ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Mainashree
Updated On : 15 Mar 2013, 11:44 am

ಸಂತೆಬೆನ್ನೂರಿನಿಂದ ಶಿಕ್ಷಕರಾದ ಫೈಜ್ನಟ್ರಾಜ್ ಅವರು ಬರೆಯುತ್ತಾರೆ- 'ಮಾ.3ರಂದು 'ಯೋಗಕ್ಷೇವು' ವಿಭಾಗದಲ್ಲಿ ಸಿಂಗಲ್ ಲೆಗ್ ಸ್ಕಾಟ್ ಬಗ್ಗೆ ಹೇಳುತ್ತಾ, 'ಒಂದೇ ಕಾಲಿನಲ್ಲಿ ನಿಂತುಕೊಳ್ಳಿ. ಬಳಿಕ ಗಾಳಿಯಲ್ಲಿರುವ ಕಾಲವನ್ನು ನಿಧಾನವಾಗಿ ಮುಂದಕ್ಕೆ ಚಾಚಿ' ಎಂದಿದೆ!'
'ಗಾಳಿಯಲ್ಲಿ ಲೀನವಾದ ಅಗೋಚರ ಕಾಲವನ್ನು ಯಕಃಶ್ಚಿತ್ ಮಾನವರಾದ ನಾವು ಚಾಚಬಲ್ಲೆವಾ? ಅದು ಮತ್ತೊಂದು ಕಾಲನ್ನು ಎಂದಿರಬೇಕಿತ್ತಲ್ಲವೇ? ಕಾಲವನ್ನು ತಡೆಯೋರು ಯಾರೂ ಇಲ್ಲಾ ಅಂತ ವಿಷ್ಣು-ದ್ವಾರ್ಕಿಯೇ ಹಾಡಿರುವಾಗ, ನಾವು-ನೀವು ಅದನ್ನು ಮುಂದಕ್ಕೆ ಚಾಚಲಾದೀತೇ?' ಎಂದಿದ್ದಾರೆ.
ಖಂಡಿತ ಕಾಲವನ್ನು ಮುಂದೆ ಚಾಚಲು ಸಾಧ್ಯವಿಲ್ಲ. ಯೋಗಕ್ಕೆ ಸಂಬಂಧಿಸಿದ ವಿಭಾಗವಾದ್ದರಿಂದ ಅದು 'ಕಾಲನ್ನು' ಎಂದಾಗಬೇಕಿತ್ತು. ಪತ್ರಿಕೆಯಲ್ಲಿ ಬರೆಯುವಾಗ 'ವನ್ನು', 'ಯನ್ನು' ಮುಂತಾದವುಗಳನ್ನು ಬಿಡಬೇಕು ಎಂಬುದನ್ನು ಬಹುತೇಕರು ಪಾಲಿಸುವುದಿಲ್ಲ. ಕೆಲವೊಮ್ಮೆ ಎಲ್ಲಿ ಅಗತ್ಯವಿರುತ್ತದೋ ಅಲ್ಲಿ ಬಿಟ್ಟುಬಿಡುತ್ತಾರೆ.
ಚಾಮರಾಜನಗರದಿಂದ ಎಂ.ಬಿ. ಕೃಷ್ಣಮೂರ್ತಿ ಅವರು ಬರೆಯುತ್ತಾರೆ- 'ಮಾ.9ರಂದು 'ಕನ್ನಡಪ್ರಭ' ಪುರವಣಿ 'ಬೈಟು ಕಾಫಿ'ಯ ಪುಟ 1ರಲ್ಲಿ ನೃತ್ಯಗಾತಿ ರಚನಾ ಮೌರ್ಯ ಅವರನ್ನು 'ಮೌರ್ಯ ಸಾಮ್ರಾಜ್ಯ' ಶೀರ್ಷಿಕೆಯ ಲೇಖನದಲ್ಲಿ ಪರಿಚಯಿಸುತ್ತ 'ದಕ್ಷಿಣ ಭಾರತೀಯ ಚಿತ್ರರಂಗದ ಮಟ್ಟಿದೆ, ಈಕೆಯೇ ನಂ.1 ನಾರಿ. ಐಟಂ ಹಾಡುಗಳಿಗೆ ಈಕೆ ಗಜ್ಜೆ ಕಟ್ಟಿನಿಂತರೆ ಕ್ಯಾಮರಾಗೂ ಚಳಿ ಮತ್ತು ಬಿಸಿ ಒಟ್ಟೊಟ್ಟಿಗೆ. ಚಿತ್ರ ರಸಿಕನ ಎದೆಯಲ್ಲೇನೋ ತಳಮಳ' ಎಂದು ಮುದ್ರಿತವಾಗಿದೆ. ಇದರಲ್ಲಿ ಆಗಿರುವ ತಪ್ಪೆಂದರೆ, 'ಮಟ್ಟಿದೆ' ಬದಲು 'ಮಟ್ಟಿಗೆ', 'ಗಜ್ಜೆ' ಬದಲು 'ಗೆಜ್ಜೆ' ಆಗಬೇಕಿತ್ತಲ್ಲವೇ?' ಎಂದಿದ್ದಾರೆ.
ತೀರ್ಥಹಳ್ಳಿಯಿಂದ ಕುತ್ಪಾಡಿ ಜಯಪ್ರಕಾಶ ಹೆಗ್ಡೆ ಅವರು ಬರೆಯುತ್ತಾರೆ- 'ಮಾ.5ರ ಪತ್ರಿಕೆಯಲ್ಲಿ (ಪುಟ 4) 'ಬಹಿರಂಗ ಪ್ರಚಾರಕ್ಕೆ ತೆರೆ' ಶಿರೋನಾಮೆಯಡಿಯಲ್ಲಿ 'ಫ್ಲೆಕ್ಸ್- ಬ್ಯಾನರ್ ಕಟ್ಟುವಂತಿಲ್ಲ ಹೀಗೆ ಹತ್ತಾರು ನಿಯಮ ಕಡ್‌ಡಾಯವಾಗಿ ಹೇರಿದೆ' ಎಂದಿದೆ. ಅದು ಕಡ್ಡಾಯ ಎಂದಾಗಬೇಕಿತ್ತು. ಮುಂದುವರಿದು 'ಸ್ವತಂತ್ರ ಅಭ್ಯರ್ಥಿಗಳು ಪ್ರಮುಖ ಪಕ್ಷಗಳಿಗೆ ಸೆಡ್‌ಡು ಹೊಡೆದು ಪ್ರಚಾರ ಮಾಡಿದ್ದಾರೆ' ಎಂದಿದ್ದಾರೆ. ಅದು 'ಸೆಡ್ಡು' ಎಂದಾಗಬೇಕಿತ್ತು.'
'ಮಾ.10ರ 'ಸಾಪ್ತಾಹಿಕ ಪ್ರಭ'ದಲ್ಲಿ 'ಕನ್ನಡ ಕಾಳಜಿ' ಕಾಲಂನಲ್ಲಿ ನಾ. ಮೊಗಸಾಲೆಯವರ ಅಭಿಪ್ರಾಯದಲ್ಲಿ 'ದೇವರನ್ನು ತಲೆಮೇಲೆ ಒತ್ತುಕೊಂಡು' ಎಂದು ಅಚ್ಚಾಗಿದೆ. ಅದು 'ಹೊತ್ತುಕೊಂಡು' ಎಂದಾಗಬೇಕಿತ್ತಲ್ಲವೇ?' ಎಂದಿದ್ದಾರೆ.
ಜಯಪ್ರಕಾಶ ಹೆಗ್ಡೆ ಅವರು ಪ್ರಸ್ತಾಪಿಸಿದ ಮೊದಲ ಸುದ್ದಿಗೆ ಸಂಬಂಧಿಸಿದಂತೆ ತಪ್ಪು ಬಹುಶಃ ನಮ್ಮ ಸಾಫ್ಟ್‌ವೇರ್‌ನಿಂದ ಆದದ್ದು. ವೆಬ್‌ಸೈಟ್ ಉಪಯೋಗಿಸಿ ಸುದ್ದಿ ಬರೆದ ಸಂದರ್ಭದಲ್ಲಿ ಒತ್ತಕ್ಷರಗಳು ಈ ರೀತಿಯಾಗುತ್ತವೆ. ಆದರೆ ಅದನ್ನು ಓದಿದ ಉಪಸಂಪಾದಕರು ಈ ತಪ್ಪನ್ನು ಸರಿಪಡಿಸಬೇಕಿತ್ತು.
ಇನ್ನು 'ಒತ್ತುಕೊಂಡು', 'ಏಳಿದರು' ಮುಂತಾದ ತಪ್ಪುಗಳು ಕೆಲವು ಪತ್ರಕರ್ತರಲ್ಲಿ ಸಹಜವಾಗಿಯೇ ಅಡಕವಾಗಿವೆ. ಅದು ಏಕೆ ಮತ್ತು ಹೇಗೆ ಎಂಬುದು ಬಹುಶಃ ಜಯಪ್ರಕಾಶ ಹೆಗ್ಡೆ ಅವರಿಗೂ ಗೊತ್ತಿದೆ.
- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement