ಮತ್ತೆ ಮೈಮರೆತೆವೇ?
ಲಡಾಖ್ನ ದೇಪ್ಸಾಂಗ್ ಕಣಿವೆವರೆಗೆ ಚೀನಾ 19 ಕಿ.ಮೀ ಒಳನುಸುಳಿರುವ ಕುರಿತು ಭಾರತೀಯ ಸೇನೆ ಸರ್ಕಾರಕ್ಕೆ ದೂರು ನೀಡಿರುವ ಸುದ್ದಿ ಬೆಳಕಿಗೆ ಬಂದಿದೆ. ಈ ಕುರಿತಂತೆ ಕೇಂದ್ರ ಸರ್ಕಾರವು ಎಂದಿನಂತೆ ಮೈಮರೆತು ಕುಳಿತಿದೆ. ಚೀನಾದ ಈ ಉದ್ಧಟತನವೇನು ಹೊಸದಲ್ಲ. ಈ ಹಿಂದೆ ಚೀನಾ ಪಾಸ್ಪೋರ್ಟ್ನಲ್ಲಿ ಭಾರತದ ಅವಿಭಾಜ್ಯ ಭಾಗವೊಂದನ್ನು ಸೇರಿಸಿ ವಿವಾದ ಸೃಷ್ಟಿಸಿತ್ತು. ಈಗ ಸೇನೆ ನುಗ್ಗಿಸಿ ಭಾರತಕ್ಕೆ ಸವಾಲೊಡ್ಡಿದೆ. ಹಾಗೆ ನೋಡಿದರೆ, ಭಾರತ ನೆರೆಯ ಪಾಕ್, ಬಾಂಗ್ಲಾದೇಶ, ಚೀನಾಗಳಂತಹ ನೆರೆಯ ರಾಷ್ಟ್ರಗಳು ಭಾರತಕ್ಕೆ ಮಗ್ಗುಲ ಮುಳ್ಳು ಎಂದರೆ ತಪ್ಪಾಗದು. ಈ ದೇಶಗಳೊಡನೆ ಇಂತಹ ಕಠೋರ ಪರಿಸ್ಥಿತಿಯಲ್ಲೂ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಲು ಮುಗಿಬಿದ್ದರೆ ಮುಗ್ಗರಿಸಿ ಬೀಳಬೇಕಾಗುತ್ತದೆ. ಏಕೆಂದರೆ, ನೆರೆಯ ಈ ರಾಷ್ಟ್ರಗಳಿಗೆ ಭಾರತದೊಡನೆ ಮೈತ್ರಿ ಬೇಕಿಲ್ಲ. ಭದ್ರತೆಯ ವಿಚಾರದಲ್ಲಿ ಭಾರತ ಅಲಕ್ಷ್ಯ ವಹಿಸುವುದು ಬೇಡ. ಈ ಹಿಂದೆ ಚೀನಾ ಭಾರತದ ಅವಿಭಾಜ್ಯ ಅಂಗವೊಂದನ್ನು ಅತಿಕ್ರಮಿಸಿ ತನ್ನ ತೆಕ್ಕೆಗೆ ತೆಗೆದುಕೊಂಡಂತೆ ಈಗ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೂ ಸೇನೆ, ಭದ್ರತೆ ವಿಚಾರದಲ್ಲಿ ಅಲಕ್ಷ್ಯ ವಹಿಸಿದರೆ ಮತ್ತಾವ ಭೂ ಪ್ರದೇಶವನ್ನು ಚೀನಾ ತನ್ನ ವಶಕ್ಕೆ ತೆಗೆದುಕೊಳ್ಳುವುದೋ? ಹಾಗಾಗುವ ಮುನ್ನವೇ ಭಾರತ ಎಚ್ಚೆತ್ತುಕೊಳ್ಳಲಿ.
- ಹಲವಾಗಲ ಶಂಭು, ರಾಣೇಬೆನ್ನೂರು
ಸರ್ಕಾರ ಮಾಡಬೇಕಾದ ಮಳೆಕೊಯ್ಲು
ಇತ್ತೀಚಿನ ಭಾರತ ಹವಾಮಾನ ಇಲಾಖೆ ಮತ್ತು ಅಂತಾರಾಷ್ಟ್ರೀಯ ಹವಾಮಾನ ಸಂಸ್ಥೆಗಳ ಮುನ್ಸೂಚನೆಗಳ ಪ್ರಕಾರ, ಮುಂಬರುವ ಮಳೆಗಾಲವು ದಕ್ಷಿಣ ಏಷ್ಯ ಖಂಡಗಳಲ್ಲಿ ಸಾಮಾನ್ಯ ಸ್ಥಿತಿಯ ಮಳೆಗಾಲ ಇರುವುದು ಎಂದು ತಿಳಿದು ಬಂದಿದೆ. ಆದರೆ ನಮ್ಮ ಹಿಂದಿನ ಅನುಭವಗಳ ಪ್ರಕಾರ ಈ ಮಳೆಗಾಲಗಳ ಮುನ್ಸೂಚನಾ ವರದಿಗಳನ್ನು ನಾವು ಎಷ್ಟರ ಮಟ್ಟಿಗೆ ನಂಬಬೇಕು ಎನ್ನುವುದು ಒಂದು ವಿವಾದಾತ್ಮಕವಾದ ವಿಷಯ. ಆದರೂ ಇತ್ತೀಚಿನ ದಿನಗಳಲ್ಲಿ ಬೀಳುತ್ತಿರುವ ಮಳೆಯು ಆಶಾದಾಯಕವಾಗಿವೆ.
ಅಂತರ್ಜಲದ ಮಟ್ಟ ಕುಸಿದಿರುವುದು, ನದಿಗಳಲ್ಲಿ ಮತ್ತು ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಕಡಿಮೆ ಆಗುತ್ತಿರುವುದನ್ನು ಗಮದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಬೀಳುವ ಒಂದೊಂದು ಮಳೆ ಹನಿಯನ್ನೂ ಶೇಖರಿಸುವ ಅಥವಾ ಭೂಮಿಯಲ್ಲಿ ಇಂಗಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ, ಎಂದಿನಂತೆ ಅಮೂಲ್ಯವಾದ ನೀರು ಮೋರಿಯಲ್ಲಿರುವ ಕೊಳಕಿನ ಜೊತೆ ಸೇರಿ, ಕಲುಷಿತಗೊಂಡು ಹರಿದು ಹಾಳಾಗುವುದು. ಈ ನಿಟ್ಟಿನಲ್ಲಿ ಈ ಕೆಳ ಕಂಡ ಸಲಹೆಯನ್ನು ಕಾರ್ಯಾಂಗದಲ್ಲಿರುವ ಸಂಬಂಧ ಪಟ್ಟ ಇಲಾಖೆಯವರು ಗಮನಿಸಿ, ಗಂಭೀರವಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರುವರೆಂಬ ನಂಬಿಕೆ ಇದೆ.
ಮೈಸೂರು ಜಿಲ್ಲೆಯ ನಗರ ಮತ್ತು ತಾಲೂಕುಗಳಲ್ಲಿ ಸರ್ಕಾರದ ವಶದಲ್ಲಿ ಸಾಕಷ್ಟು ಭೂಮಿ ಇದೆ. ನಗರ ಪ್ರದೇಶಗಳಲ್ಲಿ ಕಚೇರಿಗಳ ಸುತ್ತ ಮುತ್ತ (ಉದಾಹರಣೆ: ಸಯ್ಯಾಜಿ ರಾವ್ ರಸ್ತೆ ಕಿವುಡರ ಮೂಗರ ಶಾಲೆ ಆವರಣ, ಬಸ್ ಸ್ಟ್ಯಾಂಡ್ ಹತ್ತಿರ ಗೌರ್ನಮೆಂಟ್ ಹೌಸ್, ಡಿ.ಸಿ. ಕಚೇರಿ ಸುತ್ತ ಮುತ್ತ, ಮಹಾರಾಜ, ಮಹಾರಾಣಿ, ಯುವರಾಜ ಕಾಲೇಜು, ಮೈಸೂರು ವಿಶ್ವ ವಿದ್ಯಾಲಯದ ಆವರಣಗಳು ಮುಂತಾದುವು) ಮತ್ತು ಬಡಾವಣೆಗಳಲ್ಲಿ ಉದ್ಯಾನವನ, ಆಟದ ಮೈದಾನ, ಕಲ್ಯಾಣ ಮಂಟಪ, ಆಸ್ಪತ್ರೆ ಮುಂತಾದುವುಗಳಿಗೆ ಮೀಸಲಿರುವ ಖಾಲಿ ನಿವೇಶನಗಳು ಇತ್ಯಾದಿ. ಕೆಲವನ್ನು ಬಿಟ್ಟರೆ, ಮಿಕ್ಕವೆಲ್ಲವೂ ಪಾಳು ಬಿದ್ದಿವೆ. ನಮ್ಮ ದೇಶದ ಎಲ್ಲೆಡೆ ಸರ್ಕಾರದ ವಶದಲ್ಲಿರುವ ಭೂಮಿಯ ಸ್ಥಿತಿಯೂ ಇದೇ ತರಹ ಇದೆ. ಮುಂಬರುವ ಮಳೆಗಾಲವನ್ನು ಗಮದಲ್ಲಿಟ್ಟುಕೊಂಡು ಇಂತಹ ಖಾಲಿ ಜಾಗಗಳಲ್ಲಿ ಜಲ ಪರಿಣಿತರ ಸಲಹೆಗಳ ಮೇರೆಗೆ ವೈಜ್ಞಾನಿಕವಾಗಿ ಇಂಗು ಗುಂಡಿಗಳನ್ನು ತೋಡಿಸಿದರೆ ಅವುಗಳಲ್ಲಿ ಮಳೆ ನೀರು ಶೇಖರಣೆಗೊಂಡು, ಭೂಮಿಯೊಳಕ್ಕೆ ಇಂಗಿ ಕ್ಷೀಣಿಸುತ್ತಿರುವ ಅಂತರ್ಜಲವನ್ನು ವೃದ್ಧಿಗೊಳಿಸುವ ನಿಟ್ಟಿನಲ್ಲಿ ಸಹಾಯ ಮಾಡುವುದರಲ್ಲಿ ಸಂದೇಹವಿಲ್ಲ.
- ವಸಂತಕುಮಾರ್ ಮೈಸೂರು ಮಠ, ಮೈಸೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com