ನ್ಯಾಯಾಲಯದ ತುರ್ತು ಸಲಹೆ
ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣಗಳಲ್ಲಿ ಆರೋಪಿಗಳ ವಿಚಾರಣೆ ನಡೆದು ಅಪರಾಧಿಗಳಿಗೆ ಕ್ಷಿಪ್ರಗತಿಯಲ್ಲಿ ಶಿಕ್ಷೆ ವಿಧಿಸಬೇಕೆನ್ನುವ ಕೂಗು ದೇಶದ ಎಲ್ಲ ಕಡೆ ಕೇಳಿಬಂದಿದೆ. ಆ ಉದ್ದೇಶದಿಂದ ಕಾಯಿದೆಯ ಬದಲಾವಣೆಯ ಪ್ರಯತ್ನವೂ ನಡೆದಿದೆ.
ಆದರೆ ಈಗಿರುವ ಪರಿಸ್ಥಿತಿ ಏನು? ರಾಜ್ಯ ಹೈಕೋರ್ಟಿನ ಪ್ರಕಾರ ಅತ್ಯಾಚಾರ, ಕೊಲೆ, ದರೋಡೆಗಳಂತಹ ಹೀನ ಕೃತ್ಯಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುವ ಪ್ರಕರಣಗಳಲ್ಲಿ ಶೇಕಡ 70 ರಷ್ಟು ಪ್ರಕರಣಗಳಲ್ಲಿ ಆರೋಪಿಗಳ ಖುಲಾಸೆಯಾಗುತ್ತಿದೆ.ಅದಕ್ಕೆ ಕಾರಣಗಳು ಹಲವಾರು. ಪ್ರಮುಖವಾಗಿ ವಿಚಾರಣೆಯಲ್ಲಿನ ವಿಪರೀತ ವಿಳಂಬ. ಇಂತಹ ಪ್ರಕರಣಗಳ ತನಿಖೆಯೇ ವರ್ಷಗಟ್ಟಲೆ ನಡೆದಿರುವುದೂ ಉಂಟು, ತನಿಖೆ ನಡೆಸುವ ಅಧಿಕಾರಿಗಳಿಗೆ ಸೂಕ್ತ ರೀತಿಯ ಶಿಕ್ಷಣದ ವ್ಯವಸ್ಥೆ ಇಲ್ಲದೇ ಇರುವುದರಿಂದ ಅನೇಕ ಸಂದರ್ಭಗಳಲ್ಲಿ ಸಾಕ್ಷ್ಯ ಸಂಗ್ರಹ ಪ್ರಕ್ರಿಯೆಯೇ ತಪ್ಪು ಎನ್ನುವಂತಹ ತೀರ್ಮಾನವಾಗಿರುವುದೂ ಉಂಟು.
ನ್ಯಾಯಾಲಯಗಳಲ್ಲಿ ಸರ್ಕಾರದ ಪರವಾಗಿ ನ್ಯಾಯಾದಾನಕ್ಕಾಗಿ ವಕೀಲಿ ನಡೆಸುವ ಅಭಿಯೋಜಕರ ಕೆಲಸದಲ್ಲಿ ದೋಷವಿರಲೂಬಹುದು. ಹಲವು ಸಂದರ್ಭಗಳಲ್ಲಿ ಭ್ರಷ್ಟಾಚಾರವೂ ತನ್ನ ಕೆಲಸವನ್ನು ಮಾಡಿರಲೂ ಬಹುದು.
ಕಾರಣ ಏನೇ ಇರಲಿ. ಇಂತಹ ಗಂಭೀರ ಪ್ರಕರಣಗಳಲ್ಲಿ ತನಿಖೆಯ ಲೋಪ ಅಥವಾ ಅಭಿಯೋಜಕರ ವಿಳಂಬ ನೀತಿಯ ಪರಿಣಾಮವಾಗಿ ಆರೋಪಿಗಳು ದೋಷಮುಕ್ತವಾಗುವಂತಹ ಸನ್ನಿವೇಶ ನಿಜವಾಗಲೂ ಅಸಹನೀಯ.
ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸುವುದು ಸರ್ಕಾರ. ಅಂದರೆ ಅಂತಹ ಪ್ರಕರಣಗಳಲ್ಲಿ ಆರೋಪ ರುಜುವಾತಾಗಿಲ್ಲ ಎಂದರೆ ಅದಕ್ಕೆ ಪ್ರಭುತ್ವವೇ ಜವಾಬ್ದಾರಿ. ಇಂತಹ ಪ್ರಕರಣಗಳಲ್ಲಿ ಎಲ್ಲಿ ತಪ್ಪಾಯಿತು ಎನ್ನುವ ವಿಚಾರದ ತನಿಖೆಗೆ ಸೂಕ್ತ ವ್ಯವಸ್ಥೆ ಸರ್ಕಾರದಲ್ಲಿ ಇರಲೇಬೇಕು. ಹಿಂದೆ ಅಭಿಯೋಜಕರ ಕೆಲಸ ಕುರಿತಂತೆ ಕಾಯಿದೆ ಇಲಾಖೆಗೆ ಕಾಲ ಕಾಲಕ್ಕೆ ವರದಿ ಸಲ್ಲಿಸಲಾಗುತ್ತಿತ್ತು.
ನ್ಯಾಯಾಲಯದಲ್ಲಿ ವಿಚಾರಣೆಯನ್ನು ಬಲವಾದ ಕಾರಣವಿಲ್ಲದೇ ಮುಂದಕ್ಕೆ ಹಾಕಿ ವಿಳಂಬ ರಾಕ್ಷಸನ ಹಾವಳಿಗೆ ಅವಕಾಶ ಮಾಡಿಕೊಡುವುದನ್ನು ಸರ್ಕಾರದ ಪರವಾಗಿರುವ ವಕೀಲರು ವಿರೋಧಿಸಬೇಕು. ಇಂತಹ ಸಲಹೆಗಳೂ ವಿಧಾನ ಮಂಡಲದಲ್ಲೂ ಬಂದಿವೆ. ಈಗ ಒಂದು ಪ್ರಕರಣದಲ್ಲಿ ಇಂತಹ ಪ್ರವೃತ್ತಿ ಹೈಕೋರ್ಟಿನ ಪೀಠದ ಕಣ್ಣಿಗೆ ಬಿದ್ದಂತಿದೆ. ಗಂಭೀರ ಪ್ರಕರಣಗಳಲ್ಲಿ ಕ್ಷಿಪ್ರ ನ್ಯಾಯದಾನಕ್ಕೆ ಅನುಕೂಲವಾಗುವಂತೆ ಸರ್ಕಾರ ಒಂದು ಯೋಜನೆಯನ್ನು ಸಿದ್ಧಪಡಿಸಿ, ಅದನ್ನು ಹೈಕೋರ್ಟಿಗೆ ಸಲ್ಲಿಸಬೇಕೆಂದು ಆದೇಶ ನೀಡಿದೆ.
ಕಾಯಿದೆ ಪಾಲನೆ ವ್ಯವಸ್ಥೆಯ ಯಶಸ್ಸನ್ನು ಅಳೆಯುವುದರಲ್ಲಿ, ಸಾಮಾನ್ಯವಾಗಿ ಸರ್ಕಾರಗಳು ಎಷ್ಟು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗಿತ್ತು ಎನ್ನುವ ಮಾನದಂಡವನ್ನು ಬಳಸುತ್ತೇವೆ. ಪ್ರತಿ ವರ್ಷ ಗೃಹ ಇಲಾಖೆ ಸಿದ್ಧಪಡಿಸುವ ಆಡಳಿತ ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸಲಾಗುತ್ತದೆ. ಆದರೆ ಈಚಿನ ದಿನಗಳಲ್ಲಿ ವಿಧಾನಮಂಡಲದ ಸದನಗಳಲ್ಲಿ ಗಂಭೀರವಾದ ಹಾಗೂ ಅಧ್ಯಯನ ಆಧರಿತ ಚರ್ಚೆಗಳೇ ನಡೆಯದೇ ಇರುವುದರಿಂದ ಕಾಯಿದೆ ಪಾಲನೆ ಎಂದರೆ ಹೆಚ್ಚು ಗಲಭೆ-ಗೊಂದಲ ದೊಂಬಿಗಳಾಗದಂತೆ ಸರ್ಕಾರ ನೋಡಿಕೊಂಡಿದೆ ಎಂದೇ ಅರ್ಥಬರುವ ರೀತಿಯ ವ್ಯಾಖ್ಯಾನವೂ ಇದೆ. ನಿಜ. ಕ್ರಿಮಿನಲ್ ಪ್ರಕರಣಗಳಲ್ಲಿ ಕ್ಷಿಪ್ರ ನ್ಯಾಯದಾನದ ವ್ಯವಸ್ಥೆಯನ್ನು ಜಾರಿಗೆ ತರುವುದು ಕಷ್ಟ. ತತ್ವಶಃ ಕ್ಷಿಪ್ರ ನ್ಯಾಯದಾನ ವ್ಯವಸ್ಥೆ ಅಗತ್ಯವೆಂದು ಸರ್ಕಾರ ಒಪ್ಪಿಕೊಂಡರೆ, ಅದಕ್ಕೆ ಬೇಕಾದ ಸಿಬ್ಬಂದಿ, ಸಿಬ್ಬಂದಿಗೆ ಶಿಕ್ಷಣ, ಯೋಗ್ಯ ಹಾಗೂ ಅರ್ಹ ವಕೀಲರೇ ಸರ್ಕಾರಿ ಅಭಿಯೋಜಕರಾಗಿ ಆಯ್ಕೆಯಾಗುವಂತಹ ಕ್ರಮಗಳನ್ನು ಒಪ್ಪಿಕೊಳ್ಳಬೇಕು. ಕರ್ನಾಟಕ ಹೈಕೋರ್ಟ್ ಈ ವಿಚಾರದಲ್ಲಿ ತನ್ನ ಚಿಂತನೆಯನ್ನು ಪ್ರಕಟಿಸಿದೆ. ಅದರ ಆಧಾರದ ಮೇಲೆ ಸೂಕ್ತ ಹಂದರವನ್ನು ರೂಪಿಸುವುದು ಸರ್ಕಾರಕ್ಕೆ ಸೇರಿದ ವಿಚಾರ.