ಕೊನೆಗೂ ಧೈರ್ಯ ಮಾಡಿದ ಬಿಜೆಪಿ
ಅಬ್ಕಾರಿ ಮಂತ್ರಿ ರೇಣುಕಾಚಾರ್ಯ ಅವರು ತಮ್ಮ ಅಧಿಕಾರಾವಧಿಯಲ್ಲಿ ಹಲವಾರು ಅವಾಂತರಗಳನ್ನು ಸೃಷ್ಟಿಸಿದ್ದಾರೆ. ಪಕ್ಷದ ಶಿಸ್ತನ್ನು ಅನೇಕ ಸಂದರ್ಭಗಳಲ್ಲಿ ಅವರು ಉಲ್ಲಂಘಿಸಿರುವುದೂ ನಿಜ. ಮಂತ್ರಿ ಸ್ಥಾನದ ಗೌರವಕ್ಕೆ ಚ್ಯುತಿ ಬರುವ ರೀತಿಯಲ್ಲಿ ವರ್ತಿಸುವುದು ಅವರ ಸ್ವಭಾವದ ಒಂದು ಭಾಗವೇ ಆಗಿ ಹೋಗಿದೆ.
ಆದರೂ ಮುಖ್ಯಮಂತ್ರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳಲು ಅಳುಕಿ ಸುಮ್ಮನಿದ್ದರು. ಪ್ರದೇಶ ಬಿಜೆಪಿ ಅಧ್ಯಕ್ಷರೂ ಶಿಸ್ತಿನ ಕ್ರಮದ ಪ್ರಸ್ತಾಪವನ್ನೇ ಯಾವ ಸಂದರ್ಭದಲ್ಲೂ ಎತ್ತಲೇ ಇಲ್ಲ. ಇದೆಲ್ಲಾ ಹಿಂದಿನ ಕತೆಯೇ ಆಗಿರಬಹುದು.
ಯಡಿಯೂರಪ್ಪ ಅವರು ಪಕ್ಷತ್ಯಾಗ ಮಾಡಿ ತಮ್ಮ ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡಿ ಅನಂತರ ಅವರ ಆತ್ಮೀಯ ಸಂಗಾತಿ ರೇಣುಕಾಚಾರ್ಯ ಕೂಡಾ ಅವರನ್ನು ಹಿಂಬಾಲಿಸುವುದೂ ತೀರಾ ಸಹಜವಾಗಿತ್ತು. ಆದರೆ ರೇಣುಕಾಚಾರ್ಯ ಹಾಗೆ ಮಾಡಲಿಲ್ಲ. ಮಂತ್ರಿ ಸ್ಥಾನದಲ್ಲಿದ್ದುಕೊಂಡೇ ಅವರ ಮನಸ್ಸಿಗೆ ತೋಚಿದಂತೆ ಪಕ್ಷದ ವಿಚಾರದಲ್ಲಿ, ಸರ್ಕಾರದ ವಿಚಾರದಲ್ಲಿ ತುಂಬಾ ಲಘುವಾಗಿ ಮಾತನಾಡಿದ್ದೂ ಉಂಟು.
ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸದೇ ಇರುವುದಕ್ಕೆ ಬಿಜೆಪಿ ನಾಯಕತ್ವಕ್ಕೆ ಇದ್ದ ಅಳುಕು ಅರ್ಥವಾಗುವಂತಹದ್ದಲ್ಲ. ಕೊನೆಗೆ ರೇಣುಕಾಚಾರ್ಯ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ವಿರುದ್ಧವೇ ಭ್ರಷ್ಟಾಚಾರದ ಆರೋಪವನ್ನು ತೀರ ಲಘುವಾದ ರೀತಿಯಲ್ಲಿ ಹೊರಿಸಿದಾಗ, ಧೈರ್ಯ ಮಾಡಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕ್ರಮ ಜರುಗಿಸಿದ್ದು, ತಡವಾದರೂ ಸೂಕ್ತವಾದದ್ದು. ಹೇಗಿದ್ದರೂ ರೇಣುಕಾಚಾರ್ಯರು ಹೋಳಿ ಹಬ್ಬದ ಅನಂತರ ಪಕ್ಷ ಬಿಡುತ್ತಿದ್ದರೇನೋ ಗೊತ್ತಿಲ್ಲ. ಆದರೂ ಆರೋಗ್ಯಕರ ರಾಜಕೀಯ ಹಿತದೃಷ್ಟಿಯಿಂದ ಅವರ ವಿರುದ್ಧ ಕ್ರಮ ಜರುಗಿಸಿದ್ದು ಸರಿಯಾಗಿಯೇ ಇದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.