ಸಿಬಿಐ: ಪಂಜರದ ಗಿಳಿ; ಇನ್ನು ಮುಂದೆ ಆಗಲ್ಲ
ಕೇಂದ್ರ ಸರ್ಕಾರದ ವಿಶೇಷ ತನಿಖಾದಳವಾದ ಸಿ.ಬಿ.ಐ.ಗೆ ಈಗಾಗಲೇ "ಕಾರ್ಯರೂಪದ ಸ್ವಾಯತ್ತ" ಸ್ಥಾನಮಾನವಿದೆ. ಆದರೂ ವ್ಯವಸ್ಥೆಯಲ್ಲಿ ಸಿಬಿಐ ಮತ್ತು ಸರ್ಕಾರದ ನಡುವಣ ಸಂಬಂಧದಲ್ಲಿ ಯಾವುದೇ ರೀತಿಯ ಬದಲಾವಣೆಯೂ ಕಂಡುಬಂದಂತಿಲ್ಲ.
ಬುಧವಾರ ಸುಪ್ರೀಮ್ ಕೋರ್ಟಿನ ತ್ರಿಸದಸ್ಯ ಪೀಠದ ಮುಂದೆ ಕಲ್ಲಿದ್ದಲ ಗಣಿಗಳ ಹಂಚಿಕೆಯ ತನಿಖಾ ವರದಿಯನ್ನು ಕಾಯಿದೆ ಮಂತ್ರಿ, ಅಟಾರ್ನಿ ಜನರಲ್ ಹಾಗೂ ಪ್ರಧಾನಿ ಕಾರ್ಯಾಲಯದ ಇಬ್ಬರು ಅಧಿಕಾರಿಗಳಿಗೆ ತೋರಿಸಿ, ಅವರ ಸೂಚನೆಯಂತೆ ವರದಿಯಲ್ಲೇ ಬದಲಾವಣೆ ಮಾಡಿದ ಪ್ರಕರಣ ವಿಚಾರಣೆಗೆ ಬಂದಾಗ, ನ್ಯಾಯಮೂರ್ತಿಗಳು (ಮೂರು ಮಂದಿಯ ಪೀಠ) ಸಿಬಿಐ ಹಾಗೂ ಸರ್ಕಾರಕ್ಕೆ ಸಾಕಷ್ಟು ಬುದ್ಧಿ ಕಲಿಸುವ ರೀತಿಯಲ್ಲೇ ಮಾತಾಡಿದ್ದು ನಿಜಕ್ಕೂ ಒಂದು ದಾಖಲೆಯೇ.
ನ್ಯಾಯಮೂರ್ತಿಗಳ ದೃಷ್ಟಿಯಲ್ಲಿ ಈಗ ಸಿಬಿಐ ಪಂಜರದಲ್ಲಿನ ಗಿಣಿಯಂತಾಗಿದೆ. ಸರ್ಕಾರ ಹೇಳಿದಂತೆ ಕೇಳುವುದು ಹಾಗೂ ಸಚಿವರು, ಅಧಿಕಾರಿಗಳು ಹೇಳಿದಂತೆ ವರದಿಯನ್ನು ಬದಲಾಯಿಸುವುದು ಸರಿಯಲ್ಲ ಎಂದೂ ನ್ಯಾಯಪೀಠ ಹೇಳಿರುವುದು ಈಗಿನ ಪರಿಸ್ಥಿತಿಯ ಯಥಾವತ್ ಚಿತ್ರ. ಕಲ್ಲಿದ್ದಲು ಗಣಿಗಳ ಹಂಚಿಕೆಯ ಹಗರಣಕ್ಕೆ ಸಂಬಂಧಿಸಿದಂತೆ ಇನ್ನು ಮುಂದೆ ಸಿಬಿಐ ತನ್ನ ವರದಿಯನ್ನು ನ್ಯಾಯಪೀಠಕ್ಕಲ್ಲದೇ ಬೇರೆ ಯಾರಿಗೂ ತೋರಿಸಬಾರದು ಎನ್ನುವ ಆದೇಶವನ್ನೂ ನೀಡಿದೆ.
ಸಿಬಿಐ ಪರ ವಕೀಲರು ಈ ಸಂದರ್ಭದಲ್ಲಿ ಈಗ ತಪ್ಪಾಗಿದೆ. ಮುಂದೆ ಎಂದೂ ಹೀಗಾಗುವುದಿಲ್ಲವೆನ್ನುವ ಭರವಸೆ ನೀಡಿದ ಅನಂತರವೇ ನ್ಯಾಯಪೀಠದ ಕೋಪ ಶಮನವಾಗಿದ್ದು. ಸಿಬಿಐ ಸಂಸ್ಥೆಯನ್ನು ನಿಜವಾಗಿಯೂ ಬಾಹ್ಯ ಶಕ್ತಿಗಳ ಹಸ್ತಕ್ಷೇಪ ಹಾಗೂ ಪ್ರಭಾವದಿಂದ ಮುಕ್ತಗೊಳಿಸಲು ಸೂಕ್ತ ರೀತಿಯ ಶಾಸನ ರಚನೆಗೂ ನ್ಯಾಯಪೀಠ ಸಲಹೆ ಮಾಡಿದೆ. ಸುಪ್ರೀಮ್ ಕೋರ್ಟಿನ ಈ ಮಾತುಗಳನ್ನು ಗಮನಿಸಿದ ಮೇಲೆ, ಕೇಂದ್ರ ಕಾಯಿದೆ ಮಂತ್ರಿ ಅಶ್ವಿನಿಕುಮಾರ್ ಹಾಗೂ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳಿಗೆ ಸಿಬಿಐ ನ್ಯಾಯಪೀಠಕ್ಕೆ ಸಲ್ಲಿಸಬೇಕಾಗಿದ್ದ ವರದಿಯನ್ನು ನೋಡುವುದಕ್ಕೇ ಅಧಿಕಾರವಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಈಗಾಗಲೇ ಸಚಿವ ಅಶ್ವಿನಿಕುಮಾರ್ ಹಾಗೂ ಇಬ್ಬರು ಅಧಿಕಾರಿಗಳು ಸಿಬಿಐ ವರದಿಯಲ್ಲಿ ಹಸ್ತಕ್ಷೇಪ ಮಾಡಿ, ಅದರ ಹೃದಯದಂತೆಯೇ ಇದ್ದ ಭಾಗವನ್ನೇ ಬದಲಾಯಿಸಿದ್ದಾಗಿದೆ ಎನ್ನುವ ಮಾತೂ ನ್ಯಾಯಮೂರ್ತಿಗಳು ಹೇಳಿದ್ದಾರೆ.
ಈ ವಿಚಾರದಲ್ಲಿ ಸಂಸತ್ತಿನ ಒಳಗೆ, ಹೊರಗೆ ಬೇಕಾದಷ್ಟು ಜಗಳ ನಡೆದಿದೆ. ಸರ್ಕಾರ ತಪ್ಪು ಮಾಡಿದೆ, ಇಲ್ಲಿ ಯಾರನ್ನೋ ರಕ್ಷಿಸುವ ಪ್ರಯತ್ನ ನಡಿದಿದೆ ಎನ್ನುವ ಅಭಿಪ್ರಾಯ ಪ್ರಕಟವಾಗಿದೆ. ಸುಪ್ರೀಮ್ ಕೋರ್ಟಿನ "ತೀರ್ಪು" ಪ್ರಕಟವಾದ ಅನಂತರ ಮಂತ್ರಿಗಳ ವಿರುದ್ಧ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದರ ಪರಿಶೀಲನೆಯ ಭರವಸೆಯನ್ನು ಪ್ರಧಾನಿ ನೀಡಿದ್ದಾರೆ.
ಈಗ ಸುಪ್ರೀಮ್ ಕೋರ್ಟಿನ ತೀರ್ಪು ಪ್ರಕಟವಾದ ಅನಂತರವಾದರೂ ಪ್ರಧಾನಿ ಮನಮೋಹನ ಸಿಂಗ್ ಸಿಬಿಐಗೆ ಸೂಕ್ತ ರೀತಿಯ ರಕ್ಷಣೆ ಕೊಡುವ ರೀತಿಯಲ್ಲಿ ಈಗ ನಡೆದಂತಹ ಘಟನೆ ಇನ್ನು ಮುಂದೆ ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಕಾಯಿದೆ ರಚನೆಗೆ ಮುಂದಾಗಬೇಕು.