ಮೈಸೂರಿನ ರಾಘವೇಂದ್ರ ಬಡಾವಣೆಯಿಂದ ಡಿ. ರಾಧಾಕೃಷ್ಣ
ಮೈಸೂರಿನ ರಾಘವೇಂದ್ರ ಬಡಾವಣೆಯಿಂದ ಡಿ. ರಾಧಾಕೃಷ್ಣ ಅವರು ಬರೆಯುತ್ತಾರೆ, 'ಪ್ರಮುಖ ಸುದ್ದಿ, ಚಿತ್ರಗಳು ಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾಗುವುದು ಸಹಜ. ಚುನಾವಣೆಯ ಕಾವಿನಿಂದಾಗಿ ನಿಮ್ಮ ಪತ್ರಿಕೆಯ ಮುಖಪುಟದಲ್ಲಿ ರಾಜಕಾರಣಿಗಳ ಭಾವಚಿತ್ರಗಳು ರಾರಾಜಿಸುತ್ತಿದೆ. ಅದು ನಿಮ್ಮ ಪತ್ರಿಕಾ ಸ್ವಾತಂತ್ರ್ಯ ಕೂಡ ಹೌದು.'
'ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ನಿಮಗೆ ಪ್ರಮುಖ ಸುದ್ದಿ ಅನಿಸುವುದಿಲ್ಲವೆ? ಜೈಲಿಗೆ ಹೋಗಿ ಬಂದ, ಬೇಲ್ ಪಡೆದ ರಾಜಕಾರಣಿಗಳ ಭಾವಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸುವುದರಲ್ಲಿರುವ ಕಾಳಜಿ ನಿಮಗೆ ಪ್ರಜಾಪ್ರಭುತ್ವದ ಬಹುದೊಡ್ಡ ರಾಷ್ಟ್ರವಾದ ನಮ್ಮ ದೇಶಕ್ಕೆ ಸಂವಿಧಾನ ರಚಿಸಿದ, ಮಹಾನ್ ಮಾನವತಾವಾದಿಯೂ ಆದ ಅಂಬೇಡ್ಕರ್‌ರವರ ಭಾವಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸುವುದರಲ್ಲಿ ಏಕೆ ಇಲ್ಲ? 'ಜಾತಿಯ ಭೂತ' ನಿಮ್ಮನ್ನು ಕಾಡುತ್ತಿರಬಹುದು. ನೀವೇನೂ ದೇವರಲ್ಲವಲ್ಲ. ಪತ್ರಿಕಾ ಸ್ವಾತಂತ್ರ್ಯದ ಅಮಲಿನಲ್ಲಿ ಪತ್ರಿಕಾ ಧರ್ಮವನ್ನು ಮರೆಯುವುದು ಪ್ರಧಾನ ಸಂಪಾದಕರಿಗೆ ನ್ಯಾಯವೆನಿಸುವ ವಿಷಯವೆ? ವಾಕ್ ಸ್ವಾತಂತ್ರ್ಯಕ್ಕೆ ಜಯವಾಗಲಿ' ಎಂದಿದ್ದಾರೆ.
ಮೊದಲಿಗೆ ಸ್ಪಷ್ಟಪಡಿಸುವ ಸಂಗತಿಯೆಂದರೆ ರಾಜಕಾರಣಿಗಳ ಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸುವುದು ಪತ್ರಿಕಾ ಸ್ವಾತಂತ್ರ್ಯವಲ್ಲ. ಪತ್ರಿಕಾ ಸ್ವಾತಂತ್ರ್ಯಕ್ಕೆವಿಶಾಲವಾದ ಅರ್ಥವಿದೆ. ಅದನ್ನು ಕೇವಲ ಚಿತ್ರ ಪ್ರಕಟಿಸುವುದು ಎಂದು ಭಾವಿಸಿರುವುದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ತುಂಬ ಕಾಳಜಿಯಿಂದ ರಾಜಕಾರಣಿಗಳ ಫೋಟೊ ಪ್ರಕಟಿಸುತ್ತೇವೆ ಎಂದು ಭಾವಿಸುವುದನ್ನು ಅಜ್ಞಾನ ಎಂದು ಪರಿಗಣಿಸಿದರೂ ತಪ್ಪಿಲ್ಲ. ಮುಖಪುಟದಲ್ಲಿ ಬೇರೆಯವರ ಫೋಟೋಗಳೂ ಪ್ರಕಟವಾಗುತ್ತವೆ. ಪ್ರಮುಖ ಸುದ್ದಿ ಯಾವುದೋ ಅದಕ್ಕೆ ಸಂಬಂಧಿಸಿದಂತೆ ಚಿತ್ರಗಳನ್ನು ಪ್ರಕಟಿಸಲಾಗುತ್ತದೆಯೇ ಹೊರತು, ನಾವು ವಿಶೇಷ ಕಾಳಜಿಯಿಂದ ಯಾರದ್ದೋ ಫೋಟೋವನ್ನು ಪ್ರಕಟಿಸುವುದಿಲ್ಲ ಎಂಬುದು ಸರಳ ಸತ್ಯ. ಇನ್ನು ಜಾತಿಯ ಸಂಗತಿ. ಮುಖಪುಟದಲ್ಲಿ ಪ್ರಕಟಿಸುವ ಚಿತ್ರದಲ್ಲಿರುವ ವ್ಯಕ್ತಿ ಯಾವ ಜಾತಿಗೆ ಸೇರಿದವ, ಉಪಜಾತಿ ಯಾವುದು, ಯಾವ ಧರ್ಮದವರು ಎಂಬುದನ್ನೆಲ್ಲ ವಿಚಾರ ಮಾಡಲು ಸಮಯವಿರುವುದಿಲ್ಲ. ಅದು ಅಕ್ಷರಶಃ ಸಾಧ್ಯವೂ ಇಲ್ಲ. ಪತ್ರಿಕಾ ಕಚೇರಿ ಕುರಿತು ಸಾಮಾನ್ಯಜ್ಞಾನ ಉಳ್ಳವರು ಯಾರೂ ಇಂತಹ ಕ್ಷುಲ್ಲಕ ಆರೋಪ ಮಾಡುವುದಿಲ್ಲ.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನದ ಫೋಟೊ ಹಾಕಿದಾಕ್ಷಣ ಆತನನ್ನು ದಲಿತ ಪರ ಎಂದು ಕರೆಯುವುದು ಮತ್ತು ಫೋಟೊ ಪ್ರಕಟಿಸದಿದ್ದರೆ ದಲಿತ ವಿರೋಧಿ ಎಂದು ಪರಿಗಣಿಸುವುದು ಸರಿಯಲ್ಲ. ಅಂಬೇಡ್ಕರ್ ಅವರು ದಲಿತರೇ ಆಗಿದ್ದರೂ, ಅವರು ಕೇವಲ ಜಾತಿ, ಧರ್ಮಕ್ಕೆ ಸೀಮಿತರಾಗದೇ ದೇಶಕ್ಕೆ ಸಂವಿಧಾನ ನೀಡಿದ ಮಹಾನ್ ವ್ಯಕ್ತಿ. ಅವರನ್ನು ಜಾತಿ ವಾದಿಗಳೆಲ್ಲ ಸೇರಿ ಒಂದು ಜಾತಿಗೆ ಸೀಮಿತಗೊಳಿಸುತ್ತಿದ್ದಾರೆ.
ಅಂಬೇಡ್ಕರ್ ಅವರಲ್ಲದೇ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅದೆಷ್ಟೋ ಮಹನೀಯರ ಜಯಂತಿ, ಪುಣ್ಯತಿಥಿಗಳನ್ನು ಆಚರಿಸಲಾಗುತ್ತದೆ. ಒಮ್ಮೊಮ್ಮೆ ಅವುಗಳನ್ನೆಲ್ಲ ಮುಖಪುಟದಲ್ಲಿ ಪ್ರಕಟಿಸಲಾಗುವುದಿಲ್ಲ. ಅದೆಲ್ಲದಕ್ಕೂ ಜಾತಿ, ಧರ್ಮದ ಬಣ್ಣ ಕಟ್ಟಿದರೆ ಅದನ್ನು ಕೇವಲ ಸಂಕುಚಿತ ಮನಸ್ಸು ಎಂದಷ್ಟೇ ಹೇಳಬಹುದು.
-ವಿಶ್ವೇಶ್ವರ ಭಟ್