ಶಿಲ್ಪಕಲಾ ಅಕಾಡೆಮಿಯ ಅವಾಂತರ
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು ಕೆಲವು ಅವಸರದ ತೀರ್ಮಾನಗಳಿಂದಾಗಿ ಹುಟ್ಟಿಕೊಂಡದ್ದು. ಹಾಗಾಗಿ ಈ ವರೆಗೆ ಒಂದಲ್ಲಾ ಒಂದು ರೀತಿಯಲ್ಲಿ ಪ್ರಶ್ನಾರ್ಹ ಸಂಗತಿಗಳನ್ನು ಅದು ಸೃಷ್ಟಿಸುತ್ತಲೇ ಇದೆ. ಶಿಲ್ಪಕಲೆಯು ಲಲಿತಕಲೆಗಳ ಒಂದು ಅಂಗವೇ ಆಗಿರುವುದರಿಂದ ಲಲಿತ ಕಲಾ ಅಕಾಡೆಮಿಯಿಂದ ಅದು ಪ್ರತ್ಯೇಕವಾಗಿರುವುದು ಎಷ್ಟು ಸರಿ? ಶಿಲ್ಪಕಲೆಯ ಜನಪದ, ಸಂಪ್ರದಾಯ ಮತ್ತು ಸಮಕಾಲೀನ ಪ್ರಕಾರಗಳ ಅಕಾಡೆಮಿಯಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡುವವರು ಪಕ್ಷಪಾತ, ಪೂರ್ವಾಗ್ರಹಗಳಿಲ್ಲದೆ ಮೂರೂ ಪ್ರಕಾರಗಳ ಶಿಲ್ಪಕಲೆಗೆ ಸಮಾನ ಗಮನ ನೀಡುವಂತಾಗಬೇಕು. ಪ್ರಸ್ತುತ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷರು ಸಂಪ್ರದಾಯ ಶಿಲ್ಪ ಪ್ರಕಾರದ ಪಕ್ಷಪಾತಿಗಳಾಗಿದ್ದು ಸಮಕಾಲೀನ ಶಿಲ್ಪ ಕಲಾಪ್ರಕಾರದ ಬಗ್ಗೆ ಉಡಾಫೆಯ ದೃಷ್ಟಿ ಹೊಂದಿದ್ದು ಅಕಾಡೆಮಿಯ ಎಲ್ಲ ಚಟುವಟಿಕೆಗಳೂ ಸಂಪ್ರದಾಯ ಶಿಲ್ಪ ಪ್ರಕಾರದ ಸುತ್ತಲೇ ನಡೆದಿವೆ.
ಹೀಗಾಗಿಯೇ ಬಿಜೆಪಿ ಸರ್ಕಾರವು ಅವಧಿ ಮುಗಿದ ಅಧ್ಯಕ್ಷರನ್ನು ಮತ್ತೊಂದು ವರ್ಷ ಮುಂದುವರೆಸಿ ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗಿರುವುದೊಂದು ದುರಂತ. ಮುಂದಿನ ಅಧ್ಯಕ್ಷರಾಗುವವರು ಶಿಲ್ಪಕಲಾ ಪ್ರಕಾರಗಳೆಲ್ಲವುಗಳ ಬಗ್ಗೆ ಸಮಾನ ಗೌರವ ಹೊಂದಿರುವವರಾಗಿರಲಿ, ಪ್ರಭಾವ, ಪುಢಾರಿಗಿರಿ, ಜಾತಿಗಳನ್ನು ಮೀರಿ ಅರ್ಹ ಅಧ್ಯಕ್ಷರನ್ನು ಸರ್ಕಾರ ಆಯ್ಕೆ ಮಾಡಲಿ. ಇಲ್ಲದಿದ್ದಲ್ಲಿ ಲಲಿತ ಕಲಾ ಅಕಾಡೆಮಿಯಲ್ಲಿ ವಿಲೀನಗೊಳಿಸಲಿ, ಇಂದಿನ ಅನಾರೋಗ್ಯಕರ ಚಟುವಟಿಕೆಗಳ ಕಾರಣದಿಂದ ಮುಂದೆ ಪ್ರತಿಯೊಂದು ಶಿಲ್ಪಕಲೆಯ ಪ್ರಕಾರಕ್ಕೂ ಪ್ರತ್ಯೇಕ ಅಕಾಡೆಮಿಯ ಬೇಡಿಕೆಗಳ ಕೂಗು ಹುಟ್ಟಿಕೊಳ್ಳಲು ಸಂಬಂಧಿಸಿದವರು ಕಾರಣರಾಗದಿರಲಿ.
- ಕೆ.ವಿ. ಸುಬ್ರಹ್ಮಣ್ಯ, ಬೆಂಗಳೂರು
ಯಾವಾಗ ಬಂತು ಈ ಅಸಾಮಾನ್ಯ ವೇದಿಕೆ?
ಮೈಸೂರಿನ ಸ್ಥಳೀಯ ದಿನಪತ್ರಿಕೆಯೊಂದರಲ್ಲಿ 29.4.2013 ರಂದು ಪ್ರಕಟವಾದ ಜಾಹೀರಾತೊಂದು ಗಮನ ಸೆಳೆಯಿತು. 'ಶ್ರೀಸಾಮಾನ್ಯರ ಮತದಾನ ವೇದಿಕೆ' ಎಂಬ ಶೀರ್ಷಿಕೆಯನ್ನು ಹೊತ್ತ ಆ ಜಾಹೀರಾತಿನ ಮೂಲಕ 'ಕಾಂಗ್ರೆಸ್ಗೆ ಮತ ನೀಡಿ' ಎಂದು ಮನವಿ ಮಾಡಲಾಗಿತ್ತು. 'ಶ್ರೀಸಾಮಾನ್ಯರ ಮತದಾನ ವೇದಿಕೆ' ಎಂಬ ಹೆಸರಿದ್ದರೂ ಸಹ ಜಾಹೀರಾತಿನ ಕೆಳಭಾಗದಲ್ಲಿ ಮನವಿ ಮಾಡಿರುವವರು ಮಾತ್ರ ಅಸಾಮಾನ್ಯರು! ಡಾಕ್ಟರ್ಗಳು, ಪ್ರೊಫೆಸರ್ಗಳು, ಸಂಪಾದಕರು ಇತ್ಯಾದಿ ಘಟಾನುಘಟಿಗಳೆಲ್ಲಾ ಪೋಸು ನೀಡಿ ಕಾಂಗ್ರೆಸ್ ಪರ ಮತ ನೀಡಬೇಕೆಂದು ದುಬಾರಿ ಜಾಹೀರಾತು ನೀಡಿದ್ದು ಆಶ್ಚರ್ಯ ತಂದಿದೆ. 'ಶ್ರೀಸಾಮಾನ್ಯ ಮತದಾನ ವೇದಿಕೆ' ಯಾವಾಗ ಅಸ್ತಿತ್ವಕ್ಕೆ ಬಂತು? ಇದರ ಧ್ಯೇಯೋದ್ದೇಶವೇನು? ವಿಳಾಸವೇನು? ಕಾರ್ಯಕ್ಷೇತ್ರವೇನು? ಅದರ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯಾಧ್ಯಕ್ಷ ಯಾರು? ಎಂಬುದು ಸ್ಪಷ್ಟವಿಲ್ಲ. ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿರೆಂದು ಮನವಿ ಮಾಡಿಕೊಳ್ಳುವ ಏಕೈಕ ಉದ್ದೇಶದಿಂದಲೇ ಈ ವೇದಿಕೆಯು ಉದಯವಾದದ್ದು ವಿಪರ್ಯಾಸ.
- ಪಿ.ಜೆ. ರಾಘವೇಂದ್ರ, ಮೈಸೂರು
ಆಯೋಗ ಅಭಿನಂದನಾರ್ಹ
ಈ ಹಿಂದಿನ ಹಲವು ಚುನಾವಣೆಯಲ್ಲಿ ಹಣ ನೀರಿನಂತೆ ಹರಿಯುತ್ತಿತ್ತು. ಪಕ್ಷಗಳ ಚುನಾವಣಾ ಪ್ರಚಾರ ಎಗ್ಗುಸಿಗ್ಗಿಲ್ಲದೆ ನಡೆಯುತ್ತಿತ್ತು. ಜನತೆ ರೋಸಿ ಹೋಗಿದ್ದರು. ಸಾಕಪ್ಪಾ ಸಾಕು ಈ ಚುನಾವಣೆ ಎಂಬ ಬೇಸರದಲ್ಲಿ ಮತದಾರನಿದ್ದ. ಆದರೆ ಈ ಬಾರಿಯ ಚುನಾವಣೆಯಲ್ಲಿ ಕಂಡು ಕೇಳರಿಯದ ಚುನಾವಣಾ ಸುಧಾರಣೆಗಳು ಆಗಿವೆ. ಫ್ಲೆಕ್ಸ್- ಬೋರ್ಡ್ಗಳ ಸಂಪೂರ್ಣ ನಿಯಂತ್ರಣ, ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಹದ್ದಿನ ಕಣ್ಣು, ದಾಖಲೆಯಿಲ್ಲದ ಹಣ ಜಪ್ತಿ, ಪಕ್ಷಗಳ ಚುನಾವಣಾ ಪ್ರಚಾರದ ಮೇಲೆ ಹಿಡಿತ.. ಹೀಗೆ ಹತ್ತು ಹಲವು ಖಡಕ್ ನಿರ್ಧಾರಗಳಿಂದ ಚುನಾವಣಾ ಆಯೋಗ ಜನಮೆಚ್ಚುಗೆಗೆ ಪಾತ್ರವಾಗಿದೆ. ಈ ರೀತಿ ನೇರ, ದಿಟ್ಟ ಹಾಗೂ ತನ್ನ ಸಮರ್ಪಕ ಕ್ರಮಗಳಿಂದ ಈ ಬಾರಿಯ ಚುನಾವಣೆಯಲ್ಲಿ ಸೂಕ್ತ ಬದಲಾವಣೆ ತರಲು ಹೊರಟಿರುವ ಚುನಾವಣಾ ಆಯೋಗಕ್ಕೆ ರಾಜ್ಯ ಮತದಾರರ ಪರವಾಗಿ ಹ್ಯಾಟ್ಸಾಫ್.
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com