ಬ್ರಿಕ್ಸ್ ರಾಷ್ಟ್ರಗಳ ಕೂಟಕ್ಕೆ ಸಂಘಟನೆಯ ಸ್ವರೂಪ
ಬ್ರೆಜಿಲ್, ರಷ್ಯ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳನ್ನು ಪ್ರತಿನಿಧಿಸುವ ಒಂದು ಅಂತಾರಾಷ್ಟ್ರೀಯ ಕೂಟ ಇದೆ. (ಬ್ರಿಕ್ಸ್), ಆದರೆ ಇದುವರೆಗೆ ಆ ಕೂಟಕ್ಕೆ ಯಾವುದೇ ರೀತಿಯ ಸಂಘಟನೆಯ ಸ್ವರೂಪ ಇರಲಿಲ್ಲ. ಈ ರಾಷ್ಟ್ರಗಳ ಪ್ರಮುಖರು, ವರ್ಷಕ್ಕೊಮ್ಮೆ ಸಭೆ ಸೇರಿ ಪರಸ್ಪರ ಆಸಕ್ತಿಯ ವಿಷಯಗಳನ್ನು ಕುರಿತು ಲೋಕಾಭಿರಾಮವಾಗಿ ವಿಚಾರ ವಿನಿಮಯ ನಡೆಸುವ ಸಂಪ್ರದಾಯವಿತ್ತು. ಮೂಲತಃ ಇಂತಹ ಕೂಟದ ರಚನೆಯ ಚಿಂತನೆ ಹೊಮ್ಮಿದ್ದು ವಿಶ್ವ ಸಂಸ್ಥೆಯ ಸಮ್ಮೇಳನಗಳ ಅಂಗಳದಲ್ಲೇ. ವಿಶ್ವ ಸಂಸ್ಥೆಯ ಕೂಟಗಳಲ್ಲಿ ಹಾಗೂ ಇತರ ಜಾಗತಿಕ ಕೂಟಗಳಲ್ಲಿ ಮುಂದುವರಿದ ಪಾಶ್ಚಿಮಾತ್ಯ ರಾಷ್ಟ್ರಗಳ ಕಾರುಬಾರೇ ಹೆಚ್ಚಾಗಿರುವುದನ್ನು ಗಮನಿಸಿದ ಅಭಿವೃದ್ಧಿ ಶೀಲ ರಾಷ್ಟ್ರಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯ ಹಾಗೂ ಚಿಂತನೆಗೆ ಬೆಲೆ ಬರುವ ರೀತಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿಕ್ಕೆ ಒಂದು ವೇದಿಕೆಯ ಅಗತ್ಯವನ್ನು ಕಂಡುಕೊಂಡಿದ್ದರು.
ಆದರೆ ಅಗತ್ಯದ ಪೂರೈಕೆಯ ವಿಚಾರದಲ್ಲಿ ಹೆಚ್ಚು ಪ್ರಗತಿಯಾಗಿರಲಿಲ್ಲ. ಬುಧವಾರ ದಕ್ಷಿಣ ಆಫ್ರಿಕಾದ ಡರ್ಬನ್ನಲ್ಲಿ ಮುಕ್ತಾಯಗೊಂಡ ಬ್ರಿಕ್ಸ್ ರಾಷ್ಟ್ರಗಳ ಪ್ರಮುಖರು ಮೂಲಭೂತ ಸೌಲಭ್ಯಗಳ ನಿರ್ಮಾಣಕ್ಕೆ ನೆರವಾಗುವಂತಹ ಒಂದು ಅಭಿವೃದ್ಧಿ ಬ್ಯಾಂಕ್ ಸ್ಥಾಪಿಸಲು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದು ಪರಸ್ಪರ ಸಹಕಾರದಲ್ಲಿ ಒಂದು ಪುಟ್ಟ ಹೆಜ್ಜೆ. ಈ ರಾಷ್ಟ್ರಗಳಲ್ಲಿ ಭೌಗೋಳಿಕವಾಗಿ ಸಂಬಂಧ ಕಡಿಮೆ. ಸಾಂಸ್ಕೃತಿಕವಾಗಿಯೂ ಇವು ಭಿನ್ನ-ಭಿನ್ನ ರಾಷ್ಟ್ರಗಳೇ.
ಪ್ರಗತಿಯ ಮಟ್ಟದಲ್ಲೂ ಬೇರೆ ಬೇರೆ ಹಂತದಲ್ಲಿವೆ. ಆದರೂ ಪ್ರಯತ್ನಿಸಿದರೆ ಜಗತ್ತಿನ ಆಗು-ಹೋಗುಗಳ ಮೇಲೆ ತಮ್ಮ ಅನಿಸಿಕೆಗಳನ್ನು ಒಟ್ಟಾಗಿ ಪ್ರತಿಪಾದಿಸಿದರೆ, ಅದರಿಂದ ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಒಳಿತಾಗಬಹುದು ಎನ್ನುವ ಆಸೆ ಇದೆ. ಆದರೆ ಸದ್ಯದಲ್ಲಿ ಚೀನಾ ಬಿಟ್ಟು ಇತರ ರಾಷ್ಟ್ರಗಳಲ್ಲಿ ಇಂತಹ ಉದ್ದೇಶಕ್ಕೆ ತಕ್ಕ ಹಂದರವನ್ನು ರೂಪಿಸಲಿಕ್ಕೆ ಬಂಡವಾಳ ಹೂಡಲು ಹಣವಿಲ್ಲ.
ಚೀನಾದಲ್ಲಿ ಇರಬಹುದೇನೋ. ವಿಶ್ವಬ್ಯಾಂಕ್, ಜಾಗತಿಕ ಅಭಿವೃದ್ಧಿಯ ದೃಷ್ಟಿಯಿಂದ ಉದ್ದೇಶಿತ ಬ್ರಿಕ್ಸ್ ಬ್ಯಾಂಕ್ ಜತೆ ಸಹಕರಿಸಲು, ಸಾಧ್ಯವಿರುವಷ್ಟೂ ನೆರವು ನೀಡಲು ಸಿದ್ಧವಿರುವುದಾಗಿ ಭರವಸೆ ನೀಡಿದೆ. ಆ ಭರವಸೆಯನ್ನೇ ನಂಬಿ ಕೂಟದ ಹೊಸ ಸ್ವರೂಪದ ಬುನಾದಿಯನ್ನು ನಿರ್ಮಿಸುವುದು ಕಷ್ಟ. ಬ್ರಿಕ್ಸ್ ಬ್ಯಾಂಕ್ನ ಸ್ವರೂಪ ಹಾಗೂ ರಚನೆ ಕುರಿತಂತೆ, ಈ ರಾಷ್ಟ್ರಗಳ ವಿತ್ತಮಂತ್ರಿಗಳು ವಿಚಾರ - ವಿನಿಮಯ ನಡೆಸಿ ಒಂದು ಯೋಜನೆಯನ್ನು ರೂಪಿಸಬೇಕಾಗಿದೆ.
ಉಳಿದಂತೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡುವ ವಿಚಾರವೂ ಡರ್ಬನ್ ಸಭೆಯಲ್ಲಿ ಪ್ರಸ್ತಾಪವಾಗಿದೆ. ಅಂತಾರಾಷ್ಟ್ರೀಯ ಭಯೋತ್ಪಾದನೆ ಹಾಗೂ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಮಗ್ರ ಸ್ವರೂಪದ, ಮಾರ್ಗದರ್ಶಿ ಸೂತ್ರದಂತಿರುವ ಒಂದು ಸಮಾನ ಅಭಿಪ್ರಾಯದ ಸೂತ್ರ ರೂಪಿಸುವ ಅಗತ್ಯವನ್ನೂ ಬ್ರಿಕ್ಸ್ ರಾಷ್ಟ್ರಗಳು ಮನಗಂಡಿವೆ. ಈ ವಿಚಾರದಲ್ಲಿ ಹೆಚ್ಚು ಉತ್ಸಾಹವನ್ನು ತೋರಿಸಿದ್ದು ಭಾರತವೇ. ಅಂತಾರಾಷ್ಟ್ರೀಯ ಭಯೋತ್ಪಾದನೆಯ ಘಟನೆಗಳಿಂದ ಹೆಚ್ಚಾಗಿ ನೊಂದಿರುವುದೂ ಭಾರತವೇ.
ಜಗತ್ತಿನ ಜನರ ಕಲ್ಯಾಣದ ದೃಷ್ಟಿಯಿಂದ ಎಲ್ಲ ವ್ಯವಹಾರವನ್ನೂ ಮುಕ್ತ ಮಾರುಕಟ್ಟೆಯ ವಶಕ್ಕೆ ಒಪ್ಪಿಸುವುದನ್ನು ಬ್ರಿಕ್ಸ್ ಕೂಟ ಒಪ್ಪಿಲ್ಲ. ರಷ್ಯಾ, ಚೀನಾ, ಭಾರತ, ಬ್ರೆಜಿಲ್ಗಳಲ್ಲಿ ಸರ್ಕಾರಿ ಸ್ವಾಮ್ಯದ ಉದ್ಯಮ ವಲಯ ನೀಡಿರುವ ಕಾಣಿಕೆ ಹಾಗೂ ಪ್ರಗತಿಯಲ್ಲಿ ಅವು ವಹಿಸಿರುವ ಪಾತ್ರ ಕುರಿತು ಮೆಚ್ಚುಗೆಯನ್ನು ಕೂಟ ಪ್ರಕಟಿಸಿದೆ. ಇದೊಂದು ಗಮನಾರ್ಹವಾದ ಹೆಜ್ಜೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.