ಜೆಪಿಸಿ ಕಥೆ ಮುಗಿಯಿತೇ?
ಎರಡನೇ ತಲೆಮಾರಿನ ತರಂಗಾಂತರ ಗುಚ್ಛಗಳ ಹಂಚಿಕೆಯ ಹಗರಣದ ತನಿಖೆಗೆ ನೇಮಕಗೊಂಡಿದ್ದ ಸಂಯುಕ್ತ ಸಂಸದೀಯ ತನಿಖಾ ಸಮಿತಿಯ ವರದಿಯನ್ನೇನೋ ಅದರ ಅಧ್ಯಕ್ಷ ಚಾಕೋ ಅವರು ಸಿದ್ಧಪಡಿಸಿದ್ದಾರೆ. ಆದರೆ ಅದರ ಗತಿ ಏನಾಗಬಹುದೆನ್ನುವುದು ಈಗ ಯಾರಿಗೂ ಗೊತ್ತಿರುವಂತಿಲ್ಲ.
ಚಾಕೋ ಸಮಿತಿಯಲ್ಲಿ ಈಗ ಆಳುವ ಕೂಟ ಹಾಗೂ ಅದನ್ನು ವಿರೋಧಿಸುವವರ ಬಲ ಸಮನಾಗಿದೆ. ಮೂವತ್ತು ಜನರ ಸಮಿತಿಯಲ್ಲಿ ಎರಡೂ ಕಡೆ ಸಮನಾಗಿ ಹದಿನೈದು ಸದಸ್ಯರಿದ್ದಾರೆ. ಚಾಕೋ ಅವರಲ್ಲಿ ವಿಶ್ವಾಸವಿಲ್ಲವೆಂದು ಸಮಿತಿಯ ಹದಿನೈದು ಸದಸ್ಯರು ಲೋಕಸಭೆ ಸ್ಪೀಕರ್ಗೆ ಪತ್ರ ಬರೆದಿದ್ದನ್ನು ಅಂಗೀಕರಿಸುವ ಅಧಿಕಾರ ತಮಗಿಲ್ಲವೆಂದು ಸ್ಪೀಕರ್ ಹೇಳಿದ್ದಾಗಿದೆ.
ಅದಾದ ಅನಂತರ ಅದೇ ಹದಿನೈದು ಸದಸ್ಯರು ಚಾಕೋ ಸಿದ್ಧಪಡಿಸಿದ ವರದಿಯನ್ನು ತಿರಸ್ಕರಿಸಿರುವುದಾಗಿ ಸ್ಪೀಕರ್ಗೆ ಪತ್ರ ಮುಖೇನ ತಿಳಿಸಿದ್ದಾರೆ. ನಿಜ. ಇದೇನೂ ಸಮಿತಿಯ ಸಭೆಯಲ್ಲಿ ಆದ ನಿರ್ಣಯವಲ್ಲ. ಒಂದು ವೇಳೆ ಚಾಕೋ ಸಮಿತಿಯ ಅಧ್ಯಕ್ಷರಾಗಿ, ತಮ್ಮ "ಎರಡನೇ ಮತವನ್ನು" ಬಳಸಿ (ಉಭಯ ಗುಂಪುಗಳ ಬಲ ಸರಿಸಮವಾದಾಗ) ವರದಿಯನ್ನು ಅಂಗೀಕರಿಸಿದ ಶಾಸ್ತ್ರ ಮಾಡಿ ಮುಗಿಸಬಹುದು. ಆದರೆ ವರದಿಯನ್ನು ತಿರಸ್ಕರಿಸಿರುವ ಸದಸ್ಯರಲ್ಲಿ ಒಬ್ಬರು ಸಮಾಜವಾದಿ ಪಕ್ಷದ ಸದಸ್ಯರೂ ಇದ್ದಾರೆ. ಸಮಾಜವಾದಿ ಪಕ್ಷವೂ ಇದನ್ನೇ ನೆಪ ಮಾಡಿಕೊಂಡು ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂದಕ್ಕೆ ಪಡೆದರೆ, ಸರ್ಕಾರ ಉಳಿಯುವುದು ಕಷ್ಟ. ಇದಕ್ಕೆ ಸರ್ಕಾರ ಯಾವ ರೀತಿ ಪರಿಹಾರವನ್ನು ಕಂಡುಕೊಳ್ಳಲಿದೆ ಎನ್ನುವುದೇ ಈಗಿನ ಕುತೂಹಲ.