'ಫ್ಯಾಷನ್‌' ಎಂಬುದು 'ಪ್ಯಾಷನ್‌' ಆಗಿದೆ. ಇನ್ನು 'ಸಿನಿಹನಿ'ಯಲ್ಲಿ ಸಿನಿಮಾಗಳ ಮತ್ತು ನಟನಟಿಯರ ಹೆಸರುಗಳನ್ನು ಯಾವ ರೀತಿಯಲ್ಲಿ ವಿರೂಪಗೊಳಿಸಿ ಟೈಪಿಸಲಾಗಿದೆ ಎಂದರೆ ಓದಿದವರು ದಂಗಾಗಲೇಬೇಕು. ಹಿಂದಿ ಚಿತ್ರ 'ಸಾಹೆಬ್ ಬೀವಿ ಔರ್ ಗ್ಯಾಂಗ್‌ಸ್ಟರ್ ರಿಟರ್ನ್ಸ್‌', ನಟ ಇರ್ಫಾನ್ ಖಾನ್, ನಟಿ ಮಹೀ ಗಿಲ್ ಮತ್ತು ನಿರ್ದೇಶಕ ತಿಗ್ಮಾಂಶು ಧುಲಿಯಾರ ಹೆಸರುಗಳನ್ನು ತಪ್ಪಾಗಿ ಬರೆಯಲಾಗಿದೆ. 'ಓಝಿ ದಿ ಗ್ರೇಟ್ ಆ್ಯಂಡ್ ಪವರ್‌ಫುಲ್‌' ಚಿತ್ರದ ಹೆಸರು, ನಟಿ ಮಿಲಾ ಕ್ಯುನಿಸ್, ನಟ ಜೇಮ್ಸ್ ಫ್ರಾಂಕೋ ಮತ್ತು ನಟಿ ಮಿಶೆಲ್ ವಿಲ್ಯಮ್ಸ್ ಹೆಸರುಗಳನ್ನು ತಪ್ಪಾಗಿ ಮುದ್ರಿಸಲಾಗಿದೆ.'
'ಸರ್, ಕನ್ನಡದಲ್ಲಿ ಟೈಪಿಸುವ ಕಷ್ಟ ಬಲ್ಲೆ. ಆದರೆ ಇಂತಹ ತಪ್ಪುಗಳು ನಿರ್ಲಕ್ಷ್ಯದಿಂದ ಮಾತ್ರ ಉಂಟಾಗಬಲ್ಲವು ಎಂದು ನನ್ನ ಭಾವನೆ' ಎಂದಿದ್ದಾರೆ.
ಚನ್ನಗಿರಿಯಿಂದ ಬಸವನಗೌಡ ಹೆಬ್ಬಳಗೆರೆ ಪತ್ರ ಕಳುಹಿಸಿದ್ದಾರೆ. 'ನನ್ನ ಅಚ್ಚುಮೆಚ್ಚಿನ ಪ್ರಣತಿಯವರ ಅಂಕಣದ ಬಗ್ಗೆ 'ತಪ್ಪಾಯ್ತು ತಿದ್ಕೋತೀವಿ'ಯಲ್ಲಿ ಬರೆಯುತ್ತಿರುವುದಕ್ಕೆ ದಯಮಾಡಿ ನನ್ನ ಕ್ಷಮಿಸು ಪ್ರಣತಿ. ನಂಗೊತ್ತು, ಇದು ಖಂಡಿತಾ ನಿನ್ನ ತಪ್ಪಲ್ಲ, ಮುದ್ರಾರಾಕ್ಷಸನ ತಪ್ಪು ಎಂದು!'
'ಅದೇನೆಂದರೆ ಮಾ.3ರಂದು ಪ್ರಕಟವಾದ ಲೇಖನದಲ್ಲಿ '19 ಕುದುರೆಗಳನ್ನು ಸಮಪಾಲು ಹೇಗೆ?' ಎಂದು ಶೀರ್ಷಿಕೆಯಿದೆ. ಇಲ್ಲಿ 'ಕುದುರೆಗಳನ್ನು' ಎಂಬ ಪದದ ಬದಲಿಗೆ 'ಕುದುರೆಗಳ' ಪದವನ್ನು ಬಳಸಬೇಕಿತ್ತು. 'ಕುದುರೆಗಳನ್ನು' ಎಂಬ ಪದವನ್ನು ಬಳಸಬೇಕೆಂದರೆ '19 ಕುದುರೆಗಳನ್ನು ಸಮಪಾಲು ಮಾಡುವುದು ಹೇಗೆ?' ಎಂದಿದ್ದರೆ ಸೂಕ್ತವಾಗಿರುತ್ತಿತ್ತು. ಇದೇ ಲೇಖನದಲ್ಲಿ ಬರುವ ಶ್ರೀಮಂತ ನಾಸ್ತಿಕನಾಗಿದ್ದನು ಎಂದು ಮುದ್ರಿತವಾಗಿದೆ. ಅದು 'ಆಸ್ತಿಕ' ಎಂದಾಗಬೇಕಿತ್ತು. ಏಕೆಂದರೆ 'ದೇವಸ್ಥಾನಕ್ಕೆ ನಾಲ್ಕನೇ ಒಂದು ಭಾಗದಷ್ಟು ಕುದುರೆಗಳನ್ನು ದಾನ ಮಾಡಬೇಕು' ಎಂದು ಶ್ರೀಮಂತ ವಿಲ್ ಬರೆಯಬೇಕೆಂದರೆ ಖಂಡಿತಾ ಅವನು ಆಸ್ತಿಕನಾಗಿರಬೇಕು. ನಾಸ್ತಿಕ ಆಗಿದ್ರೆ ಅವನೇಕೆ ಈ ರೀತಿ ವಿಲ್ ಬರೆಯುತ್ತಿದ್ದ? ನಾಸ್ತಿಕರಾದವರು ದೇವಾಲಯಕ್ಕೆ ಹೋಗೋದೆ ಕಷ್ಟ, ಅಂಥಾದ್ರಲ್ಲಿ ದಾನ! ಸಾಧ್ಯವಿಲ್ಲದ ಮಾತು' ಎಂದಿದ್ದಾರೆ.


- ವಿಶ್ವೇಶ್ವರ ಭಟ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement