ಸಂಪಾದಕೀಯ

ರಾಜರ ಆಜ್ಞೆಯನ್ನು ಮಾತ್ರ ಪಾಲಿಸುವೆ (ಹಿರಿಯರ ಹಾದಿ)

1915ರ ಸಮಯ. ನವೀನಂ ರಾಮಾನುಜಾಚಾರ್ಯ ಎಂಬ ಸಂಸ್ಕೃತ ವಿದ್ವಾಂಸರಿದ್ದರು. ವೇದೋಪನಿಷತ್ತುಗಳನ್ನವರು ಆಳವಾಗಿ ಅಧ್ಯಯನ ಮಾಡಿ ಅಪ್ರತಿಮ ಪಂಡಿತರೆಂದು ಹೆಸರು ಗಳಿಸಿದ್ದರು. ಅವರಲ್ಲಿ ಸಂಸ್ಕೃತ ಕಲಿಯಲು ಅನೇಕ ರಾಜಮಹಾರಾಜರುಗಳು ಅವರನ್ನು ತಮ್ಮ ಆಸ್ಥಾನಕ್ಕೆ ಕರೆಸಿಕೊಂಡಿದ್ದೂ ಇದೆ. ಉತ್ತರ ಭಾರತದ ಕೆಲವು ರಾಜರುಗಳ ಆಸ್ಥಾನ ವಿದ್ವಾಂಸರಾಗಿ ಸೇವೆ ಸಲ್ಲಿಸಿ ಕೊನೆಗೆ ಮೈಸೂರಿಗೆ ಬಂದು ನೆಲಸಿದರು. ಇವರ ಪಾಂಡಿತ್ಯ ಮತ್ತು ಜ್ಞಾನಕ್ಕೆ ತಲೆಬಾಗಿದ ಮೈಸೂರು ಮಹಾರಾಜ ನಾಲ್ಮಡಿ ಕೃಷ್ಣರಾಜ ಒಡೆಯರ್ ನವೀನಂ ಅವರಿಂದ ಸಂಸ್ಕೃತಾಭ್ಯಾಸ ಮಾಡಿದ್ದರು.
ಒಮ್ಮೆ ಉತ್ತರದೇಶದ ಸಂಸ್ಥಾನವೊಂದರ ರಾಜರ ಆಸ್ಥಾನದಲ್ಲಿದ್ದಾಗ ಅಲ್ಲಿನ ರೆಸಿಡೆಂಟ್ ಆಗಿದ್ದ ಫ್ರಾನ್ಸಿಸ್ ಯಂಗ್ ಹಸ್ಬೆಂಡ್ ದಂಪತಿ ಸಂಸ್ಕೃತ ಕಲಿಯಲು ಆಸಕ್ತಿ ತೋರಿಸಿದರು. ಆಗ ಅಲ್ಲಿನ ಸಂಸ್ಥಾನದ ಮಹಾರಾಜರು ತಮ್ಮ ಆಸ್ಥಾನದಲ್ಲಿದ್ದ ನವೀನಂ ಅವರನ್ನು ಈ ಕೆಲಸಕ್ಕಾಗಿ ನಿಯೋಜಿಸಿದ್ದರು. ಮುಂದೆ ಈ ಫ್ರಾನ್ಸಿಸ್, ರಾಯಲ್ ಜಿಯಾಗ್ರಫಿಕ್ ಸೊಸೈಟಿಯ ಅಧ್ಯಕ್ಷರೂ ಆದರು. ಎರಡು ವರ್ಷಗಳ ಕಾಲ ಈ ದಂಪತಿಗಳು ಅತ್ಯಂತ ಶ್ರದ್ಧೆಯಿಂದ ಸಂಸ್ಕೃತ ಕಲಿತು ಗ್ರಂಥಗಳನ್ನು ಓದುವ ಮಟ್ಟಿಗೆ ಜ್ಞಾನ ಸಂಪಾದಿಸಿದರು. ಒಂದು  ದಿನ ಸಂಸ್ಕೃತಾಭ್ಯಾಸ ಮುಗಿದ ಮೇಲೆ ಆ ಸಾಹೇಬರು, ತಾನು ದೀರ್ಘಕಾಲದ ರಜೆಯ ಮೇಲೆ ವಿಲಾಯಿತಿಗೆ ಹೋಗಲಿರುವುದರಿಂದ ತಾವು ನವೀನಂ ಅವರಿಗೆ ತಮ್ಮ ಕೃತಜ್ಞತೆಗಳನ್ನು ಅರ್ಪಿಸಬೇಕೆಂಬ ವಿಚಾರವನ್ನು ತಿಳಿಸಿದರು. ತಾವು ನೀಡುವ ಗುರುದಕ್ಷಿಣೆಯನ್ನು ಸ್ವೀಕರಿಸಬೇಕೆಂದು ವಿನಂತಿಸಿದರು. ಒಂದು ತಟ್ಟೆಯಲ್ಲಿ ಫಲತಾಂಬೂಲದ ಜೊತೆ ಐದುಸಾವಿರ ರುಪಾಯಿಗಳನ್ನು ಇಟ್ಟು ತೆಗೆದುಕೊಳ್ಳಲು ಮನವಿಮಾಡಿದರು. ಆದರೆ ರಾಮಾನುಜಾಚಾರ್ಯರು ಅವರು ನೀಡಿದ ಹಣವನ್ನು ಸ್ವೀಕರಿಸದೆ, 'ದಯಮಾಡಿ ಕ್ಷಮಿಸಬೇಕು. ನಾನು ನನ್ನ ರಾಜನ ಆಜ್ಞೆಯನ್ನು ಮಾತ್ರ ನಡೆಸಿಕೊಂಡು ಬಂದಿದ್ದೇನೆ. ತಮ್ಮಿಂದ ಯಾವ ಸಂಭಾವನೆಯನ್ನೂ ಸ್ವೀಕರಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ' ಎಂದುಬಿಟ್ಟರು. ಅರಮನೆಗೆ ಬಂದು ಎಲ್ಲ ವಿಚಾರಗಳನ್ನೂ ಮಹಾರಾಜನಿಗೆ ವರದಿ ಮಾಡಿದರು. ಅದಕ್ಕೆ ರಾಜನು ತುಂಬಾ ಸಂತೋಷಪಟ್ಟು, ಪಂಡಿತರೇ ನೀವು ಅವರಿಂದ ಸಂಭಾವನೆ ಪಡೆಯದೆ ನಮ್ಮ ಗೌರವವನ್ನು ಕಾಪಾಡಿದಿರಿ ಎಂದು ತುಂಬಾ ಶ್ಲಾಘಿಸಿದ್ದೇ ಅಲ್ಲದೆ, ತಾವೇ ಸ್ವತಃ ಒಂದು ತಟ್ಟೆಯಲ್ಲಿ ಹತ್ತು ಸಾವಿರ ರುಪಾಯಿಗಳನ್ನು ಫಲತಾಂಬೂಲದ ಜೊತೆಗೆ ಕಾಣಿಕೆಯಾಗಿ ನೀಡಿದರು.ಇದು ಆಗಿನ ಕಾಲಕ್ಕೆ ಬಹುದೊಡ್ಡ ಮೊತ್ತವಾಗಿತ್ತು. ನಂತರ ನವೀನಂ ಅವರು ಮೈಸೂರಿಗೆ ಬಂದು ವಿವಾಹವಾಗಿ ಇಲ್ಲಿಯೇ ನೆಲೆಸಿದರು. ತಾವು ಗಳಿಸಿದ ಹಣವನ್ನು ಅನೇಕ ಧರ್ಮಕಾರ್ಯಗಳಿಗೆ ವಿನಿಯೋಗಿಸಿ ಜೀವನ ಸಾರ್ಥಕ್ಯವನ್ನು ಪಡೆದರು.


 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Delhi CJP Protest: ಅಭಿಜೀತ್ ದೀಪ್ಕೆ, ಸೌರವ್ ದಾಸ್, ಆಶುತೋಷ್ ರಂಕಾ,ಯೂಟ್ಯೂಬರ್ ಧ್ರುವ್ ರಾಠಿ ಸೇರಿ 200ಕ್ಕೂ ಹೆಚ್ಚು ಮಂದಿ ಪೊಲೀಸ್ ವಶಕ್ಕೆ; Video

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

‘ಪ್ರೇಮದ ಊರಲಿ’ ಭರ್ಜರಿ ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 39 ಕೋಟಿ ರೂ. ಗಳಿಕೆ!

‘ಕಾನೂನು ಸುವ್ಯವಸ್ಥೆಗೆ ಗಂಭೀರ ಅಪಾಯವಿದೆ’: ಸಿಜೆಪಿ ಪ್ರತಿಭಟನೆಗೆ ಕೆಲವೇ ಗಂಟೆ ಮೊದಲು ರಾಜ್ಯಗಳಿಗೆ ಪತ್ರ ಬರೆದು MHA ಹೇಳಿದ್ದೇನು?

ನವೆಂಬರ್‌ನಲ್ಲಿ ಕರ್ನಾಟಕ ಬಿಜೆಪಿಗೆ ಮೇಜರ್ ಸರ್ಜರಿ: ಬಿವೈ ವಿಜಯೇಂದ್ರ, ಆರ್ ಅಶೋಕಗೆ ಗೇಟ್ ಪಾಸ್?; ಹೊಸ ಮುಖಗಳಿಗೆ ಮಣೆ!