ಒಂದಿಷ್ಟು ಸಲಹೆ
ಸಮಯ ಬದಲಾಗಿದೆ. ಪಾಲಿಕೆಯ ಗದ್ದುಗೆ ಹಿಡಿಯಲು ಮತದಾರರು ಯಾವ ಪಕ್ಷಕ್ಕೂ ಬಹುಮತ ನೀಡಿಲ್ಲ. ನೀವೆಲ್ಲರೂ ಹೇಗೆ ಗೆದ್ದು ಬಂದಿರಿ ಎನ್ನುವುದರ ಬಗ್ಗೆ ಈಗ ವ್ಯಾಖ್ಯಾನ ಮಾಡುವುದು ಸಂದರ್ಬೋಚಿತವಲ್ಲ. ಆದರೆ ನಾವು ಹಿಂದಿನ ದಿನಗಳಲ್ಲಿ ಕಂಡ ಬಹಳಷ್ಟು ಚುನಾಯಿತ ಪ್ರತಿನಿಧಿಗಳಿಗೆ ಅವರ ಹಕ್ಕುಗಳು, ಜವಾಬ್ದಾರಿಗಳು ಮತ್ತು ಭಾಧ್ಯತೆಗಳ ಬಗ್ಗೆ ಗುಣಮಟ್ಟದ ಅರಿವಿಲ್ಲದಿರುವುದನ್ನು ಗಮನಿಸಿದ್ದೇವೆ. ಆದುದರಿಂದ ದಯವಿಟ್ಟು ತಾವುಗಳು ಈ ಕೆಳ ಕಂಡ ಸಲಹೆಗಳನ್ನು ಸ್ವೀಕರಿಸಿ, ಗಮನದಲ್ಲಿಟ್ಟುಕೊಂಡು ಶ್ರಮಿಸುವಿರೆಂದು ನಂಬುತ್ತೇನೆ. ನಗರ ಪಾಲಿಕೆ ಯಾ ಸ್ಥಳೀಯ ಸಂಸ್ಥೆಗಳ ನಿಮ್ಮ ವಾರ್ಡಿನಲ್ಲಿ/ವ್ಯಾಪ್ತಿಯಲ್ಲಿ ಯಾವ ಯಾವ ನ್ಯೂನತೆಗಳಿವೆ ಎನ್ನುವ ಮಾಹಿತಿಯನ್ನು ಸಾರ್ವಜನಿಕರಿಂದ ತಕ್ಷಣ ಸಂಗ್ರಹಿಸಿ (ವೋಟು ಕೇಳಲು ಹೋಗಿದ್ದಿರಲ್ಲ, ಅದೇ ತರಹ), ಪಾಲಿಕೆ/ ಸ್ಥಳೀಯ ಸಂಸ್ಥೆಗಳು ಹೇಗೆ ನಡೆಯುವವು ಎನ್ನುವುದರ ಮತ್ತು ಅವುಗಳ ನಡವಳಿಕೆಗಳ, ವಿಧಿ ವಿಧಾನಗಳ ಬಗ್ಗೆ ಅರಿಯಲು ಬೇಕಾದ ಮಾಹಿತಿಗಳನ್ನು ಪಡೆದು ಅವುಗಳ ಅಧ್ಯಯನ ಮಾಡಿ, ಅರ್ಥವಾಗದಿದ್ದರೆ, ಬಲ್ಲವರಿಂದ ಕೇಳಿ ತಿಳಿಯಿರಿ.ಸಭೆಗಳಲ್ಲಿ ಹೇಗೆ ಗಂಭೀರವಾಗಿ, ವಿನಯದಿಂದ ಮತ್ತು ಸಭ್ಯತೆಯಿಂದ ವರ್ತಿಸಬೇಕು ಎನ್ನುವುದನ್ನು ಯಾವ ಸಮಯದಲ್ಲೂ ಮರೆಯಬೇಡಿ ಮತ್ತು ನೀವು ಆಡುವ ಭಾಷೆಯ ಬಗ್ಗೆ ನಿಗಾ ಇರಲಿ. ನಿಮ್ಮ ವಾರ್ಡಿನ ಜನರು ನೀವು, ಚುನಾವಣೆಗೂ ಮುನ್ನ ಇಲ್ಲಿಯವರೆಗೂ ಹೇಗೆ ಇದ್ದಿರಿ ಎನ್ನುವುದನ್ನು ಗಮನಿಸಿದ್ದಾರೆ ಅನ್ನುವುದನ್ನು ಎಂದಿಗೂ ಮರೆಯಬೇಡಿ ಮತ್ತು ನಿಮ್ಮ ಜೀವನ ಶೈಲಿಯಲ್ಲಿ ಮುಂದೆ ಆಗುವ ಬದಲಾವಣೆಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ ಎನ್ನುವುದನ್ನೂ ಮರೆಯಬೇಡಿ. ಹಿಂದಿನ ದಿನಗಳಲ್ಲಿ ಸಾಕಷ್ಟು ಸದಸ್ಯರುಗಳು ಸಾರ್ವಜನಿಕರ ತೆರಿಗೆ ಹಣದಿಂದ ವಿದೇಶ ಪ್ರವಾಸಗಳನ್ನು ಕೈಕೊಂಡು, ವಾಪಸ್ ಬಂದ ಮೇಲೆ ಯಾವ ವಿಧವಾದ ಸೌಕರ್ಯಗಳನ್ನೂ ಅಭಿವೃದ್ಧಿ ಪಡಿಸಿಲ್ಲ. ವಿದೇಶಕ್ಕೆ ಹೋಗಲು ಹಾತೊರೆಯುವುದನ್ನು ಬಿಟ್ಟು, ಕೊಪ್ಪಲುಗಳ, ಕೇರಿಗಳ ಮತ್ತು ಮೊಹಲ್ಲಗಳಲ್ಲಿ ಪ್ರವಾಸ ಕೈಗೊಳ್ಳಿ.
- ವಸಂತಕುಮಾರ್ ಮೈಸೂರುಮಠ, ತಿಲಕ್ ನಗರ, ಮೈಸೂರು
ಸಾರಿಗೆ ಸಚಿವರೇ ಇತ್ತ ಗಮನಹರಿಸಿ
ಗುಲ್ಬರ್ಗಾ ಕ್ಷೇತ್ರಕ್ಕೆ ಒಳಪಡುವ ಅಫಜಲ್ಪುರ್ ತಾಲೂಕಿನ ಅವರಳ್ಳಿ ಗ್ರಾಮದಲ್ಲಿ ಸಾರಿಗೆ ಸಂಚಾರ ಇಲ್ಲದೆ ಜನರು ಕಷ್ಟಕರದ ಪ್ರಯಾಣ ಮಾಡುವ ದುರದೃಷ್ಟಕರ ಸಂಗತಿ ಎದುರಾಗಿದೆ. ಇದರಿಂದ ಇಲ್ಲಿನ ಜನರು ತಮ್ಮ ಕೆಲಸ ಕಾರ್ಯಗಳಿಗೆ ಹೋಗಲು ಆಟೋಗಳಿಗೆ, ಕ್ರೂಸರ್ಗಳಿಗೆ ದುಪ್ಪಟ್ಟು ದುಡ್ಡು ಕೊಡಬೇಕಾಗಿದೆ. ವಾಹನಗಳು ಸ್ಥಗಿತಗೊಂಡರೆ ಆದಿನ ಪೂರ್ತಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮನೆಯಲ್ಲೆ ಕೂಳಿತುಕೊಳ್ಳಬೇಕಾಗಿದೆ. ಇಲ್ಲಾ ನಡೆದುಕೊಂಡು ಹೋಗುವ ಪರಸ್ಥಿತಿ ಎದುರಾಗಿದೆ. ಇದರಿಂದ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲಾ-ಕಾಲೇಜುಗಳಿಗೆ ಹೋಗುವುದಕ್ಕೆ ಆಗುತ್ತಿಲ್ಲ. ಮಳೆ ಬಂದರೆ ಶಾಲೆಯನ್ನು ನೋಡಲು ಆಗುವುದಿಲ್ಲ.ಪರಿಣಾಮವಾಗಿ ಕಲಿಕೆ ಕುಂಠಿತಗೊಳ್ಳುತ್ತಿದೆ. ಇನ್ನು ಬಾಣಂತಿಯರು, ತುರ್ತು ಚಿಕಿತ್ಸೆಗೆ ಒಳಗಾದವರು, ರೋಗಿಗಳು ಎಷ್ಟರ ಮಟ್ಟಿಗೆ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. 21ನೇ ಶತಮಾನದಲ್ಲಿ ದೇಶ ಇಷ್ಟೆಲ್ಲ ಮುಂದುವರಿದಿರುವಾಗ ಗ್ರಾಮಗಳಿಗೆ ಬಸ್ ಸಂಚಾರ ಸರಿಯಾಗಿ ಇರಬೇಕಲ್ಲವೇ? ಇಲ್ಲದೆ ಇರುವಾಗ ಗ್ರಾಮಗಳು ರಾಮರಾಜ್ಯವಾಗಲು ಸಾಧ್ಯವೇ? ಹೀಗಿರುವಾಗ ಸಾರಿಗೆಗಳು ಸುಗಮವಾಗಿ ಹಳ್ಳಿಗಳನ್ನು ತಲುಪಿ ಉತ್ತಮ ಸೇವೆ ಒದಗಿಸಿತ್ತಿವೆ ಎಂದು ಹೇಳುವುದು ನ್ಯಾಯವೇ? ಆದ ಕಾರಣ ಸಾರಿಗೆ ಸಚಿವರು ಇತ್ತ ಕಡೆ ಗಮನಹರಿಸಿ ಕೂಡಲೆ ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಸಿಕೊಟ್ಟು, ಸಾರ್ವಜನಿಕರಿಗಾಗುವ ತೊಂದರೆಯನ್ನು ಪರಿಹರಿಸಬೇಕಾಗಿದೆ.
- ಶರಣು.ಎನ್.ಕೆ ಕಾಡಮಗೇರಾ, ಯಾದಗಿರಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.