ತಪ್ಪಾಯ್ತು ತಿದ್ಕೋತೀವಿ
ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- 'ಮಾ.16ರ ಸಂಚಿಕೆಯ ಪುಟ 10ರಲ್ಲಿರುವ 'ಖರೆ ಮಾತು' ಖರೆಯಲ್ಲವೇನೋ ಎಂದು ಬರೆಯಲೇ ಬೇಕಾಯಿತು. ಕೆಲವಾರು ಪ್ರಾಣಿಗಳು ಜನಿಸುವ ಸಂದರ್ಭದಲ್ಲಿ ಅವುಗಳ ಕಣ್ಣರೆಪ್ಪೆಗಳು ತೆರೆದಿರುವುದಿಲ್ಲ. ನಾಯಿಮರಿಗಳು, ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿಗಳಲ್ಲಿ ಹುಟ್ಟುವಾಗ ಕಣ್ಣರೆಪ್ಪೆಗಳು ಒಂದಕ್ಕೊಂದು ಬೆಸೆದುಕೊಂಡಿರುತ್ತವೆ.'
'ನನ್ನ ಅಭಿಪ್ರಾಯ ತಪ್ಪಲ್ಲದಿದ್ದರೆ ಈ ಶಿಶುಗಳಿಗೆ ಸೂರ್ಯ ಕಿರಣಗಳನ್ನು ಎದುರಿಸುವ ಸಾಮರ್ಥ್ಯವಿನ್ನೂ ಕೂಡಿ ಬಂದಿಲ್ಲದಿರುವುದರಿಂದ ರೆಪ್ಪೆಗಳು ಸೇರಿಕೊಂಡಿರುವುದು ಇರಬೇಕು! ಆ ಕಾರಣದಿಂದ ಅವುಗಳಿಗೆ ಲೋಕ ಕಾಣುವುದಿಲ್ಲ. ಇದನ್ನು ಕುರುಡಾಗಿರುತ್ತವೆ ಎಂಬುದು ಸರಿಯಲ್ಲ. ಆದ್ದರಿಂದಲೇ ಹುಟ್ಟಿ ಕೆಲ ದಿನಗಳವರೆಗೆ ಹುಲಿ, ನಾಯಿ, ಬೆಕ್ಕುಗಳು ತಮ್ಮ ಶಿಶುವನ್ನು ಬಾಯಲ್ಲಿ ಕಚ್ಚಿ ಹಿಡಿದುಕೊಂಡು ದಿನದಿನವೂ ಸ್ಥಳ ಬದಲಾವಣೆ ಮಾಡುತ್ತವೆ. ಹುಟ್ಟಿ ಒಂದು ವಾರ ಹುಲಿಮರಿಗಳ ರೆಪ್ಪೆಗಳು ಬೆಸೆದಿರುತ್ತವೆ ಎಂಬುದು ಖರೆ ಮಾತು.'
"ತಪ್ಪಾಯ್ತು ತಿದ್ಕೋತೀವಿ' ಅಂಕಣಕ್ಕೆ ಬರೆಯುವಾಗ ತುಂಬಾ ಎಚ್ಚರಿಕೆಯಿಂದಿರಬೇಕು. ಮಾ.18ರಂದು ಈ ಅಂಕಣದಲ್ಲಿ ಬೆಟ್ಟದಪುರದಿಂದ ಬಿ.ಕೆ. ಶ್ರೀಕಾಂತ್ ಅವರು 'ಅಂತಾರಾಷ್ಟ್ರೀಯ' ಬಳಕೆಯ ಬಗೆಗೆ ತಕರಾರು ಎತ್ತಿದ್ದಾರೆ. 'ಅಂತಾರಾಷ್ಟ್ರೀಯ' ಎಂಬುದೇ ಶುದ್ಧರೂಪ. ಸಂಸ್ಕೃತದ ವಿಸರ್ಗ ಸಂಧಿಯಲ್ಲಿ ವಿಸರ್ಗದ ಮುಂದೆ 'ರ' ಅಕ್ಷರ ಬಂದಾಗ ವಿಸರ್ಗದ ಹಿಂದಿರುವ ಸ್ವರ ದೀರ್ಘವಾಗುವುದು ಶಾಸ್ತ್ರೀಯ ನಿಯಮ. ಅಂತಃ ರಾಷ್ಟ್ರೀಯ = ಅಂತಾರಾಷ್ಟ್ರೀಯ ಎಂದಾಗಬೇಕೇ ವಿನಾ ಅಂತರರಾಷ್ಟ್ರೀಯ, ಅಂತರಾಷ್ಟ್ರೀಯ ಎಂಬ ರೂಪಗಳು ಬಳಕೆಯಲ್ಲಿದ್ದರೂ ಅವು ಸಾಧುವಲ್ಲ. ಇದಕ್ಕಿಂತ ಬೇರೆಯದೇ ಸಂಗತಿ ಚರ್ಚಾಸ್ಪದ. ರಾಷ್ಟ್ರೀಯ ಮಟ್ಟದ ಸಭಾಂಗಣ, ರಾಜ್ಯ ಮಟ್ಟದ ಸಭಾಂಗಣ, ಲೋಕಲ್ ಮಟ್ಟದ ಸಭಾಂಗಣ, ತಾಲೂಕು ಮಟ್ಟದ ಸಭಾಂಗಣ ಎಂಬ ಬಳಕೆ ಇದೆಯೆ!' ಎಂದಿದ್ದಾರೆ.
ಕ್ರೀಡಾಂಗಣದ ಗುಣಮಟ್ಟದ ಆಧಾರದಲ್ಲಿ ಅಂತಾರಾಷ್ಟ್ರೀಯಮಟ್ಟ, ರಾಷ್ಟ್ರೀಯ ಮಟ್ಟ, ರಾಜ್ಯಮಟ್ಟ ಎಂಬ ವಿಭಾಗಗಳಿವೆ. ಅಂತಾರಾಷ್ಟ್ರೀಯ ಪಂದ್ಯಾವಳಿಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟದ ಮೈದಾನಗಳಲ್ಲಿ ಮಾತ್ರ ಆಯೋಜಿಸಲಾಗುತ್ತದೆ. ರಾಷ್ಟ್ರಮಟ್ಟದ ಪಂದ್ಯಾವಳಿಗಳನ್ನು ರಾಜ್ಯ ಮಟ್ಟದ ಮೈದಾನಗಳಲ್ಲಿ ಮಾತ್ರ ಆಡಿಸಲಾಗುತ್ತದೆ.
ಆದರೆ ಇತ್ತೀಚೆಗೆ ಸಭಾಂಗಣ ಮತ್ತು ವಿಚಾರಸಂಕಿರಣಗಳಲ್ಲೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಗಳು ಸೇರಿಕೊಂಡಿವೆ. ಎಲ್ಲಿ ನೋಡಿದರೂ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳು. ಅಲ್ಲಿ ಮಾತನಾಡುವವರು ಮಾತ್ರ ಅದೇ ಸ್ಥಳೀಯರು. ಭಾಗವಹಿಸುವವರು ಕೂಡ ಸ್ಥಳೀಯರೇ. ಹಾಗೆ ಇಂತಹ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ನಡೆಸಬೇಕಾದರೆ, ಸಭಾಂಗಣದ ಹೆಸರೂ ಅದಕ್ಕೆ ತಕ್ಕಂತೆ ಇರಬೇಕಲ್ಲವೇ? ಅದಕ್ಕಾಗಿ ಸಭಾಂಗಣಗಳಿಗೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಎಂಬ ಬಿರುದುಗಳನ್ನು ಅಂಟಿಸಲಾಗುತ್ತದೆ. ಇವು ಆಯೋಜಕರು ಅಥವಾ ಸಭಾಂಗಣ ನಿರ್ಮಾಪಕರು ಅಂಟಿಸಿದ ಬಿರುದುಗಳು. ಮಾಧ್ಯಮಗಳ ಪಾತ್ರವೇನೂ ಇಲ್ಲ.
- ವಿಶ್ವೇಶ್ವರ ಭಟ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.