ಇಷ್ಟು ದಿನಗಳಲ್ಲಿ ಸಾಕಷ್ಟು ಓದುಗರು ತಪ್ಪಾಯ್ತು...
ಇಷ್ಟು ದಿನಗಳಲ್ಲಿ ಸಾಕಷ್ಟು ಓದುಗರು ತಪ್ಪಾಯ್ತು ತಿದ್ಕೋತೀವಿ, ಕೇಳ್ರಪ್ಪೋ ಕೇಳಿ ನಿಲ್ಲಿಸಿದ್ದೇಕೆ ಎಂದು ಪ್ರಶ್ನಿಸಿ ಪತ್ರಗಳನ್ನು ಬರೆದಿದ್ದಾರೆ. ಅನುಭವ ಮಂಟಪ ಪುಟದ ಬದಲಿಗೆ ಸುದ್ದಿಗಳನ್ನು ಪ್ರಕಟಿಸಿದ್ದಕ್ಕೆ ಕೆಲವು ಓದುಗರು ಬೇಸರ ವ್ಯಕ್ತಪಡಿಸಿದ್ದಾರೆ. ಕಾಯಂ ಅಂಕಣ, ಪುಟಗಳನ್ನು ನಿಲ್ಲಿಸಿದಾಗ ಓದುಗರಿಂದ ಇಂತಹ ತಕರಾರುಗಳು ಸಹಜ. ಇನ್ನು ಕೆಲವು ಓದುಗರು ಅರ್ಥ ಮಾಡಿಕೊಂಡು ಪತ್ರ ಬರೆಯುವುದನ್ನೇ ನಿಲ್ಲಿಸಿದ್ದಾರೆ. ತಪ್ಪಾಯ್ತು ತಿದ್ಕೋತೀವಿ ಇಲ್ಲ ಅಂದಾಕ್ಷಣ ಇಷ್ಟು ದಿನ ತಪ್ಪುಗಳಾಗಲೇ ಇಲ್ಲ ಎಂದರ್ಥವಲ್ಲ. ಅವುಗಳನ್ನು ನಾವು ತಿದ್ದಿಕೊಳ್ಳಲಿಲ್ಲ ಎಂದೂ ಅರ್ಥವಲ್ಲ. ಆದರೆ ಆದ ತಪ್ಪುಗಳನ್ನು ಮತ್ತು ನಾವು ತಿದ್ದಿಕೊಂಡಿದ್ದನ್ನು ನಿಮ್ಮ ಮುಂದಿಡಲು ಸಾಧ್ಯವಾಗಿಲ್ಲ.
ರಾಜ್ಯಾದ್ಯಂತ ಚುನಾವಣೆ ಅಬ್ಬರವಿತ್ತು. ಅದಕ್ಕೆ ಸಂಬಂಧಿಸಿದ ಸುದ್ದಿಯನ್ನು ಓದುಗರಿಗೆ ವಿಸ್ತೃತವಾಗಿ ತಲುಪಿಸಬೇಕಿತ್ತು. ಆ ಕಾರಣಕ್ಕೆ ಪತ್ರಿಕೆಯ ಪುಟಗಳನ್ನು ಹೆಚ್ಚಿಸಲು ಸಾಧ್ಯವಿಲ್ಲ. ಆದ್ದರಿಂದ ಅನುಭವ ಮಂಟಪ ಪುಟವನ್ನೇ ಚುನಾವಣೆ ಸುದ್ದಿಗೆ ಬಳಸಿಕೊಳ್ಳಲಾಯಿತು. ಓದುಗರು ಅರ್ಥ ಮಾಡಿಕೊಳ್ಳುತ್ತಾರೆಂದು ಭಾವಿಸಿದ್ದೇನೆ. ಬೆಂಗಳೂರಿನ ಬನಶಂಕರಿಯಿಂದ ನಾಗರಾಜ ಅವರು ಬರೆಯುತ್ತಾರೆ- 'ಸರ್, ರಾಜಕೀಯ ಸುದ್ದಿಯ ಭರಪೂರ ಭೋಜನವನ್ನು ಕನ್ನಡಪ್ರಭ ಓದುಗರಿಗೆ ಬಡಿಸುತ್ತಿದೆ. ಆದರೆ ನಿಮ್ಮ ಪತ್ರಿಕೆಯ ಸಿಬ್ಬಂದಿ ಎಷ್ಟರಮಟ್ಟಿಗೆ ರಾಜಕೀಯದಲ್ಲಿ ಮುಳುಗಿಹೋಗಿದ್ದಾರೆಂದರೆ ಮೇ 9ರಂದು (ಪುಟ 10)ಯಕ್ಷಗಾನದ ದಿಗ್ಗಜ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಹೆಸರು ಮತ್ತು ಭಾವಚಿತ್ರ ಪ್ರಕಟಿಸಿ, ಅದರ ಕೆಳಗೆ ರಾಜಕೀಯ ನಾಯಕರ ಹೇಳಿಕೆ ಪ್ರಕಟಿಸಿದ್ದೀರಿ. ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ರಾಜಕೀಯ ಹೇಳಿಕೆಗಳನ್ನು ನೀಡಿದ್ದು ನನಗೆ ನೆನಪಿಲ್ಲ' ಎಂದಿದ್ದಾರೆ.
ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಭಾವಚಿತ್ರದ ಜತೆಗೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರರ ಹೇಳಿಕೆಯನ್ನು ಪ್ರಕಟಿಸಲಾಗಿದೆ. ಹೆಸರು ಮತ್ತು ಭಾವಚಿತ್ರ ಸರಿಯಾಗಿದೆ. ಹೇಳಿಕೆ ಮಾತ್ರ ತಪ್ಪಾಗಿದೆ. ಪುಟ ನಿರ್ಮಿಸಿದ ನಂತರ ಓದುವಾಗ ಇತ್ತ ಕಣ್ಣು ಹಾಯಿಸದಿರುವುದೇ ಈ ತಪ್ಪಿಗೆ ಕಾರಣ.
ಹರಳಹಳ್ಳಿ ಪುಟ್ಟರಾಜು ಅವರು ಬರೆಯುತ್ತಾರೆ- 'ಧನಂಜಯಕುಮಾರ ಅವರು ಬಿಜೆಪಿ ಬಿಟ್ಟು ಹಲವು ತಿಂಗಳುಗಳೇ ಕಳೆದರೂ, ನೀವು ಮಾತ್ರ (ಕನ್ನಡಪ್ರಭ ವರದಿಗಾರರು) ಅವರನ್ನು ಬಿಜೆಪಿಯಲ್ಲೇ ಉಳಿಸಲು ಪ್ರಯತ್ನಿಸುತ್ತಿದ್ದೀರಿ ಅನ್ಸುತ್ತೆ. ಕಾರಣ ಏ.14ರಂದು (ಪುಟ4) 'ರೈತರಿಗೆ ಮಾಸಾಶನ, ಸಾಲಮನ್ನಾ: ಯಡಿಯೂರಪ್ಪ' ಎಂಬ ವರದಿಯ ಕೊನೆಯಲ್ಲಿ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯಕುಮಾರ ಅಂತಿದೆ. ಅದು ಕೆಜೆಪಿಯ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯಕುಮಾರ ಎಂದಿರಬೇಕಿತ್ತಲ್ಲವೇ?
ಅದೇ ದಿನದ ಪುಟ 6ರಲ್ಲಿ ನಿಮ್ಮ ನಂಗೆ ಇಷ್ಟಾನೋ ಅಂಕಣದಲ್ಲಿ 3ನೇ ಪ್ಯಾರಾದಲ್ಲಿ ಇಂಥ ಸಂದರ್ಭದಲ್ಲಿ ಕಾಲು ಉದ್ದವಿಲ್ಲದಿದ್ದರೆ ಮರಳಲ್ಲಿ ಕುಸಿದಂತಾಗಿ 'ಹೇಹದ' ಹೆಚ್ಚು ಭಾಗ ಸುಟ್ಟು ಹೋಗಬಹುದು ಎಂದಿದೆ. ಆದರೆ ಇದು ಹೇಹದ ಎಂಬುದರ ಬದಲು ದೇಹದ ಎಂದಿರಬೇಕಿತ್ತು.
ಅಲ್ಲೇ ಕೆಳಗೆ ಪ್ರಕಟವಾಗುವ ಹರಿಯ ಪಂಚ ಕಜ್ಜಾಯದಲ್ಲಿ ಹರಿಕಥೆಯಡಿ ನಗೆಯ ಪ್ರಸಂಗವೊಂದು ಪ್ರಕಟವಾಗಿ ಕೊನೆಯಲ್ಲಿ, ಈ ಹೆಂಗಸು ಅವನ ಕಡೆ ನೋಡಿ, ಸ್ಟುಪಿಡ್ ಅಂದ್ಲು. ರೇಡಿಯೋದಲ್ಲಿ ಲೇಡಿಸ್ ಆ್ಯಂಡ್ ಜಂಟಲ್ಮನ್ ಅಂತ ರಾಹುಲ್ ಗಾಂಧಿ ಭಾಷಣ ಶುರುವಾಯ್ತು ಎಂಬ ವಾಕ್ಯವೊಂದಿದೆ. ಪಕ್ಷಾತೀತ ವ್ಯಕ್ತಿಯಾಗಿ ನನ್ನ ಆಕ್ಷೇಪವೇನೆಂದರೆ, ಹರಿ ಬರೆಯುವ ಪಂಚಕಜ್ಜಾಯ ನಗು, ತಮಾಷೆ ಹಾಗೂ ಮನರಂಜನೆಯ ಹಾಸ್ಯಾತ್ಮಕ ದೃಷ್ಟಿಯಿಂದಲೇ ಆದರೂ ರಾಷ್ಟ್ರಮಟ್ಟದ ರಾಜಕೀಯ ಪಕ್ಷವೊಂದರ ನಾಯಕರೊಬ್ಬರನ್ನು ಈ ರೀತಿಯ ಸ್ಟುಪಿಡ್ ಎಂಬ ಪದಬಳಕೆಯ ಹಾಸ್ಯದೊಂದಿಗೆ ಹೋಲಿಸಿ ಬರೆದಿದ್ದು ಸರಿಯೇ? ಇದು ಸ್ವಲ್ಪ ಅತಿರೇಕದ ಹಾಸ್ಯ ಅನಿಸುವುದಿಲ್ಲವೇ? ಈ ರೀತಿಯ ಹಾಸ್ಯದ ಹೋಲಿಕೆ ಹರಿಗೆ ಹಾಗೂ ಓದುಗರಿಗೆ ಬೇಕಿತ್ತಾ' ಎಂದು ಪ್ರಶ್ನಿಸಿದ್ದಾರೆ.
-ವಿಶ್ವೇಶ್ವರ ಭಟ್