ಜೋಶಿ: ಅನಿವಾರ್ಯದ ಆಯ್ಕೆ
ಕೊನೆಗೂ ಭಾರತೀಯ ಜನತಾ ಪಾರ್ಟಿಯ ವರಿಷ್ಠರು ಸಂಘ ಪರಿವಾರದ ಕಟ್ಟರ್ ಸದಸ್ಯ, ಧಾರವಾಡದ ಲೋಕಸಭೆ ಸದಸ್ಯ ಪ್ರಹ್ಲಾದ ಜೋಶಿ ಅವರನ್ನು ಪಕ್ಷದ ಪ್ರದೇಶ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿರುವುದು ಅನಿವಾರ್ಯತೆಯ ಸುಳಿಯಲ್ಲಿ ಸಿಕ್ಕಿ ಬಿದ್ದವರ ವರ್ತನೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
ಜೋಷಿ ಅವರಿಗೆ ಪಕ್ಷದ ಅಧ್ಯಕ್ಷರಾಗಲು ಎಲ್ಲ ಬಗೆಯ ಅರ್ಹತೆಯೂ ಇರಬಹುದು. ಆದರೆ ರಾಜ್ಯದಲ್ಲಿ ಪಕ್ಷ ಹೋಳಾಗಿರುವ ಸಂದರ್ಭದಲ್ಲಿ, ಜಾತಿ ಹಾಗೂ ಪ್ರಾದೇಶಿಕ ಪ್ರಾತಿನಿಧ್ಯದ ಪ್ರಶ್ನೆಯೇ ದೊಡ್ಡದಾಗಿರುವಾಗ, ರಾಜಕೀಯವಾಗಿ ದುರ್ಬಲವಾದ ಸಮಾಜಕ್ಕೆ ಸೇರಿದವರನ್ನು ಸಮರದ ಸೇನಾನಿಯಾಗಿ ನೇಮಿಸುವುದು ನಿಜ ರಾಜಕೀಯದ ವಸ್ತುಸ್ಥಿತಿಯನ್ನು ಅರಿತವರಿಗೆ ವಾಸ್ತವಿಕ ನೆಲಗಟ್ಟಿನ ಸ್ಥಿತಿ ಗತಿ ಆಧಾರದ ನಿರ್ಧಾರ ಎನಿಸುವುದಿಲ್ಲ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರೂ ಹುಬ್ಬಳ್ಳಿ - ಧಾರವಾಡ ಸೀಮೆಯವರೇ. ಪಕ್ಷಕ್ಕೆ ಈಗ ಲಭ್ಯವಾಗಿರುವ ಎರಡು ಪ್ರಮುಖ ಸ್ಥಾನಗಳನ್ನೂ ಒಂದೇ ಊರಿನ ಇಬ್ಬರು ನಾಯಕರಿಗೇ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆಯೂ ಪಕ್ಷದಲ್ಲೇ ಚರ್ಚೆಯಾಗುತ್ತಿರುವಂತಹ ವಿಷಯ.
ನಿಜ. ಪ್ರಹ್ಲಾದ ಜೋಶಿ ಅವರ ಸುತ್ತ ಮುತ್ತ ಯಾವ ವಿವಾದವೂ ಇಲ್ಲ. ಭ್ರಷ್ಟಾಚಾರದ ಆರೋಪಗಳ ಸೋಂಕೂ ಇಲ್ಲ. ಮುಖ್ಯಮಂತ್ರಿ ಶೆಟ್ಟರ್ ಅವರ ಜತೆ ಮಧುರವಾದ ಬಾಂಧವ್ಯವನ್ನೂ ಇಟ್ಟುಕೊಂಡಿದ್ದಾರೆ. ಇವೆಲ್ಲವೂ ಅವರ ಆಯ್ಕೆಯನ್ನು ಸಮರ್ಥಿಸಬಹುದು. ಆದರೆ ಚುನಾವಣೆಯ ಹಲ್ಲಾಹಲ್ಲಿ ರಾಜಕೀಯವನ್ನು ಪ್ರಹ್ಲಾದ ಜೋಶಿ ಯಾವ ರೀತಿ ನಿಭಾಯಿಸುತ್ತಾರೆ ಎನ್ನುವುದು ಈಗ ಮುಖ್ಯ. ಮತ್ತೆ ಕರ್ನಾಟಕ ಬಿಜೆಪಿ ಸಾಮೂಹಿಕ ನಾಯಕತ್ವದ ಸಿದ್ಧಾಂತವನ್ನು ಒಪ್ಪಿದಂತೆ ಆಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.