ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಬಜೆಟ್ ಅಂಗೀಕಾರದ ವೈಖರಿ

Parashurama
Updated On : 22 Mar 2013, 9:59 am

ಮುಂದಿನ ವರ್ಷದ ಬಜೆಟ್ ಅಂಗೀಕಾರದ ವಿಧಿ-ವಿಧಾನಗಳಲ್ಲಿ ಒಂದು ಪ್ರಮುಖ ಹಂತ ರಾಜ್ಯಸಭೆಯಲ್ಲಿನ ಸಾಮಾನ್ಯ ಚರ್ಚೆ. ಈ ವರ್ಷ ರಾಜ್ಯಸಭೆ ಈ ಹೆಜ್ಜೆಯನ್ನು ದಾಟಿದೆ. ಯಾವುದೇ ರೀತಿಯ ಚರ್ಚೆಯೂ ಇಲ್ಲದೇ ಬಜೆಟ್ ಅಂಗೀಕಾರವಾಗಿ ಲೇಖಾನುದಾನ ವಿಧೇಯಕವನ್ನು ಲೋಕಸಭೆಗೆ ನಿಯಮದಂತೆ ಕಳುಹಿಸಲಾಗಿದೆ.
ರಾಜ್ಯಸಭೆಯಲ್ಲಿ ಬಜೆಟ್ ಮೇಲೆ ಚರ್ಚೆ ಆಗಲಿಲ್ಲವೇಕೆ? ಅಧಿಕೃತವಾಗಿ ಕೊಟ್ಟಿರುವ ಕಾರಣ ಸಮಯದ ಅಭಾವ. ಹಾಗೆಂದರೇನರ್ಥ? ಬಜೆಟ್ ಚರ್ಚೆಗೆಂದು ಗೊತ್ತುಪಡಿಸಲಾಗಿದ್ದ ದಿನಗಳಲ್ಲಿ, ಸದನದ ಕಾರ್ಯಕಲಾಪದಲ್ಲಿ ಇತರೆ ವಿಚಾರಗಳ ಪ್ರಸ್ತಾಪವಾಗಿದ್ದರಿಂದ ಕೊನೆಯಲ್ಲಿ ಸದನ ಸಮಾವೇಶಗೊಂಡ ಉದ್ದೇಶಕ್ಕೇ ಭಂಗ ಬಂದಂತೆ ಆಗಿದೆ.
ರಾಜ್ಯಸಭೆ ಹಿರಿಯರ ಸಭೆ. ಅದಕ್ಕಿಂತಲೂ ಹೆಚ್ಚಾಗಿ ಸದನದ ಸದಸ್ಯರಲ್ಲಿ ನಾಮಕರಣ ಸದಸ್ಯರನ್ನು ಬಿಟ್ಟರೆ ಉಳಿದವರೆಲ್ಲರೂ ಆಯಾ ರಾಜ್ಯಗಳ ವಿಧಾನ ಸಭೆಗಳಿಂದ ಆಯ್ಕೆಯಾದವರು. ಆ ಸದಸ್ಯರ ಅಭಿಪ್ರಾಯದಲ್ಲಿ ರಾಜ್ಯದ ಜನರ ಅಭಿಪ್ರಾಯದ ಛಾಯೆ ಇರುತ್ತದೆ. ರಾಜ್ಯಸಭೆಯ ಸ್ವರೂಪವನ್ನು ಗಮನಿಸಿದರೆ, ಅಲ್ಲಿ ಆರ್ಥಿಕ ತಜ್ಞರೂ ಇರುತ್ತಾರೆನ್ನುವುದನ್ನು ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಸಂಸತ್ತಿನಲ್ಲಿ ರಾಜ್ಯಗಳ ಜನರ ಅಭಿಪ್ರಾಯದ ಪ್ರಕಟಣೆಗೆ ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದಲೇ ರಾಜ್ಯಸಭೆಯ ರಚನೆಗೆ ಸಂವಿಧಾನ ರಚನಾ ಸಮಿತಿ ಒಪ್ಪಿಗೆ ನೀಡಿದ್ದು.
ದೈನಂದಿನ ರಾಜಕೀಯದ ರಗಳೆಗಳು, ಜಗಳಗಳಿಂದ ದೂರವಾಗಿ, ಸಾಧ್ಯವಿರುವಷ್ಟೂ ನಿರ್ವಿಕಾರದ ಮನೋಧರ್ಮದಿಂದ ದೇಶದ ಸಮಸ್ಯೆಗಳನ್ನು ಕುರಿತ ಗಂಭೀರ ಚರ್ಚೆಗೆ ರಾಜ್ಯಸಭೆಯೇ ಸರಿಯಾದ ವೇದಿಕೆ. ಅನೇಕ ವರ್ಷಗಳಲ್ಲಿ ರಾಜ್ಯ ಸಭೆಯಲ್ಲಿ ನಡೆದ ಚರ್ಚೆಗೆ ವಿತ್ತಮಂತ್ರಿ ನೀಡಿದ ಉತ್ತರವೇ ಆರ್ಥಿಕ ನೀತಿ ನಿರೂಪಣೆಯಲ್ಲಿ ನಿರ್ಣಾಯಕವಾಗಿದ್ದ ಉದಾಹರಣೆಯೂ ಇದೆ. ಆದರೆ ಸಂಸತ್ತಿನಲ್ಲೇ ಗಂಭೀರ ವಿಚಾರಗಳ ಮೇಲಿನ ಚರ್ಚೆಯಲ್ಲಿ ಅಧ್ಯಯನ ಹಾಗೂ ಅನುಭವ ಆಧರಿತ ಗಮನಾರ್ಹವಾದ ಭಾಷಣಗಳೇ ಕಡಿಮೆಯಾಗುತ್ತಿರುವಾಗ, ರಾಜ್ಯಸಭೆಯಲ್ಲೂ ಅದೇ ಸ್ಥಿತಿ ಕಂಡು ಬರುತ್ತಿರುವುದು ಶೋಚನೀಯವಾದ ವಿಚಾರ.
ದೈನಂದಿನ ಸಮಸ್ಯೆಗಳನ್ನು ಕುರಿತಂತೆ ಪಕ್ಷ- ವಿಪಕ್ಷಗಳ ನಡುವೆ ಜಗಳಗಳು ಪ್ರತಿನಿತ್ಯ ನಡೆಯುವುದು ಅನಿವಾರ್ಯ ಎನ್ನುವುದಾದರೆ ಅದನ್ನು ಜನಸಾಮಾನ್ಯರಿಂದ ಚುನಾಯಿತರಾಗುವ ಸದಸ್ಯರ ಲೋಕಸಭೆಗೇ ಬಿಟ್ಟು ರಾಜ್ಯಸಭೆಯನ್ನು ನಿಜವಾದ ಅರ್ಥದಲ್ಲಿ ಸಂಸದೀಯ ಸಂವಾದದ ವೇದಿಕೆಯನ್ನಾಗಿ ಪರಿವರ್ತಿಸುವುದೇ ಸೂಕ್ತವೇನೋ ಎನ್ನುವ ಭಾವನೆ ಅನೇಕರಲ್ಲಿ ಮೂಡುತ್ತಿದೆ. ರಾಜ್ಯಸಭೆಯ ಕಾರ್ಯಕಲಾಪ ಲೋಕಸಭೆಯ ಕಾರ್ಯಕಲಾಪದ ಪಡಿಯಚ್ಚಾಗುವುದಾದರೆ ಉಭಯ ಸದನಗಳ ಸ್ವರೂಪದ ಅಗತ್ಯವಾದರೂ ಎಲ್ಲಿದೆ?
ರಾಜ್ಯಸಭೆಯಲ್ಲಿ ಬಜೆಟ್ ಚರ್ಚೆಯಾಗಲಿಲ್ಲ. ಹಾಗಿದ್ರೆ ಸದಸ್ಯರು ತಮ್ಮ ಅನಿಸಿಕೆ - ಅಭಿಪ್ರಾಯಗಳನ್ನು ತಿಳಿಸುವುದಾದರೂ ಹೇಗೆ? ಲಿಖಿತವಾಗಿ ತಮ್ಮ ಹೇಳಿಕೆಗಳನ್ನು ಸಿದ್ಧಪಡಿಸಿ ಅದನ್ನು ಸಭಾಪತಿಯವರಿಗೆ ಕೊಟ್ಟರೆ, ಅದನ್ನು ವಿತ್ತಮಂತ್ರಿ ಪರಿಶೀಲಿಸಿ ಸೂಕ್ತ ಸಮಗ್ರ ಸ್ವರೂಪದ ಉತ್ತರವನ್ನು ಲಿಖಿತವಾಗಿಯೇ ನೀಡಲಿದ್ದಾರಂತೆ. ಅದಕ್ಕೆ ಸದನದ ನಿಯಮಾವಳಿಯಲ್ಲಿ ಅವಕಾಶವಿದೆ. ಅಪೂರ್ವದಲ್ಲಿ ಅಪೂರ್ವ ಎನ್ನುವ ಸ್ಥಿತಿಯಲ್ಲಿ ಅನುಸರಿಸಬಹುದಾದ ಕ್ರಮ ಅದು. ಈ ವರ್ಷ ಅಂತಹ ಯಾವ ಪರಿಸ್ಥಿತಿಯೂ ಇರಲಿಲ್ಲ. ರಾಜ್ಯಸಭೆಯಲ್ಲಿ ಮುಕ್ತ ಚರ್ಚೆಯಾಗದೇ ಬಜೆಟ್ ಅಂಗೀಕಾರದಂತಹ ಕ್ರಮಗಳು ಸಂವಿಧಾನದ ವಿಧಿ ನಿಯಮಗಳನ್ನೇ ನಿಧಾನವಾಗಿ ಮುಕ್ಕಾಗುವಂತೆ ಮಾಡಬಹುದು. ಹೀಗಾಗಬಾರದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments