ಇದು ನೀತಿಯೋ, ಅನೀತಿಯೋ?
ಸರಬ್ಜಿತ್ ಸಾವಿನ ಮೂಲಕ ಪಾಕಿಸ್ತಾನ ಮತ್ತೊಮ್ಮೆ ತನ್ನ ಪಾಶವೀ ಕೃತ್ಯ ಮುಂದುವರೆಸಿದೆ. ಎಂದಿನಂತೆ ಕೇಂದ್ರದ ಯುಪಿಎ ಸರ್ಕಾರದ ಕುಂಭಕರ್ಣ ನಿದ್ದೆಯಿಂದ ಭಾರತೀಯ ಕೈದಿಯೊಬ್ಬನ ಸಾವು ಸಂಭವಿಸಿದೆ. ಈ ಹಿಂದೆ ಭಾರತೀಯ ಸೈನಿಕರ ರುಂಡ ಚೆಂಡಾಡಿದ ಪ್ರಕರಣ ಹಸಿಯಾಗಿರುವಾಗಲೇ ಪಾಕಿಸ್ತಾನ ಮತ್ತೊಮ್ಮೆ ಇಂತಹ ಕೃತ್ಯವನ್ನು ಮುಂದುವರೆಸಿದೆ. ಅಷ್ಟೇ ಅಲ್ಲ ಸರಬ್ಜಿತ್ನ ಶರೀರದ ಕೆಲ ಅಂಗಾಂಗಗಳನ್ನೂ ನಾಪತ್ತೆ ಮಾಡಿ ತಾನು ಮನುಷ್ಯರಿಗಿಂತಲೂ ಕೀಳು ಎಂಬುದನ್ನು ಜಗಜ್ಜಾಹೀರುಗೊಳಿಸಿದೆ. ಸರಬ್ಜಿತ್ನ ಸಾವು ಸಂಭವಿಸಿದ ಸುದ್ದಿ ತಿಳಿಯುತ್ತಲೇ ಆತನ ಕುಟುಂಬಕ್ಕೆ ಕೇಂದ್ರ ಸರ್ಕಾರ 25 ಲಕ್ಷ ರುಪಾಯಿ, ಪಂಜಾಬ್ ಸರ್ಕಾರ 1 ಕೋಟಿ ರುಪಾಯಿ, ಜೊತೆಗೆ ಕುಟುಂಬದ ಇಬ್ಬರಿಗೆ ಸರ್ಕಾರಿ ನೌಕರಿಯನ್ನು ಘೋಷಿಸಿದೆ. ಸರಬ್ಜಿತ್ ಇದ್ದಾಗಲೇ ಆತನ ಕುಟುಂಬದ ನ್ಯಾಯಯುತ ಬೇಡಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡದ, ಪ್ರತಿಪಕ್ಷಗಳು ಎಚ್ಚರಿಸಿದಾಗಲೂ ಜಾಣ ಕಿವುಡು ಪ್ರದರ್ಶಿಸಿದ, ಪಾಕಿಸ್ತಾನದ ಇಂತಹ ಪೈಶಾಚಿಕ ಕೃತ್ಯವನ್ನು ಖಂಡಿಸುವ ಮನಸ್ಸು ಈ ಸರ್ಕಾರದವರಿಗೆ ಆಗಲಿಲ್ಲ. ಬಹುಶಃ ಸರ್ಕಾರದ ಕೃಪಾಕಟಾಕ್ಷ ದೊರೆಯಬೇಕಾದರೆ ಹೀಗೆ ಸಾವು ಸಂಭವಿಸಬೇಕೇನೋ? ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಅಭದ್ರತೆ, ನೆರೆಯ ಭಾರತದೊಂದಿಗೆ ಅದರ ಚೆಲ್ಲಾಟ ಇತ್ಯಾದಿಗಳಾವುವೂ ಇವರಿಗೆ ಕಾಣಿಸದೇ?
ಅಫ್ಜಲ್ ಗುರು ಅಪರಾಧಿ ಎಂದು ಸಾಬೀತಾಗಿ ಕಾನೂನು ಪ್ರಕಾರವೇ ಎಲ್ಲ ಕಾರ್ಯಗಳನ್ನು ಮುಗಿಸಿದರೂ ಆತನ ಸಂಬಂಧಿಕರಿಗೆ ತಿಳಿಸಲಿಲ್ಲ ಎಂಬಿತ್ಯಾದಿಯಾಗಿ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಸೇರಿದಂತೆ ಹಲವರು ಬೊಬ್ಬೆಹೊಡೆದರು. ಈಗ ಭಾರತೀಯನೊಬ್ಬನಿಗೆ ಅನ್ಯಾಯವಾಗಿದೆ. ಇವರೆಲ್ಲ ಎಲ್ಲಿ ಹೋಗಿದ್ದಾರೆ? ದೇಶದೊಳಗೆ ನುಸುಳುವ ನುಸುಳುಕೋರರಿಗೆ ಗುರುತಿನ ಚೀಟಿ, ಪಡಿತರ ಚೀಟಿ ಎಲ್ಲ ಸೌಲಭ್ಯ ಒದಗಿಸುವ ಸರ್ಕಾರ ದೇಶವಾಸಿಗಳಿಗೆ ಭದ್ರತೆಯನ್ನೊದಗಿಸುವುದಿಲ್ಲ. ಪದೇ ಪದೇ ಭಾರತಕ್ಕೆ ಸವಾಲೊಡ್ಡುತ್ತಿರುವ ಪಾಕಿಸ್ತಾನವನ್ನು ಭಾರತವೇಕೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ? ಭಾರತದ ಇಂತಹ ನೀತಿಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ದೇಶಗಳಿಗೆ ಪ್ರಚೋದನೆ ದೊರೆತರೆ ಆಶ್ಚರ್ಯವೇನಿಲ್ಲ.
-ಹಲವಾಗಲ ಶಂಭು, ರಾಣೇಬೆನ್ನೂರು
ಹಳ್ಳಿಯ ಜನರೇ ಪ್ರಜ್ಞಾವಂತರು
ಇಂದಿನ ಮತದಾನದ ಪ್ರಮಾಣ ಗಮನಿಸಿದರೆ ಹಳ್ಳಿಯ ಜನ ಪಟ್ಟಣ ವಾಸಿಗಳಿಗಿಂತ ವಾಸಿ ಎಂಬಾತಾಗಿದೆ. ರಾಜ್ಯದ ರಾಜಧಾನಿ ಬೆಂಗಳೂರು ನಗರ ರಾಜ್ಯದ ಶೇಕಡವಾರು ಮತದಾನದ ಪ್ರಮಾಣ ಬಹಳ ಕಡಿಮೆಯಿದೆ. ಅಂದರೆ ಅರ್ಧದಷ್ಟು ಜನ ತಮ್ಮ ನಿರ್ಣಯ ಕೊಟ್ಟಿಲ್ಲ. ಹಾಗಾದರೆ ಆರಿಸಿ ಬರುವವವರು ಇನ್ನೆಂಥವರಿರಬಹುದು? ಹಿಂದೆಂದಿಗಿಂತಲೂ ಚುನಾವಣಾ ಆಯೋಗ ಮುಂಜಾಗ್ರತಾ ಕ್ರಮ, ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದರೂ ಜನರಲ್ಲಿ ಮತದಾನ ಮಾಡಲು ಆಸಕ್ತಿ ಮೂಡಿಲ್ಲ ಅಂದರೆ ಇನ್ನೇನು ಮಾಡಬೇಕು? ಇದೇ ಕಾರಣದಿಂದಾಗಿಯೇ ಭ್ರಷ್ಟರು, ದರೋಡೆಕೋರರು, ಲೂಟಿಕೋರರು ಆರಿಸಿ ಬರುತ್ತಿರುವುದು. ನಿಜಕ್ಕೂ ಪ್ರಜ್ಞಾವಂತ ಜನರೆಂದರೆ ಹಳ್ಳಿಯ ಜನ. ಹೋಟೆಲ್, ಅಂಗಡಿಯ ಹತ್ತಿರ ಚುನಾವಣಾ ಬಗ್ಗೆ ಗಂಟೆಗಟ್ಟಲೆ ಮಾತನಾಡುವವರು ಇಂತಹ ಜನರೇ. ವಿದ್ಯಾವಂತರಿಂದಲೇ ನಮ್ಮ ದೇಶ ಅದ್ವಾನ ಆಗುತ್ತಿರುವುದು. ರಜೆ ಸಿಕ್ಕರೆ ಮೋಜು ಮಸ್ತಿ ಮಾಡಲು ಸಮಯ ಇದೆ; ದೇಶಕ್ಕೆ, ನಾಡಿಗೆ ಒಬ್ಬ ಒಳ್ಳೆಯ ಅಭ್ಯರ್ಥಿಯನ್ನು ಗೆಲ್ಲಿಸಿ ಕಳುಹಿಸಲು ಸಮಯ ಇಲ್ಲ ಅಂದ್ರೆ ಹೇಗೆ?
-ಎಮ್.ಪರಮೇಶ್ವರ, ಮದ್ದಿಹಳ್ಳಿ, ಹಿರಿಯೂರು ತಾಲೂಕ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
ಜಟಛ್ಝಟ: ಛಟ್ಝಿಡ್ಝ್ಞಜಠ್ಠಛಝಿಛಅ್ಜಟಛ್ಝಟ.್ಛ್ಟಟ