ಸಿದ್ದರಾಮಯ್ಯ ಭೋಪರಾಕ್
ದೀರ್ಘಕಾಲದ ಹೋರಾಟಗಾರ, ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿರುವ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ನೇಮಕವಾಗುತ್ತಿರುವುದು
ದೀರ್ಘಕಾಲದ ಹೋರಾಟಗಾರ, ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿರುವ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ನೇಮಕವಾಗುತ್ತಿರುವುದು ನಾಡಿನ ಹಿತದೃಷ್ಟಿಯಿಂದ ಖಂಡಿತವಾಗಲೂ ಒಳ್ಳೆಯ ಬೆಳವಣಿಗೆ. ಅದು ಸ್ವಾಗತಾರ್ಹವಾದದ್ದು ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಸಿದ್ದರಾಮಯ್ಯ ಅವರಿಗೆ ವೈಯಕ್ತಿಕವಾಗಿ ಇಂತಹ ಅವಕಾಶ 1996 ರಲ್ಲೇ ಜನತಾದಳದಲ್ಲೇ ಸಿಗಬೇಕಾಗಿತ್ತು. ಪರಿಸ್ಥಿತಿಯ ಪಿತೂರಿಯಿಂದ ಅದು ಕೈತಪ್ಪಿ, ಅನಂತರದ ದಿನಗಳಲ್ಲಿ ಅವರ ರಾಜಕೀಯ ಜೀವನದ ಪಥವೇ ಬದಲಾಗಿದ್ದು, ಈಗ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ, ವರಿಷ್ಠರ ಆಶೀರ್ವಾದ ಪಡೆದು ಮುಖ್ಯಮಂತ್ರಿಯ ಪೀಠವನ್ನೇರಲು ಸಜ್ಜಾಗಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಆಯ್ಕೆ ಈಗ ಆಗಿರುವಷ್ಟು ಸಲೀಸಾಗಿ ಆಗುವ ನಂಬಿಕೆ ಬಹುಜನರಲ್ಲಿ ಇರಲಿಲ್ಲ. ಒಂದು ವೇಳೆ ಹೊಸದಾಗಿ ಚುನಾಯಿತರಾಗಿರುವ ಕಾಂಗ್ರೆಸ್ ಶಾಸಕರಲ್ಲಿ ಬಹುಮತೀಯರು ಸಿದ್ದರಾಮಯ್ಯ ಅವರನ್ನು ಬೆಂಬಲಿಸಿದರೂ, ಬೇರೆ ಕಾರಣಗಳಿಂದಾಗಿ ಅವರಿಗೆ ಅವಕಾಶ ಸಿಗದೇ ಹೋಗಬಹುದೆನ್ನುವ ಕೆಟ್ಟ ಅನುಮಾನ ಅವರ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಒಂದು ರೀತಿಯಲ್ಲಿ ಸಿದ್ದರಾಮಯ್ಯ ಅವರ ಆಯ್ಕೆಯ ವಿಧಾನ ಕಾಂಗ್ರೆಸ್ಸಿನ ಪರಂಪರೆಯ ದಾರಿಗಿಂತ ಭಿನ್ನವಾಗಿದೆ. ಈಗ ಅವರನ್ನು ಯಾರೂ ವರಿಷ್ಠರು ಒಲ್ಲದ ಶಾಸಕರ ಮೇಲೆ ಹೇರಿದ ನಾಯಕ ಎಂದು ಟೀಕಿಸುವಂತಿಲ್ಲ. ಅವರಿಗಿರುವ ಬಹುಮತೀಯ ಶಾಸಕರ ಬೆಂಬಲವನ್ನು ಒಪ್ಪಿ, ವರಿಷ್ಠರು ಬೇರೆ ಮಾರ್ಗವನ್ನು ಹುಡುಕುವ ಉಸಾಬರಿಗೇ ಹೋಗದೇ ಇರುವುದು ಕಾಂಗ್ರೆಸ್ ಪಕ್ಷದಲ್ಲೇ ಕಂಡು ಬಂದಿರುವ ಬದಲಾವಣೆಗೆ ಪ್ರತ್ಯಕ್ಷ ಸಾಕ್ಷ್ಯವನ್ನು ಒದಗಿಸಿದೆ. ಕಾಂಗ್ರೆಸ್ಸಿನಲ್ಲಿ ಆಂತರಿಕ ಜನತಂತ್ರದ ಸಿದ್ಧಾಂತದ ಮರುಸ್ಥಾಪನೆಯ ಮೊದಲ ಹೆಜ್ಜೆ ಇದು. ಇಂತಹ ಬದಲಾವಣೆ ಸಿದ್ದರಾಮಯ್ಯ ಅವರಿಗಾಗಿಯೇ ಹೇಳಿ ಮಾಡಿಸಿದ್ದಂತಿದೆ. ಇಲ್ಲದಿದ್ದರೆ, ಸಿದ್ದರಾಮಯ್ಯ ಅವರಂತಹ ನಿಷ್ಠುರವಾದಿ ರಾಜಕೀಯದಲ್ಲಿ ಬಹು ಜನಪ್ರಿಯರಾಗುವುದೂ ಕಷ್ಟವಾಗುತ್ತಿತ್ತು.
ಸಿದ್ದರಾಮಯ್ಯ ಅವರ ಆಯ್ಕೆ ಗುರ್ತಿಸಿರುವ ಇನ್ನೊಂದು ಮಹತ್ವದ ವಿಚಾರ ಎಂದರೆ, ಅವರು ರಾಜಕೀಯವನ್ನು ಆರಂಭಿಸಿದ್ದೂ ಕಟ್ಟರ್ ಕಾಂಗ್ರೆಸ್ ವಿರೋಧಿಯಾಗಿ ಹಾಗೂ ರಾಜಕೀಯ ಜೀವನದಲ್ಲಿ ಬಹುಮುಖ್ಯವಾದ ಅಧಿಕಾರದ ಸ್ಥಾನಗಳನ್ನು (ಮುಖ್ಯಮಂತ್ರಿಯ ಸ್ಥಾನ ಬಿಟ್ಟು) ಪಡೆದಿದ್ದೂ ಕಾಂಗ್ರೆಸ್ ವಿರೋಧಿ ಪಕ್ಷಗಳ ಮೂಲಕವೇ. ಇದನ್ನು ಮರೆತು ಬದಲಾದ ಹೊಸ ಸನ್ನಿವೇಶದಲ್ಲಿ ರಾಜ್ಯದಲ್ಲಿ ಪಕ್ಷದ ಹಾಗೂ ಜನರ ಹಿತವನ್ನು ಸಾಧಿಸುವ ಸಾಮರ್ಥ್ಯ ಹಾಗೂ ಸಂಕಲ್ಪ ಶಕ್ತಿ ಅವರಲ್ಲಿದೆ ಎನ್ನುವುದನ್ನು ವರಿಷ್ಠರು ಗುರ್ತಿಸಿದ್ದು. ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕರಾಗಿಯೂ ಕೆಲಸ ಮಾಡಿದ್ದಾರೆ. ಅಂದರೆ ರಾಜ್ಯವನ್ನು ಆಳುವವರ ಕಷ್ಟ- ಸುಖ ಹಾಗೂ ವಿರೋಧ ಪಕ್ಷಗಳಲ್ಲಿರುವ ನಾಯಕರ ಮೇಲೆ ಇರುವ ರಾಜಕೀಯ ಅನಿವಾರ್ಯ ಒತ್ತಡಗಳೆರಡನ್ನೂ ಅವರು ಚೆನ್ನಾಗಿಯೇ ಬಲ್ಲವರು. ಹಿಂದೆ ಹಲವಾರು ವರ್ಷಗಳ ಕಾಲ ವಿತ್ತಮಂತ್ರಿಯಾಗಿ, ರಾಜ್ಯಾಡಳಿತದಲ್ಲಿ ವೆಚ್ಚದ ಮೇಲಿನ ಪ್ರಾಮುಖ್ಯವನ್ನು ಚೆನ್ನಾಗಿಯೇ ತಿಳಿದುಕೊಂಡಿರುವವರು. ಆಡಳಿತ ವ್ಯವಸ್ಥೆಯ ಎಲ್ಲ ಓಣಿಗಳ ಪರಿಚಯವೂ ಅವರಿಗೆ ಇದೆ.
ಈಗಂತೂ ಕಾಂಗ್ರೆಸ್ಸಿಗೆ ವಿವಾದವೇ ಇಲ್ಲದ ರೀತಿಯಲ್ಲಿ ಸಿದ್ದರಾಮಯ್ಯ ಧೈರ್ಯವಾಗಿ ತಮಗೆ ಸರಿಕಂಡ ರೀತಿಯಲ್ಲಿ ಬಡವರಿಗೆ ಒಳ್ಳೆಯದಾಗುವ ನಿಯಮಗಳನ್ನು ಅಳವಡಿಸಿಕೊಳ್ಳಬಹುದು. ಸಿದ್ದರಾಮಯ್ಯ ಎಂದ ಕೂಡಲೇ ಈಗ ನೆನಪಿಗೆ ಬರುವುದು ಅಲ್ಪಸಂಖ್ಯಾತ ಹಿಂದುಳಿದ ದಲಿತ ಜನವರ್ಗಗಳ ಸಂಘಟನೆ - ಅಹಿಂದದ ಹೋರಾಟ. ಅವರು ರಾಜಕೀಯವನ್ನು ಆರಂಭಿಸಿದ್ದೇ ಆ ಹೋರಾಟದ ಮೂಲಕ. ಈಗ ಹೋರಾಟಗಾರನ ಕೈಲೇ ರಾಜದಂಡವೂ ಸಿಕ್ಕಿರುವುದರಿಂದ ಸಿದ್ದರಾಮಯ್ಯ ಭೋಪರಾಕ್ ಘೋಷಣೆಗೆ ಸಕಾಲ. ಸಿದ್ದರಾಮಯ್ಯ ಅವರ ಹಿಂದೆ ಜನರಿದ್ದಾರೆ. ಮುಂದಿನ ದಾರಿಯೂ ಅವರಿಗೆ ಗೊತ್ತು. ಅವರಿಗೆ ಅಭಿನಂದನೆಯನ್ನು ಸಲ್ಲಿಸುವುದು ಸಜ್ಜನರ ಕರ್ತವ್ಯ. ಅವರಿಗೆ ಒಳ್ಳೆಯದಾಗಲಿ. ಜನರಿಗೂ ಅವರಿಂದ ಒಳ್ಳೆಯದಾಗಲಿ.