ನೇಮಕಾತಿ ಗೊಂದಲ ನಿವಾರಿಸಿ
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಸಂವಿಧಾನದ ತೊಡಕುಂಟಾಗಿರುವುದರಿಂದ ನೂತನ ಮಾರ್ಗಸೂಚಿ ಸಿದ್ಧಗೊಳ್ಳುವವರೆಗೆ ನೇಮಕಾತಿಯನ್ನು ಸ್ಥಗಿತಗೊಳಿಸಲಾಗಿದ್ದು ಮಾರ್ಚ್ 24 ರಂದು ನಡೆಯಬೇಕಾಗಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆ ರದ್ದುಗೊಂಡಿದೆ. ಈ ರದ್ದತಿಯಿಂದ ನಿರಾಶರಾಗಿರುವ ಅಭ್ಯರ್ಥಿಗಳನ್ನು ಸದ್ಯ ಆತಂಕದ ಛಾಯೆ ಆವರಿಸುತ್ತಿದೆ. ಈ ನೇಮಕಾತಿ ಪ್ರಕ್ರಿಯೆಗಳು ಯಾವಾಗ ಪುನರಾರಂಭವಾಗಬಹುದು ಎಂಬ ಬಗ್ಗೆ ಇಲಾಖೆ ಯಾವುದೇ ರೀತಿಯ ಸೂಕ್ತ ಸ್ಪಷ್ಟನೆ ನೀಡದೆ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಏಪ್ರಿಲ್ ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆಗಳು ಪುನರಾರಂಭವಾಗಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಏಪ್ರಿಲ್ ತಿಂಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿದ್ದು, ನಂತರ ಏಪ್ರಿಲ್ ಕೊನೆಯ ವಾರದಿಂದ ಮೊದಲ್ಗೊಂಡು ಮೇ ತಿಂಗಳ ಮೊದಲೆರಡು ವಾರಗಳ ತನಕ ಕ.ರಾ.ಮು.ವಿ.ವಿ ಯ ಪದವಿ ಪರೀಕ್ಷೆಗಳು ನಡೆಯಲಿವೆ. ಸಾಕಷ್ಟು ಡಿ.ಎಡ್ ಪದವೀಧರರು ಮುಕ್ತ.ವಿ.ವಿ ಯ ಪದವಿ ಪರೀಕ್ಷೆಗಳನ್ನೂ ತೆಗೆದುಕೊಂಡಿರುವುದರಿಂದ ಈ ಮಧ್ಯಂತರ ಅವಧಿಯಲ್ಲಿ ನೇಮಕಾತಿ ಪರೀಕ್ಷೆಗಳನ್ನು ನಡೆಸಿದರೆ ಅಭ್ಯರ್ಥಿಗಳಿಗೆ ಸಿದ್ಧತೆಗೆ ಸಂಬಂಧಿಸಿದಂತೆ ವಿಪರೀತ ಸಮಯಾಭಾವ ಉಂಟಾಗಲಿದೆ. ನಂತರ ಮೇ ತಿಂಗಳಿನಲ್ಲಿಯೇ ವಿಧಾನಸಭಾ ಚುನಾವಣೆಗಳು ನಡೆಯುವುದರಿಂದ ಪರೀಕ್ಷೆಗಳು ನಡೆಯುವುದು ಕಷ್ಟಸಾಧ್ಯವಾಗಿದೆ. ಈ ಎಲ್ಲಾ ಅಂಶಗಳನ್ನು ಆಧರಿಸಿ ನೋಡಿದರೆ ನೇಮಕಾತಿ ಯಾವಾಗ ಪುನರಾರಂಭವಾಗಬಹುದು ಎಂಬ ಬಗ್ಗೆ ಸಾಕಷ್ಟು ಗೊಂದಲ ಕಾಡುತ್ತದೆ. ಆದ್ದರಿಂದ ಇಲಾಖೆಯು ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಅದರ ಆಧಾರದ ಮೇಲೆ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಂಭಾವ್ಯ ದಿನಾಂಕ ಅಥವಾ ತಿಂಗಳನ್ನು ಆದಷ್ಟು ಬೇಗ ಪ್ರಾಮಾಣಿಕವಾಗಿ ಪ್ರಕಟಿಸಬೇಕಾಗಿ ವಿನಂತಿ. ಇದರೊಂದಿಗೆ ಸಹಸ್ರಾರು ಅಭ್ಯರ್ಥಿಗಳ ಆತಂಕ ನಿವಾರಿಸಿ ಸಂಬಂಧಿತ ಪರೀಕ್ಷೆಗಳಿಗೆ ನಿರಾಳರಾಗಿ ಸಿದ್ಧತೆ ಮಾಡಿಕೊಳ್ಳಲು ಅನುವು ಮಾಡಿಕೊಡಬೇಕಾಗಿ ಅಸಂಖ್ಯಾತ ಅಭ್ಯರ್ಥಿಗಳ ಪರವಾಗಿ ಸಂಬಂಧಪಟ್ಟವರಲ್ಲಿ ಮನವಿ.
-ಸಂದೇಶ್.ಎಚ್.ನಾಯ್ಕ್, ಕುಂದಾಪುರ
ಅಸಂಬದ್ಧಕ್ಕೆ ಮುನ್ನುಡಿ!
'ಮತಗಟ್ಟೆಗಳಲ್ಲಿ ಫ್ಯಾನ್ ತಿರುಗಲ್ಲ' ಸುದ್ದಿ ಓದಿ (ಗುರುವಾರ 7 ಮಾರ್ಚ್ 13ರ ಕ.ಪ್ರ. ಪಟ 5ರ ಸುದ್ದಿ) ಈ ಪತ್ರ ಬರೆಯುತ್ತಿದ್ದೇನೆ. ಬಿ.ಎಸ್.ಆರ್. ಕಾಂಗ್ರೆಸ್ ಚಿಹ್ನೆ 'ಫ್ಯಾನ್' ಆದ ಕಾರಣ ಆ ಪಕ್ಷದ ಅಭ್ಯರ್ಥಿಗಳು ಎಲ್ಲೆಲ್ಲಿ ಸ್ಪರ್ಧಿಸುತ್ತಿದ್ದಾರೋ ಆ ಮತೆಗಟ್ಟೆಗಳಲ್ಲಿ ಫ್ಯಾನ್ ಹಾಕುವಂತಿಲ್ಲ. ಆ ಮತಗಟ್ಟೆಯಲ್ಲಿ 'ಫ್ಯಾನ್' ತಿರುಗಿಸಬೇಡವಾದಲ್ಲಿ ಕಾಂಗ್ರೆಸ್ (ಐ) ಪಕ್ಷದ ಚಿಹ್ನೆಯನ್ನು ಅಂದರೆ 'ಹಸ್ತ'ವನ್ನು ಹೊಂದಿದ ಎಲ್ಲಾ ಮತದಾರರು ಮತ ಚಲಾಯಿಸಲು ಹೋಗುವುದಕ್ಕೆ ಮೊದಲು ತಮ್ಮ 'ಹಸ್ತ' ಕಾಣದಂತೆ ಮುಚ್ಚಿಕೊಳ್ಳಬೇಕು ಅಥವಾ ತಮ್ಮ ಹಸ್ತಗಳನ್ನು ಕತ್ತರಿಸಿಕೊಳ್ಳಬೇಕು. ಅಲ್ಲದೇ ಚುನಾವಣಾ ಸಿಬ್ಬಂದಿ ಸಹಿತ ಹಸ್ತ ಪ್ರದರ್ಶಿಸಬಾರದು. ಕಾರಣ ನೀತಿ ಸಂಹಿತೆ ಪ್ರಕಾರ ಮತಗಟ್ಟೆ ಮತ್ತು ಪರಿಸರದಲ್ಲಿ ಚುನಾವಣೆ ಚಿಹ್ನೆಗಳನ್ನು ಪ್ರದರ್ಶಿಸುವಂತಿಲ್ಲ ಅಲ್ಲವೆ? ಈ ಬಗ್ಗೆ ಚುನಾವಣಾ ಆಯೋಗ ಏನು ಹೇಳುತ್ತದೆ?
-ಸಿ. ದಿನಮಣರಾವ್, ಮೈಸೂರು.
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com