ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸಂಸದೀಯ ವ್ಯವಸ್ಥೆ - ಪ್ರಧಾನಿ

Mainashree
Updated On : 6 May 2013, 10:50 am

ಕೇಂದ್ರದ ಸಂಯುಕ್ತ ಪ್ರಗತಿಪರ ಕೂಟದ ಸರ್ಕಾರ ಈಗ ತನ್ನ ಇಬ್ಬರು ಸಚಿವರಿಗೆ ಸಂಬಂಧಿಸಿದಂತೆ ಎದುರಿಸುತ್ತಿರುವ ಭ್ರಷ್ಟಾಚಾರದ ಆರೋಪಗಳನ್ನು ಕುರಿತು ಸಂಸತ್ತಿನಲ್ಲಿ ಅಧಿಕೃತವಾಗಿ ಚರ್ಚೆಯೇ ಆಗಿಲ್ಲ. ಹಠಾತ್ ಪ್ರಸ್ತಾಪವಾಗಿರಬಹುದು.
ಸುಪ್ರೀಂ ಕೋರ್ಟಿಗೆ ಕಲ್ಲಿದ್ದಲು ಗಣಿಗಳ ಹಂಚಿಕೆಯ ಅವ್ಯವಹಾರದ ಆರೋಪ ಕುರಿತ ತನಿಖೆಯ ವರದಿಯನ್ನು ಸಿಬಿಐ ಸಲ್ಲಿಸುವ ಮುನ್ನವೇ ಸಚಿವ ಅಶ್ವನಿ ಕುಮಾರ್ ಆ ಪ್ರಮಾಣ ಪತ್ರವನ್ನು ಪರಿಶೀಲಿಸಿ, ಅದರಲ್ಲಿ ಹಲವು ಬದಲಾವಣೆಗಳನ್ನು ಸೂಚಿಸಿದ್ದು, ಆ ಸಮಯದಲ್ಲಿ ಪ್ರಧಾನಿ ಕಾರ್ಯಾಲಯದ ಇಬ್ಬರು ಅಧಿಕಾರಿಗಳು ಅಲ್ಲಿ ಇದ್ದಿದ್ದು ಈಗ ಖಚಿತವಾಗಿದೆ.
ಆ ವಿಚಾರದಲ್ಲಿ ಸಿಬಿಐ ನಿರ್ದೇಶಕ ರಣಜಿತ್ ಸಿನ್ಹ ಸಲ್ಲಿಸಿರುವ ಎರಡನೇ ಪ್ರಮಾಣ ಪತ್ರದಲ್ಲಿ ವಿಷಯ ಸ್ಪಷ್ಟವಾಗಿದೆ. ಆ ಸಲಹೆಗಳನ್ನು ಪ್ರಮಾಣ ಪತ್ರದಲ್ಲಿ ಅಳವಡಿಸಿಕೊಂಡಿದ್ದರಿಂದ, ಸುಪ್ರೀಂ ಕೋರ್ಟಿನ ಮುಂದಿರುವ ಪ್ರಕರಣದ ವಿಚಾರಣೆಯ ಮೇಲೆ ದೊಡ್ಡ ರೀತಿಯ ಪರಿಣಾಮವೇನೂ ಆಗುವುದಿಲ್ಲವೆಂದೂ ಸಿಬಿಐ ಪರವಾಗಿ ತಿಳಿಸಲಾಗಿದೆ.
ಎಷ್ಟಾದರೂ ಸಿಬಿಐ ಸರ್ಕಾರದ ಒಂದು ಅಂಗ ಸಂಸ್ಥೆ. ಅಂದ ಮೇಲೆ ಸಚಿವರ ಮಾತನ್ನು ಕೇಳಲೇಬೇಕು ಎನ್ನುವುದೇ ಸರ್ಕಾರದ, ಸಿಬಿಐನ ವಾದವಾದರೆ, ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳಿಗೆ ಎಲ್ಲ ಕಡೆಯಲ್ಲೂ ಉಸ್ತುವಾರಿಯ ಅಧಿಕಾರ ಇದೆ ಎನ್ನುವುದನ್ನು ಒಪ್ಪುವುದಾದರೆ, ನಮ್ಮ ರಾಜಕೀಯ ಪಕ್ಷ ಆಧರಿತ, ಸಂಸದೀಯ ಜನತಾಂತ್ರಿಕ ವ್ಯವಸ್ಥೆ ಪ್ರಧಾನಿ ಹಾಗೂ ಅವರ ಕಾರ್ಯಾಲಯದ ಮೂಲಕವೇ ಎಲ್ಲ ನಿರ್ಧಾರವೂ ಆಗಬೇಕೆನ್ನುವ ವ್ಯವಸ್ಥೆಯಾಗಿ ಪರಿವರ್ತನೆಯಾಗುವ ಅಪಾಯ ಸ್ಪಷ್ಟವಾಗಿ ಗೋಚರವಾಗಿದೆ.
ಕಾಂಗ್ರೆಸ್ಸಿನ ಹಿರಿಯರ ತಂಡ ಭಾನುವಾರದ ಸಭೆಯಲ್ಲಿ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಕೆಂಗಣ್ಣಿಗೆ ತುತ್ತಾಗಿರುವ ಅಶ್ವನಿ ಕುಮಾರ್ ಹಾಗೂ ರೈಲ್ವೆ ಮಂತ್ರಿ ಪವನಕುಮಾರ ಬನ್ಸಲ್ ಅವರು ತಮ್ಮ ಸ್ಥಾನವನ್ನು ಬಿಡಬೇಕಾಗಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದೆ. ಈ ನಿರ್ಧಾರಕ್ಕೆ ಸಂಸದೀಯ ವ್ಯವಸ್ಥೆಯಲ್ಲಿ ಇರುವ ಪಾವಿತ್ರ್ಯವಾದರೂ ಎಂತಹದ್ದು?
ಪವನಕುಮಾರ ಬನ್ಸಲ್, ರೈಲ್ವೆ ಮಂತ್ರಿಯಾಗಿ, ನೇರವಾಗಿ, ಅವರ ಸೋದರಳಿಯ ಸಿಂಗ್ಲಾ ಅವರ ವ್ಯವಹಾರದಲ್ಲಿ ಭಾಗಿ ಎನ್ನುವುದಕ್ಕೆ ಸಾಕ್ಷ್ಯವಿಲ್ಲ. ಆದರೆ ಅವರಿಬ್ಬರ ನಡುವಣ ನೆಂಟಸ್ತಿಕೆ ತೀರ ಹತ್ತಿರವಾಗಿರುವುದರಿಂದ ಹಾಗೂ ಇತರ ಕೆಲವು ಸಾಂದರ್ಭಿಕ ಸಾಕ್ಷ್ಯಗಳಿಂದ ರೈಲ್ವೆ ಮಂಡಳಿಯ ಸದಸ್ಯರ ನೇಮಕದ ಸಂಬಂಧದಲ್ಲಿ ಭ್ರಷ್ಟಾಚಾರದ ಆರೋಪವನ್ನು ಯಾವುದೇ ರೀತಿಯ ತನಿಖೆಯೂ ಇಲ್ಲದೇ ತಳ್ಳಿಹಾಕುವಂತಿಲ್ಲ. ಹತ್ತು ಕೋಟಿ ರುಪಾಯಿಗಳ ಭ್ರಷ್ಟಾಚಾರದ ವಿಷಯ ಅದು.
ಈಗ ಪ್ರಚಲಿತವಾಗಿರುವ ಪದ್ಧತಿಯಲ್ಲಿ ಸುಪ್ರೀಂ ಕೋರ್ಟಿನ ಉಸ್ತುವಾರಿಯಲ್ಲಿ ಸಿಬಿಐನ ವಿಶೇಷ ತನಿಖೆಯ ಪ್ರಸ್ತಾಪ ಆಗಾಗ ಬರುವುದುಂಟು. ಕಲ್ಲಿದ್ದಲು ಗಣಿಗಳ ಹಂಚಿಕೆಯ ಸಂಬಂಧದಲ್ಲಿ ನಡೆದಿರುವುದೂ ಇಂತಹ ತನಿಖೆಯೇ.
ಆದರೆ ಸಂವಿಧಾನದಂತೆ, ಸುಪ್ರೀಮ್ ಕೋರ್ಟಿನ ಉಸ್ತುವಾರಿ, ತನಿಖೆಯ ಪ್ರಗತಿಗೇ ಸೀಮಿತ. ಯಾವ ರೀತಿಯ ತನಿಖೆ ನಡೆಯಬೇಕು, ಯಾರ್ಯಾರ ವಿಚಾರಣೆಯಾಗಬೇಕು ಎನ್ನುವುದನ್ನು ಸಿಬಿಐ ತನ್ನ ಸ್ವಂತ ವಿವೇಚನೆಯಿಂದಲೇ ನಿರ್ಧರಿಸಬೇಕು. ಹೀಗಾಗಿ ಇಲ್ಲಿ ತನಿಖೆಯ ಉಸ್ತುವಾರಿ ಅಂತಿಮ ಹಂತದಲ್ಲಿ ಯಾರದ್ದು? ನ್ಯಾಯಾಲಯ ತನಿಖೆಯ ಅಧಿಕಾರವನ್ನು ಚಲಾಯಿಸುವಂತಿಲ್ಲ. ಆದರೆ ಸಿಬಿಐ ತನಿಖೆಯ ನ್ಯಾಯಪರತೆ, ಕಾನೂನು ಬದ್ಧತೆಗಳನ್ನು ಇತರೆಲ್ಲ ಪ್ರಕರಣಗಳಲ್ಲಿ ಪರಿಶೀಲಿಸಿದಂತೆಯೇ ಪರಿಶೀಲಿಸಿ (ವಕೀಲರ ವಾದ- ವಿವಾದ ಸೇರಿದಂತೆ) ಸೂಕ್ತ ತೀರ್ಪನ್ನು ಕೊಡಬಹುದು.
ಆ ತೀರ್ಪಿಗೂ ಸಚಿವರ, ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳಿಗೂ ಸಂಬಂಧವಿಲ್ಲ. ಕಾಂಗ್ರೆಸ್ಸಿನ ಮುಂದೆ ಈಗ ಇರುವುದು ಸಂವಿಧಾನದ ಸೂಕ್ಷ್ಮ ಪ್ರಶ್ನೆ ಅಲ್ಲ. ಅದು ಎದುರಿಸುತ್ತಿರುವುದು ರಾಜಕೀಯ ಪ್ರಶ್ನೆ. ಒಂದು ಪಕ್ಷವಾಗಿ ಕಾಂಗ್ರೆಸ್ ಕೈಗೊಂಡಿರುವ ನಿರ್ಧಾರ ಎಂದರೆ ಬನ್ಸಲ್- ಅಶ್ವನಿಕುಮಾರ್ ರಾಜಿನಾಮೆ ಅನಗತ್ಯ. ಈ ನಿರ್ಧಾರ ಈಗಿನ ಸಂಸತ್ತಿನ ಅಧಿವೇಶನವನ್ನೇ ಮುಳುಗಿಸುವ ಸಂಭವ ಇದೆ. ಅದು ನಿಜಕ್ಕೂ ಸಂಸತ್ತಿನ ದುರಂತವೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement