ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಸಂಸತ್ತಿನ ಅವಾಂತರ

Mainashree
Updated On : 9 May 2013, 11:14 am

ಸಂಸತ್ತಿನ ಬಜೆಟ್ ಅಧಿವೇಶನದ ಮೂರು ವಾರಗಳೂ ಯಾವ ಕೆಲಸವನ್ನೂ ಮಾಡದೇ, ಅವಧಿಗೆ ಎರಡು ದಿನಗಳ ಮುಂಚೆಯೇ ಅನಿರ್ದಿಷ್ಟ ಅವಧಿಗೆ ಮುಂದಕ್ಕೆ ಹೋಗಬೇಕಾಗಿ ಬಂದ ರೀತಿಯನ್ನು ಕುರಿತು ಜನ ಸಾಮಾನ್ಯರ ಅಭಿಪ್ರಾಯವೇನು?
ಸಂಸತ್ತಿನಲ್ಲಿ ಹಿಂದೆಂದೂ ಕಂಡು ಬರದೇ ಇರುವ ರೀತಿಯಲ್ಲಿ ಅವಾಂತರಕಾರೀ ಸನ್ನಿವೇಶ ಸೃಷ್ಟಿಯಾಗಿದ್ದಕ್ಕೆ ಬಿಜೆಪಿ ಸದಸ್ಯರೇ ಕಾರಣವೆಂದು ಪ್ರಧಾನಿ ಮನಮೋಹನ ಸಿಂಗ್ ಅವರು ದೆಹಲಿಯಲ್ಲಿ ಹೇಳಿ, ಕರ್ನಾಟಕದ ಜನ ಬಿಜೆಪಿಯ ಈ ಸಂಸ್ಕೃತಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿರುವುದು ವಿಧಾನ ಸಭೆ ಚುನಾವಣೆ ಫಲಿತಾಂಶದಿಂದ ಸಾಬೀತಾಗಿದೆ ಎಂದೂ ಹೇಳಿದ್ದಾರೆ.
ನಿಜ. ಸಂಸತ್ತಿನ ಕಾರ್ಯಕಲಾಪ ನಡೆಯುತ್ತಿರುವ ರೀತಿ- ನೀತಿ ಕುರಿತಂತೆ ಪ್ರಜ್ಞಾವಂತ ಜನಸಮುದಾಯಗಳಿಗೆ ಬೇಸರವಾಗಿದೆ. ಹಲವರಲ್ಲಿ ಆಕ್ರೋಶವೂ ಮೂಡಿದೆ. ಆದರೆ, ಆ ಆಕ್ರೋಶ ಚುನಾವಣೆಯ ಮತದಾನದಲ್ಲಿ ಪ್ರತಿಬಿಂಬಿತವಾಯಿತೆನ್ನುವುದಕ್ಕೆ ಆಧಾರವಿಲ್ಲ. ಯಾವ ರಾಜಕೀಯ ಪಕ್ಷವೂ ಸಂಸದೀಯ ಸದನಗಳಲ್ಲಿನ (ಸಂಸತ್ತು, ಗುಜರಾತ್, ಪಂಜಾಬ್, ಉತ್ತರ ಪ್ರದೇಶ) ಕಾರ್ಯಕಲಾಪದ ವೈಖರಿ ಕುರಿತ ಅಂಶವನ್ನು ಚುನಾವಣೆ ಪ್ರಣಾಳಿಕೆಗಳಲ್ಲಿ ಸೇರಿಸಿರಲಿಲ್ಲ.
ಈ ವಿಚಾರದಲ್ಲಿ ಆಳುವ ಹಾಗೂ ವಿರೋಧ ಪಕ್ಷಗಳ ನಡುವೆ ಒಂದು ರೀತಿಯಲ್ಲಿ ಒಪ್ಪಂದಕ್ಕೆ ಬರುವ ಅಗತ್ಯವಿದೆ. ಸಂಸದೀಯ ಸದನಗಳ ನಿಯಮ ಭಂಗಕ್ಕೆ ತೀವ್ರ ಸ್ವರೂಪದ ಶಿಕ್ಷೆಯನ್ನು ವಿಧಿಸುವ ಅಧಿಕಾರ ಸಭಾಧ್ಯಕ್ಷರಿಗೆ, ಸದನಕ್ಕೆ ಇದೆ. ಆದರೆ ಅದನ್ನು ಬಳಸುವ ದಿಟ್ಟತನವನ್ನು ಇದುವರೆಗೆ ಪ್ರದರ್ಶಿಸಿಲ್ಲ. ಇನ್ನು ಮುಂದಾದರೂ ಸದನಗಳಿಗೆ ಸಿಗಬೇಕಾದ ಮರ್ಯಾದೆ ಸಿಗಲೇಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement