ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಇದೆಂತಹ ಬಜೆಟ್ ಅಂಗೀಕಾರ

Mainashree
Updated On : 1 May 2013, 10:32 am

ಭಾರತದಂತಹ ದೊಡ್ಡ ರಾಷ್ಟ್ರದ ಹಲವು ನೂರು ಲಕ್ಷ ಕೋಟಿ ರುಪಾಯಿಗಳ ಮೌಲ್ಯದ ಬಜೆಟ್‌ಗೆ, ದೇಶದಲ್ಲಿ ಸಾರ್ವಭೌಮಾಧಿಕಾರ ಪಡೆದಿರುವ ಲೋಕಸಭೆ, ಚರ್ಚೆಯೇ ಇಲ್ಲದೆ ತನ್ನ ಅಂಗೀಕಾರ ಮುದ್ರೆಯನ್ನು ಒತ್ತಿದೆ ಎಂದರೆ ಅದು ನಿಜಕ್ಕೂ ಜನತಂತ್ರದ ಅಣಕವೇ. ಮಂಗಳವಾರ ಹಾಗೆ ಆಯಿತು.
ಸಂವಿಧಾನದ ವಿಧಿನಿಯಮಗಳಂತೆ, ಬಜೆಟ್ ಮಂಡನೆಯಾದ ನಿರ್ದಿಷ್ಟ ಅವಧಿಯಲ್ಲಿ ಅದನ್ನು ಲೋಕಸಭೆ ಅಂಗೀಕರಿಸಬೇಕು. ಈ ಬಾರಿ ಸಂಸತ್ತಿನ ಕಾರ್ಯಕಲಾಪದ ಅವಾಂತರದಲ್ಲಿ ಸಂಬಂಧಪಟ್ಟವರೆಲ್ಲರೂ ಅದನ್ನು ಮರೆತೇ ಬಿಟ್ಟಿದ್ದರು. ಮೇ ಹದಿನಾರರೊಳಗೆ ಬಜೆಟ್ ಅಂಗೀಕಾರವಾದರೆ ಸಾಕೆಂದು ಅಧಿಕಾರಿಗಳು ತಿಳಿದಿದ್ದರು.
ಆದರೆ ನಿರ್ದಿಷ್ಟ ಅವಧಿಯ ಒಳಗಾಗಿ, ಬಜೆಟ್ ಅಂಗೀಕಾರವಾಗಿ, ರಾಷ್ಟ್ರಪತಿಯ ಒಪ್ಪಿಗೆ ಸಿಗಬೇಕಾದರೆ ತಡವಾಗಬಹುದೆನ್ನುವ ಭಯದಿಂದ ಏಪ್ರಿಲ್ 30ರಂದೇ ಲೋಕಸಭೆಯಲ್ಲಿ ಬಜೆಟ್ ಅಂಗೀಕಾರ ಅಗತ್ಯವೆನಿಸಿತ್ತು. ಆಗ ಬಿಜೆಪಿ ಹಾಗೂ ಇತರ ಪಕ್ಷಗಳು ಸಂಸದೀಯ ಸದನಗಳಲ್ಲಿನ ಕಾರ್ಯಕಲಾಪದ ಕಡೆಯ ಆಂದೋಲನದಲ್ಲಿ ನಿರತರಾಗಿದ್ದರು. ಬಿಕ್ಕಟ್ಟಿನ ಪರಿಹಾರಕ್ಕೆಂದು ಸಂಸದೀಯ ವ್ಯವಹಾರಗಳ ಮಂತ್ರಿ ಕಮಲನಾಥ್, ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಅನಂತರ ಎಲ್ಲ ನಾಯಕರ ಜತೆ ವಿಚಾರ ವಿನಿಮಯ ನಡೆಸಿದ ಮೇಲೆ ಪ್ರತಿಪಕ್ಷಗಳು ಈ ಸಲಹೆಯನ್ನು ಒಪ್ಪಿದ್ದೂ ಆಯಿತು.
ಏಪ್ರಿಲ್ 30 ರಂದು, ಆರಂಭದಲ್ಲಿ ಸುಷ್ಮಾ ಸ್ವರಾಜ್ ತಮ್ಮ ಪಕ್ಷದ ನಿಲವನ್ನು ವಿವರಿಸಿದ ಅನಂತರ ಸಭಾತ್ಯಾಗ ಮಾಡುವುದೆಂದೂ, ಅನಂತರ ಸದನದಲ್ಲಿ ಬಜೆಟ್, ರೈಲ್ವೆ ಬಜೆಟ್ ಹಾಗೂ ಅವಕ್ಕೆ ಸಂಬಂಧಿಸಿದ ಇತರ ವಿಧೇಯಕಗಳನ್ನು "ಚರ್ಚಿಸಿ" ಒಪ್ಪಿಗೆ ಪಡೆಯಬಹುದೆಂದು ಒಡಂಬಡಿಕೆ ಆಗಿತ್ತು. ಸಂವೈಧಾನಿಕ ಬಿಕ್ಕಟ್ಟನ್ನು ತಪ್ಪಿಸಲು ಬಿಜೆಪಿ ಮಾಡಿದ ಸಲಹೆ ಇದು.
ಸೋಮವಾರ ಲೋಕಸಭೆಯ ಸಮಾವೇಶದ ಆರಂಭಕ್ಕೆ ಮುನ್ನ ಸೇರಿದ್ದ ಕಾರ್ಯಕಲಾಪ ಸಲಹಾ ಸಮಿತಿಯ ಸಭೆಯಲ್ಲೂ ಈ ವಿಚಾರದಲ್ಲಿ ಒಡಂಬಡಿಕೆ ಮೂಡಿತ್ತು. ಆದರೆ ಸದನ ಆರಂಭವಾದ ಕೂಡಲೇ ಸುಷ್ಮಾ ಸ್ವರಾಜ್ ಅವರು ಕಲ್ಲಿದ್ದಲು ಗಣಿಗಳ ಹಂಚಿಕೆಯ ಹಗರಣದಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರು ಪದತ್ಯಾಗ ಮಾಡಬೇಕೆನ್ನುವ ಬೇಡಿಕೆಯ ಹಿನ್ನೆಲೆಯನ್ನು ವಿವರಿಸಲು ಆರಂಭಿಸಿದ ಕೂಡಲೇ ಕಾಂಗ್ರೆಸ್ ಸದಸ್ಯರು ಅಬ್ಬರದ ಆವುಟವನ್ನು ಆರಂಭಿಸಿ, ಘೋಷಣೆಗಳನ್ನು ಕೂಗಿ, ಆ ಹೇಳಿಕೆಯನ್ನು ತಡೆಗಟ್ಟಿದರು.
ಈ ವರ್ತನೆಯನ್ನು ಪ್ರತಿಭಟಿಸಿದ ಸುಷ್ಮಾ ಸ್ವರಾಜ್ ಹಾಗೂ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ್ದೂ ಆಯಿತು. ಅದೇ ಸಮಯದಲ್ಲೇ ಬಜೆಟ್ ಮೇಲಿನ ಚರ್ಚೆಗೇ ಅವಕಾಶ ನೀಡದೇ ಅದನ್ನು ಅಂಗೀಕರಿಸುವುದು ಸರಿಯಲ್ಲವೆಂದು ಹೇಳಿ ಅಣ್ಣಾ ಡಿಎಂಕೆ, ಶಿವಸೇನೆಯ ಸದಸ್ಯರೂ ಸಭಾತ್ಯಾಗ ಮಾಡಿದರು. ಇದೆಲ್ಲವೂ ಆದನಂತರ, ವಿತ್ತ ಮಂತ್ರಿ ಪಿ. ಚಿದಂಬರಮ್ ಅವರೇ ಸ್ವಯಂಪ್ರೇರಣೆಯಿಂದ ಹಲವು ಬದಲಾವಣೆಗಳನ್ನು ಮಾಡಿದಕ್ಕೆ ಸದನ ಒಪ್ಪಿತ್ತು. ಲೋಕಸಭೆಯಲ್ಲಿ ಬಜೆಟ್ ಅಂಗೀಕಾರವಾದ ವೈಖರಿ ಇದು. ಸ್ಪೀಕರ್ ಮೀರಾಕುಮಾರ್ ಅವರೇ, 'ಈ ರೀತಿಯ ಬಜೆಟ್ ಅಂಗೀಕರಿಸುವ ವಿಧಾನವನ್ನು ಅನುಸರಿಸುವುದು ತಮಗೂ ಬೇಸರದ ವಿಚಾರವೇ, ಆದರೆ ಈಗಿನ ಸ್ಥಿತಿಯಲ್ಲಿ ಅದು ಅನಿವಾರ್ಯ' ಎನ್ನುವ ವಾಕ್ಯವನ್ನು ದಾಖಲಿಸಿದರು.
ಈ ಘಟನೆಯಿಂದ ಕಾಂಗ್ರೆಸ್- ಬಿಜೆಪಿಗಳ ನಡುವಣ ಸಂಸದೀಯ ಸಂಘರ್ಷ ಇನ್ನಷ್ಟು ತೀವ್ರವಾಗಿದೆ. ಇನ್ನು ಮುಂದೆ ಸದನದ ಒಳಗೆ, ಹೊರಗೆ ಆಳುವ ಪಕ್ಷದ ಜತ ಮಾತುಕತೆ ಸಾಧ್ಯವಿಲ್ಲ, ಯಾವ ಸಭೆಗೂ ಬಿಜೆಪಿ ಸದಸ್ಯರು ಹಾಜರಾಗುವುದಿಲ್ಲವೆಂದೂ ಸದನದ ಹೊರಗೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ. ಇಂತಹ ಆವೇಶದ ಪ್ರದರ್ಶನದಿಂದ ಸಾಧಿಸುವುದಾದರೂ ಏನನ್ನು? ಸಂಸತ್ ಸದಸ್ಯರು ಗಂಭೀರವಾಗಿ ಪರಿಗಣಿಸಬೇಕಾದ ಪ್ರಶ್ನೆ ಅದು.
ಆಟೋಗಳಿಗೆ ಅಪಾಯ
ಮೂರು ಚಕ್ರಗಳ ಆಟೋರಿಕ್ಷಾದ ವಿನ್ಯಾಸವೇ ಅಪಘಾತದ ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಎನ್ನುವ ಮಾತು ಹಳೆಯದು. ರಸ್ತೆಯ ಮಧ್ಯದಲ್ಲಿ ಉಬ್ಬಿದ್ದರೆ ಮುಂದಿನ ಚಕ್ರ ಅಕಸ್ಮಾತ್ತಾಗಿ ಅದರ ಮೇಲೇರಿದರೆ ಆಟೋ ಚಾಲಕ - ಪ್ರಯಾಣಿಕರು ಅಪಘಾತಕ್ಕೆ ಸಿಕ್ಕಿಬೀಳುವ ಸಂಭವವಿದೆ. ಅನೇಕ ಅಪಘಾತಗಳ ವಿಚಾರಣೆಯ ಸಂಬಂಧದಲ್ಲಿ ಈ ಅನುಭವದ ಪ್ರಸ್ತಾಪವಾಗಿದೆ.
ಕರ್ನಾಟಕ ಹೈಕೋರ್ಟಿನ ಏಕ ಸದಸ್ಯ ಪೀಠ, ಬೇರೊಂದು ಅಪಘಾತದ ವಿಚಾರಣೆ ನಡೆಸಿದ ಸಂದರ್ಭದಲ್ಲಿ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರು ಮೂರು ಚಕ್ರಗಳ ವಾಹನಗಳ ಅಪಾಯ ಕುರಿತ ತಮ್ಮ ಅನಿಸಿಕೆಯನ್ನು ಪ್ರಕಟಿಸಿದರು.
ಈಗಾಗಲೇ ಹಲವಾರು ಸಾರ್ವಜನಿಕ ವೇದಿಕೆಗಳಲ್ಲಿ ಈ ವಿಚಾರ ಪ್ರಸ್ತಾಪವಾಗಿದೆ. ಎರಡು ಆಟೋಮೊಬೈಲ್ ತಯಾರಿಕಾ ಸಂಸ್ಥೆಗಳು ನಾಲ್ಕು ಚಕ್ರಗಳ ಕಡಿಮೆ ವೆಚ್ಚದ ವಾಹನದ ವಿನ್ಯಾಸದಲ್ಲಿ ತೊಡಗಿವೆ. ಆದರೆ ಆ ವಾಹನವನ್ನು ರಿಕ್ಷಾ ಎಂದು ಕರೆಯಬೇಕೋ, ಸಣ್ಣ ಕಾರೆಂದು ಕರೆಯ ಬೇಕೋ ಎನ್ನುವ ವಿಚಾರ ಆರಂಭವಾಗಿದೆ.
ಭಾರತದ ನಗರಗಳಲ್ಲಿ ಪ್ರಯಾಣಿಕರಿಗೆ ನಿಜವಾಗಲೂ ಆಟೋರಿಕ್ಷಾ ಒಂದು ದೊಡ್ಡ ವರವೇ. ಬಸ್ಸುಗಳಲ್ಲಿನ ಪ್ರಯಾಣ ಅಸಾಧ್ಯವೆನ್ನುವ ಪರಿಸ್ಥಿತಿಯಲ್ಲಿ, ಟ್ಯಾಕ್ಸಿಯ ದರಗಳು ಸಾಮಾನ್ಯರ ಕೈಗೆ ಎಟುಕದೇ ಇರುವಾಗ, ಲಕ್ಷಾಂತರ ಜನ ಆಟೋರಿಕ್ಷಾಗಳನ್ನೇ ನಂಬಿಕೊಂಡಿದ್ದಾರೆ.
ಈಗಿನ ವಿನ್ಯಾಸದಲ್ಲಿ ಅದನ್ನು ಸರಿಪಡಿಸುವುದು ನಮ್ಮ ತಜ್ಞರಿಗೆ ಅಸಾಧ್ಯವಾದ ವಿಚಾರವೇನೂ ಅಲ್ಲ. ಆ ದಿಕ್ಕಿನಲ್ಲಿ ಪ್ರಯತ್ನ ಈಗ ಆರಂಭವಾಗಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement