ಮದನಮೋಹನ ಮಾಳವೀಯರು ಒಬ್ಬ ಅಪ್ರತಿಮ ದೇಶಭಕ್ತರೂ, ವಿದ್ಯಾಭಿಮಾನಗಳೂ ಆಗಿದ್ದರು. ಅವರು ಸ್ಥಾಪಿಸಿದ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಭಾರತದ ಒಂದು ಪ್ರತಿಷ್ಠಿತ ವಿದ್ಯಾಕೇಂದ್ರವೆನಿಸಿದೆ. ಭಾರತದಲ್ಲಿ ಸ್ಕೌಟ್ ಚಳವಳಿಯನ್ನು ಜನಪ್ರಿಯಗೊಳಿಸಿದವರೂ ಅವರೇ. ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕೆಲಕಾಲ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ನಂತರ ಕಾನೂನು ಪದವಿ ಗಳಿಸಿ ನ್ಯಾಯವಾದಿಗಳಾಗಿಯೂ ಸೇವೆ ಸಲ್ಲಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಅವರು ಸ್ಥಾಪಿಸಿ ಪ್ರಕಟಿಸುತ್ತಿದ್ದ ಆಂಗ್ಲ ಪತ್ರಿಕೆ ಲೀಡರ್ ತುಂಬಾ ಪ್ರಭಾವಶಾಲಿಯಾಗಿತ್ತು. ನಾಲ್ಕು ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಾಳವೀಯರು ಸ್ವಾತಂತ್ರ್ಯ ಬರುವ ಒಂದು ವರ್ಷ ಮೊದಲು ಇಹಲೋಕ ತ್ಯಜಿಸಿದರು.
ಮಾಳವೀಯರು ಬನಾರಸ್‌ನಲ್ಲಿ ವಿಶ್ವ ವಿದ್ಯಾನಿಲಯ ಸ್ಥಾಪನೆ ಮಾಡಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಅದಕ್ಕಾಗಿ ಚಂದಾ ವಸೂಲಿಗೆ ದೇಶಾದ್ಯಂತ ಸುತ್ತಿದರು. ಅನೇಕರ ಬಳಿ ಬೇಡಿ ಹಣ ಪಡೆದರು. ಕೆಲವರು ಸಹಕರಿಸುತ್ತಿದ್ದರು, ಮತ್ತೆ ಕೆಲವರು ಪರಿಹಾಸ್ಯ ಮಾಡುತ್ತಿದ್ದರು. ಒಮ್ಮೊಮ್ಮೆ ಅವರಿಗೆ ಹೀಗೆ ಬೇಡುವುದು ಬೇಜಾರಾಗುತ್ತಿತ್ತು. ಒಂದು ಸಾರಿ ಅವರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಆಗ ಸಹಪ್ರಯಾಣಿಕನ ಪರಿಚಯವಾಯಿತು. ಪರಿಚಯ ಸ್ನೇಹವಾಗಿ ಬದಲಾಗಿ ಆಪ್ತಸಮಾಲೋಚನೆ ನಡೆದಾಗ ಆತ ಮಾಳವೀಯರಿಗೆ ಕಬೀರನ ಕೆಲವೊಂದು ದೋಹಗಳನ್ನು ಶ್ರದ್ಧೆಯಿಂದ ಹೇಳಿದ. ಅವು ತುಂಬಾ ಚೆನ್ನಾಗಿಯೂ, ನೀತಿಯುಕ್ತವಾಗಿಯೂ ಇದ್ದವು. ಅದರಲ್ಲೂ ಒಂದು ದೋಹೆ ಮಾಳವೀಯರಿಗೆ ತುಂಬಾ ಪ್ರಿಯವಾಯಿತು. ಅದರ ಭಾವಾರ್ಥ ಹೀಗಿದೆ, 'ಏನಾದರಾಗಲೀ, ಇನ್ನೊಬ್ಬರ ಎದುರು ಸಹಾಯಕ್ಕಾಗಿ, ತನ್ನ ಸ್ವಾರ್ಥಕ್ಕಾಗಿ ಕೈಯೊಡ್ಡಬಾರದು. ಅದು ಮಹಾಪಾಪ. ಆದರೆ ಬೇರೆಯವರಿಗಾಗಿ, ಒಳ್ಳೆಯ ಉದ್ದೇಶಕ್ಕೆ ಬೇಡಿದರೆ ತಪ್ಪೇನಿಲ್ಲ.' ಅದನ್ನು ಕೇಳಿ ಮಾಲವೀಯರು ಪುಳಕಿತರಾದರು. ಹಲವಾರು ಬಾರಿ ಅದೇ ದೋಹೆಯನ್ನು ಹೇಳಿಸಿ ಸಂತೋಷಪಟ್ಟರು. ತಾವು ಒಂದು ಒಳ್ಳೆಯ ಉದ್ದೇಶಕ್ಕಾಗಿ ಇನ್ನೊಬ್ಬರನ್ನು ಕೇಳುವುದು ತಪ್ಪಾಗಲಾರದು ಎಂದು ತಿಳಿದು ಅವರ ಮನಸ್ಸಿಗೆ ನೆಮ್ಮದಿ ತುಂಬಿತು. 1916 ರಲ್ಲಿ ಸ್ಥಾಪಿತವಾದ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಇಂದು ವಿಶ್ವ ಪ್ರಸಿದ್ಧವಾಗಿರುವುದರ ಹಿಂದೆ ಮದನಮೋಹನ ಮಾಳವೀಯರ ಕೊಡುಗೆ ಅಪಾರ.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ