ಪೇಟೆ ಬಡವರ ಆರೋಗ್ಯ
ಗ್ರಾಮೀಣ ಪ್ರದೇಶಗಳಲ್ಲಿನ ಬಡವರ ಆರೋಗ್ಯ ರಕ್ಷಣೆ ಹಾಗೂ ರೋಗ ಚಿಕಿತ್ಸೆಗೆ ಸಂಬಂಧಿಸಿದಂತೆ ಒಂದು ಬೃಹತ್ ವ್ಯವಸ್ಥೆಯೇ ಇದೆ...
ಗ್ರಾಮೀಣ ಪ್ರದೇಶಗಳಲ್ಲಿನ ಬಡವರ ಆರೋಗ್ಯ ರಕ್ಷಣೆ ಹಾಗೂ ರೋಗ ಚಿಕಿತ್ಸೆಗೆ ಸಂಬಂಧಿಸಿದಂತೆ ಒಂದು ಬೃಹತ್ ವ್ಯವಸ್ಥೆಯೇ ಇದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಆ ವ್ಯವಸ್ಥೆಯ ಉಸ್ತುವಾರಿ ಅಧಿಕಾರವನ್ನು ಹೊಂದಿದೆ.
ಆದರೆ ಪೇಟೆ-ಪಟ್ಟಣಗಳ ಕಡು ಬಡವರ ಆರೋಗ್ಯ ರಕ್ಷಣೆ - ರೋಗ ಚಿಕಿತ್ಸೆಗೆ, ಸದ್ಯಕ್ಕೆ ಹೇಳಿಕೊಳ್ಳುವಂತಹ ವ್ಯವಸ್ಥೆ ಇಲ್ಲ. ಈಗಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಕಂಡು ಬರುವ ರೋಗಿಗಳ ನೂಕುನುಗ್ಗಲು, ಖಾಸಗಿ ಆಸ್ಪತ್ರೆಗಳ ದುಬಾರಿ ದರಗಳ ನಡುವೆ ಪೇಟೆಗಳ ಬಡರೋಗಿಗಳು ದಿಕ್ಕು ಕಾಣದಂತೆ ಆಗಿದ್ದಾರೆ. ಕೇಂದ್ರ ಸರ್ಕಾರ, ಪೇಟೆಯ ಬಡವರಿಗೂ ಒಂದು ಆರೋಗ್ಯ ಮಿಷನ್ ಜಾರಿಗೆ ತಂದಿದೆ. ಆದರೆ ಸದ್ಯಕ್ಕೆ ಅದರ ಸ್ವರೂಪ ಇನ್ನೂ ಸ್ಪಷ್ಟವಾಗಿಲ್ಲ. ಸರ್ಕಾರದ ಚಿಂತನೆಯಂತೆ ಈ ಯೋಜನೆ ಸರ್ಕಾರಿ ಹಾಗೂ ಖಾಸಗಿ ವ್ಯವಸ್ಥೆಯ ಸಹಭಾಗಿತ್ವದಲ್ಲಿ ಜಾರಿಗೆ ಬರಬೇಕು. ವಾಸ್ತವದ ಸ್ಥಿತಿಗತಿಯನ್ನು ಗಮನಿಸಿದರೆ, ಅದು ನಡೆಯದ ಕೆಲಸ. ಲಾಭ ಗಳಿಕೆಯೇ ಏಕೈಕ ಉದ್ದೇಶವಾಗಿರುವ ಖಾಸಗಿ ವಲಯದ ಹೈಟೆಕ್ ಆಸ್ಪತ್ರೆಗಳಿಂದ ಇಂತಹ ಯೋಜನೆಯ ಜಾರಿ ಅಸಾಧ್ಯ. ಅನೇಕ ಕಡೆಗಳಲ್ಲಿ ಈಗಾಗಲೇ ಈ ಪ್ರಯೋಗ ವಿಫಲವಾಗಿದೆ. ದೇಶದ 780 ನಗರಗಳಲ್ಲಿನ ಸುಮಾರು ಎಂಟು ಕೋಟಿ ಕಡು ಬಡವರಿಗೆ ಆರೋಗ್ಯದ ಸುರಕ್ಷಾ ವ್ಯವಸ್ಥೆಯನ್ನು ರೂಪಿಸುವುದು ಸರ್ಕಾರದ ಹೊಣೆಗಾರಿಕೆ ಹಾಗೂ ಕರ್ತವ್ಯ. ಅದನ್ನು ಸರ್ಕಾರ ಬೇರೆಯವರ ಹೆಗಲಿಗೆ ಹೊರಿಸಿ ತಾನು ನುಣುಚಿಕೊಳ್ಳುವುದು ಯಾವ ಕಾರಣಕ್ಕೂ ಸರಿಯಲ್ಲ, ಆಹಾರ ಭದ್ರತೆಗೆ ವರ್ಷಕ್ಕೆ ಲಕ್ಷ ಕೋಟಿ ರುಪಾಯಿಗಳ ವೆಚ್ಚಕ್ಕೆ ತಯಾರಾದಂತೆ, ಸರ್ಕಾರ ಜನರ ಆರೋಗ್ಯ ರಕ್ಷಣೆಗೂ ಹಲವು ಹತ್ತು ಸಾವಿರ ಕೋಟಿ ರುಪಾಯಿಗಳನ್ನು ಮುಡುಪಾಗಿಡಬೇಕು. ಈ ವಿಚಾರದಲ್ಲಿ ಸಬೂಬು ಬೇಡ.