ಪೊಲೀಸ್ ವಶಕ್ಕೆ ಜಿಲ್ಲಾಧಿಕಾರಿ
ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಜಿಲ್ಲಾಧಿಕಾರಿಯ ಹುದ್ದೆ ಬಹುಮುಖ್ಯವಾದದ್ದು. ಹಿಂದೆ ಜಿಲ್ಲಾಧಿಕಾರಿಗಳನ್ನು ಜಿಲ್ಲಾ ಧಣಿಗಳೆಂದೂ ಜನ ಕರೆಯುತ್ತಿದ್ದರು. ಈಗ ಎಲ್ಲ ಅಧಿಕಾರದ ಸ್ಥಾನಗಳೂ ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಸನ್ನಿವೇಶದಲ್ಲಿ, ಜಿಲ್ಲಾಧಿಕಾರಿಗಳ ಸ್ಥಾನವೂ ತನ್ನ ಹೊಳಪನ್ನು ಉಳಿಸಿಕೊಂಡಿಲ್ಲ.
ಆದರೂ ಬೆಂಗಳೂರು ಗ್ರಾಮೀಣ ಜಿಲ್ಲಾಧಿಕಾರಿ ಅಯ್ಯಪ್ಪ ಅವರನ್ನು ಒಂದು ಕ್ರಿಮಿನಲ್ ದೂರಿನ ತನಿಖೆಗೆಂದು ಲೋಕಾಯುಕ್ತ ನ್ಯಾಯಾಲಯ ಪೊಲೀಸರ ವಶಕ್ಕೆ ಕೊಡಬೇಕಾದ ಸನ್ನಿವೇಶ ನಿರ್ಮಾಣವಾಗಿರುವುದು ಅಸಹನೀಯ.
ಸರ್ಕಾರದ ದಾಖಲೆಗಳ ಭದ್ರತೆ ಜಿಲ್ಲಾಧಿಕಾರಿಯ ಕರ್ತವ್ಯ. ಈಗ ಲೋಕಾಯುಕ್ತ ನ್ಯಾಯಾಲಯದ ಮುಂದಿರುವ ದೂರು, ಜಿಲ್ಲಾಧಿಕಾರಿಯೇ ದಾಖಲೆಗಳನ್ನು ಬದಲಾಯಿಸಿ, ಸರ್ಕಾರಕ್ಕೆ ಸೇರಿದ ಗೋಮಾಳ ಪ್ರದೇಶವನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುವ ಪಿತೂರಿಯಲ್ಲಿ ಪಾಲುಗೊಂಡಿದ್ದರು ಎನ್ನುವುದು. ಈ ದೂರನ್ನು ಲೋಕಾಯುಕ್ತ ನ್ಯಾಯಾಲಯಕ್ಕೆ ಹದಿನೇಳು ಮಂದಿ ನೀಡಿದ್ದಾರೆ. ಬರೀ ದಾಖಲೆಗಳನ್ನು ಪರಿಶೀಲಿಸುವ ಕ್ರಮವೂ ನಡೆದಿದೆ. ಈಗ ನ್ಯಾಯಾಲಯ ಆ ಪ್ರಕರಣವನ್ನು ತನಿಖೆಗೆ ಪೊಲೀಸರಿಗೆ ಒಪ್ಪಿಸಿದೆ.
ಅಲ್ಲಿಗೇ ಆರೋಪ ರುಜುವಾತಾಯಿತು ಎಂದೇನೂ ಅಲ್ಲ. ಮೇಲ್ನೋಟಕ್ಕೆ ಇಂತಹ ಆರೋಪ ತಿರಸ್ಕಾರಕ್ಕೆ ಅರ್ಹವಲ್ಲವೆನ್ನುವ ಅನಿಸಿಕೆ ನ್ಯಾಯಾಧೀಶರಲ್ಲಿ ಮೂಡಿದೆ ಎನ್ನುವುದು ನಿಜ. ಒಬ್ಬ ಜಿಲ್ಲಾಧಿಕಾರಿಯೂ ಇಂತಹ ಪಿತೂರಿಯಲ್ಲಿ ಪಾಲುಗೊಂಡಿರಬಹುದೆನ್ನುವುದನ್ನು ಊಹಿಸಿಕೊಳ್ಳುವುದೂ ಕಷ್ಟ. ಈ ಪ್ರಕರಣದ ಕ್ಷಿಪ್ರ ವಿಚಾರಣೆ ಸಂಬಂಧಪಟ್ಟವರೆಲ್ಲರ ಹಿತದೃಷ್ಟಿಯಿಂದ ಅಗತ್ಯವಾಗಿದೆ.