ತಪ್ಪಾಯ್ತು ತಿದ್ಕೋತೀವಿ
ಮೈಸೂರಿನಿಂದ ಸಿ. ದಿನಮಣಿರಾವ್ ಅವರು ಬರೆಯುತ್ತಾರೆ- 'ಸಂಸ್ಕೃತ ದೇವ ಭಾಷೆ ಎಂದು ಹೇಳಲ್ಪಡುತ್ತದೆ. ತಮ್ಮ ಪತ್ರಿಕೆಯ ಬೈಟುಕಾಫಿ ಪುಟ 3ರಲ್ಲಿನ (ಮಾ.7) 'ಶಿವಮಸ್ತು' ಲೇಖನದಲ್ಲಿ 'ಸ್ಪಿರಿಚಿಯಾಲಿಟಿ' ಇನ್ ನಾಟ್ ಎ ಪಾರ್ಟ್ಟೈಂ ಲೆಸ್ಯುರಲಿ ಜಾಬ್" ಎನ್ನುತ್ತಾನೆ ಶಿವ ಎಂಬ ಮಾಹಿತಿ ಇದೆ.'
'ಪಾಪ ಈ ಶಿವ ಇಂಗ್ಲಿಷನ್ನು ತಪ್ಪು ತಪ್ಪಾಗಿ ಕಲಿತಿದ್ದಾನೆ ಅನಿಸುತ್ತದೆ. ಈ ಕಂಗ್ಲೀಷ್ ಏಕೆ ಬಳಸಿದ್ದಾರೆ? ಅದರ ಬದಲು ನೇರವಾಗಿ ಇಂಗ್ಲಿಷಿನಲ್ಲಿ ಹೇಳಬಹುದಿತ್ತು. 'Spirituality is not a part time leisurely job'ಎಂಬ ಇಂಗ್ಲಿಷ್ ಸಾಲನ್ನು ಕನ್ನಡದಲ್ಲಿ, ಕನ್ನಡ ಅಕ್ಷರಗಳನ್ನು ಬಳಸಲು ಹೋಗಿ ಅದ್ವಾನ ಮಾಡಲಾಗಿದೆ. 'ಸ್ಪಿರಿಚಿಯಾಲಿಟಿ' 'ಸ್ಪಿರಿಚುಯಾಲಿಟಿ' ಆಗಬೇಕಿತ್ತು. 'ಇನ್ ನಾಟ್ ಎ ಪಾರ್ಟ್ ಟೈಂ' ಇದು 'ಈಸ್ ನಾಟ್ ಎ ಪಾರ್ಟ್ ಟೈಂ' ಆಗಬೇಕಿತ್ತು. 'ಲೀಜರಲೀ' ಎಂದು ಹೇಳಬೇಕಾಗಿದ್ದನ್ನು 'ಲೆಸ್ಯುರಲೀ' ಎಂದು ತಪ್ಪಾಗಿ ಅನುವಾದ ಮಾಡಲಾಗಿದೆ.’
'ರಾಮನಾಮ ಎಂದೂ ಬಿಟ್ಟವನಲ್ಲ. ಇವನ ಅಪ್ಪಟ ರಾಮಭಕ್ತಿಗೆ ಪಾರ್ವತಿಗೆ ಪರ್ವತದಷ್ಟು ಸಂತೋಷವಾಗಿದೆಯಂತೆ...' ಎಂದು ಬರೆಯಲಾಗಿದೆ. ಸದಾಶಿವನಿಗೆ ಅದೇ ಧ್ಯಾನ ಎಂಬ ಗಾದೆ ರಾಮನಾಮ ಧ್ಯಾನ ಸದಾ ಅವನಿಗೆ ಎಂದೂ ಸೂಚಿಸುತ್ತದೆ. ಈ ಮೇಲಿನ ವಾಕ್ಯಗಳು ತೀರಾ ಅಸಮಂಜಸವೆಂದು ಕಂಡುಬರುತ್ತದೆ. ಮೇಲಿನ 'ಶಿವನ' ಅನಿಸಿಕೆಯನ್ನು ಲೇಖಕರು ಎಲ್ಲಿಂದ ಹೆಕ್ಕಿ ತಂದರೋ ತಿಳಿಯದು.' ಎಂದಿದ್ದಾರೆ.
ತೀರ್ಥಹಳ್ಳಿಯಿಂದ ಕುತ್ಪಾಡಿ ಜಯಪ್ರಕಾಶ್ ಹೆಗ್ಡೆ ಅವರು ಬರೆಯುತ್ತಾರೆ- 'ಮಾ.17ರ 'ಸಾಪ್ತಾಹಿಕ ಪ್ರಭ'ದಲ್ಲಿ 'ಟಿಪ್ಪು ಟ್ರಿಕ್ಕು' ಎಂಬ ಲೇಖನದಲ್ಲಿ ಪ್ರತಾಪಸಿಂಹ ಅವರ 'ಟಿಪ್ಪು ಸುಲ್ತಾನ ಸ್ವಾತಂತ್ರ ವೀರನೇ' ಹೊತ್ತಗೆ ಹೊರ ಬಂದಿದೆ. 'ಕುತುಹಲಕಾರಿ' ಕೃತಿಯ ಆಯ್ದ ಭಾಗ ಇಲ್ಲಿದೆ ಎಂದು ಅಚ್ಚಾಗಿದೆ. ಅದು 'ಕುತೂಹಲಕಾರಿ' ಎಂದಾಗಬೇಕಿತ್ತು.'
'ಇದೇ ಪುಟದಲ್ಲಿನ 'ಮಹಾನಗರ' ಲೇಖನದಲ್ಲಿ ಪುಟ 5ರಲ್ಲಿ, ವರ್ಷಕ್ಕೆ 8ರಿಂದ 10 ಸಾವಿರ ಮಿ.ಮಿ. ಮಳೆ ಬೀಳುವ ಕಾರಣದಿಂದಲೇ ಮೇಲಿಂದ ಮೇಲೆ ಅಣೆಕಟ್ಟುಗಳು 'ನಿರ್ಮಾಣಗೊಂಡಲು' ಎಂದಿದೆ. ಅದು ನಿರ್ಮಾಣಗೊಂಡವು ಎಂದಾಗಬೇಕಿತ್ತು' ಎಂದಿದ್ದಾರೆ.
ಕುತ್ಪಾಡಿ ಜಯಪ್ರಕಾಶ ಹೆಗ್ಡೆ ಅವರು ಬರೆದ ಪತ್ರದಲ್ಲೇ ತಪ್ಪಾಗಿದೆ. ಪತ್ರಿಕೆಯಲ್ಲಿ ಪುಸ್ತಕದ ಹೆಸರು 'ಟಿಪ್ಪು ಸ್ವಾತಂತ್ರ್ಯ ವೀರನೇ' ಎಂದು ಸರಿಯಾಗಿ ಪ್ರಕಟವಾಗಿದೆ. ಆದರೆ ಜಯಪ್ರಕಾಶ ಹೆಗ್ಡೆ ಅವರು 'ಟಿಪ್ಪು ಸ್ವಾತಂತ್ರ ವೀರನೇ' ಎಂದು ಬರೆದಿದ್ದಾರೆ. 'ಸ್ವಾತಂತ್ರ್ಯ' ಮತ್ತು 'ಸ್ವತಂತ್ರ' ಎಂಬುದು ಸರಿಯಾದ ಬಳಕೆಗಳು. ಜಯಪ್ರಕಾಶ ಹೆಗ್ಡೆ ಅವರ ಪತ್ರ ನೋಡಿ ಪ್ರತಾಪ್ ಸಿಂಹ ಅವರು 'ಟಿಪ್ಪು ಸ್ವಾತಂತ್ರ ವೀರನೇ' ಎಂದು ಬರೆದಿರಲು ಸಾಧ್ಯವೇ ಇಲ್ಲ ಎಂದು ಪತ್ರಿಕೆ ತೆಗೆದುನೊಡಿದರೆ ನನ್ನ ಊಹೆ ನಿಜವಾಗಿತ್ತು.
- ವಿಶ್ವೇಶ್ವರ ಭಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.