ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರು ಹಂಪಿನಗರದಿಂದ ವಿ.ಎಸ್. ಕಲ್ಯಾಣಸುಂದರಂ ಅವರು ಬರೆಯುತ್ತಾರೆ- 'ಏ.24ರ 'ಕನ್ನಡಪ್ರಭ' ಮುಖಪುಟದಲ್ಲಿ (ಟಿಕೆಟ್ ಹಂಚಿಕೆಯಲ್ಲಿ ಪ್ರಬಲ ಜಾತಿಗಳಿಗೇ ಮಣೆ) ಮುಖ್ಯವಾದ ವಿಷಯದಲ್ಲಿ ಎದ್ದು ಕಾಣುವ, ಮುಖಭಂಗವಾಗುವಂತಹ ತಪ್ಪು. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳಿಗೆ ಒಂದೇ ಚಿಹ್ನೆ ಪ್ರಕಟಿಸಿದ್ದೀರಿ. ಇದು ಉದ್ದೇಶಪೂರ್ವಕ ತಪ್ಪೇ? ಇಲ್ಲವಾದರೆ ಚುನಾವಣೆ ನಂತರ ಜೆಡಿಎಸ್- ಕಾಂಗ್ರೆಸ್ 'ಕೈ' ಹಿಡಿಯಲಿದೆ ಎಂಬ ಮುನ್ಸೂಚನೆ ಸಂಕೇತವೇ?' ಎಂದಿದ್ದಾರೆ.
ಇದು ಉದ್ದೇಶ ಅಥವಾ ದುರುದ್ದೇಶ ಪೂರ್ವಕ ತಪ್ಪಲ್ಲ. ಪುಟ ನಿರ್ಮಿಸುವ ಸಂದರ್ಭದಲ್ಲಾದ ತಪ್ಪು. ಚುನಾವಣೆ ಸಮೀಕ್ಷೆ ಪ್ರಕಟಿಸಿದ್ದರಿಂದ ಚುನಾವಣೆ ನಂತರ ಏನಾಗುತ್ತದೆ ಎಂಬುದನ್ನು ಈ ರೀತಿ ಪರೋಕ್ಷವಾಗಿ ಅಥವಾ ತಪ್ಪಿನ ಮೂಲಕ ಓದುಗರ ಮುಂದಿಡುವ ಅಗತ್ಯ ಖಂಡಿತ ಇಲ್ಲ. ಈ ತಪ್ಪು ಬೆಂಗಳೂರು ನಗರ ಆವೃತ್ತಿಯಲ್ಲಿ ಮಾತ್ರ ಆಗಿದ್ದು, ಉಳಿದ ಆವೃತ್ತಿಗಳಲ್ಲಿ ಸರಿಯಾಗಿ ಪ್ರಕಟವಾಗಿತ್ತು.
ತೀರ್ಥಹಳ್ಳಿಯಿಂದ ಕುತ್ಪಾಡಿ ಜಯಪ್ರಕಾಶ ಹೆಗ್ಡೆ ಅವರು ಬರೆಯುತ್ತಾರೆ- 'ಸ್ವಾಮಿ, ಪದೇ ಪದೇ ಶಿವಮೊಗ್ಗ ವಾರ್ತೆಯಲ್ಲೇ ನಿಮ್ಮಿಂದ ತಪ್ಪಾಗುತ್ತಾ ಇರುವುದು ವಿಶೇಷ. ಏ.15ರಂದು ಪುಟ 2ರಲ್ಲಿ '100 ದೂರು ಕೊಡಿ ಎದುರಿಸುತ್ತೇನೆ: ಈಶ್ವರಪ್ಪ' ಶಿರೋನಾಮೆ ಅಡಿಯಲ್ಲಿ, ನಾನು ಜೈಲಿಗೆ ಹೋಗಲೂ ತಯಾರಿದ್ದೇನೆ 'ಒಂದೇ ಮಾತರಂ' ಎಂದಿದೆ. ಅದು 'ವಂದೇ ಮಾತರಂ' ಎಂದಾಗಬೇಕಿತ್ತು' ಎಂದಿದ್ದಾರೆ.
ಬೆಂಗಳೂರಿನಿಂದ ಮಾಧವರಾವ್ ಅವರು ಬರೆಯುತ್ತಾರೆ- 'ಏ.14ರಂದು 'ಮಹಿಳೆಯರಿಬ್ಬರ ಹತ್ಯೆ, ಆರೋಪಿ ಸೆರೆ' ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಸುದ್ದಿಯಲ್ಲಿ ಕೊಲೆ ಪಾತಕಿಯನ್ನು ಬಹುವಚನದಲ್ಲಿ ಸಂಬೋಧಿಸುವ ಅಗತ್ಯವಾದರೂ ಏನಿತ್ತು? ಮೊದಲ ಪ್ಯಾರಾದಲ್ಲಿ ಏಕವಚನ ಬಳಸಿ, ನಂತರದ ಪ್ಯಾರಾಗಳಲ್ಲಿ ಆತನನ್ನು ಬಹುವಚನದಲ್ಲಿ ಸಂಭೋಧಿಸಿರುವುದು ಆಶ್ಚರ್ಯಕರ. ಸುದ್ದಿ ಬರೆದವರು ಆರೋಪಿಗೇನಾದರೂ ಸಂಬಂಧಿಕರೇ? ಅಥವಾ ಇನ್ನಾವುದೇ ಪಾಲುದಾರಿಕೆ ಹೊಂದಿರುವವರೇ?' ಎಂದಿದ್ದಾರೆ.
ಸ್ವಲ್ಪ ಏನಾದರೂ ಇಂಥದ್ದೇನಾದರೂ ಆದರೆ ಸಾಕು ಎಷ್ಟು ಇಸ್ಕೊಂಡರು, ಸಂಬಂಧಿಕರಾ, ಬೇರೆ ಪಾಲುದಾರಿಕೆ ಇದೆಯಾ ಎಂಬಂತಹ ಪ್ರಶ್ನೆಗಳು ಅತ್ಯಂತ ಸರಾಗವಾಗಿ ಬಂದುಬಿಡುತ್ತವೆ. ಅದುಬಿಟ್ಟು ಬೇರೆ ಸಾಧ್ಯತೆಗಳನ್ನು ಜನ ಯೋಚನೆ ಕೂಡ ಮಾಡುವುದಿಲ್ಲ.
ಆದರೆ ಕೆಲವೊಮ್ಮೆ ಬರೆಯುವ ಭರದಲ್ಲಿ ಈ ರೀತಿಯ ತಪ್ಪಾಗುತ್ತದೆ. ನಿಜವಾಗಿ ಹೇಳಬೇಕೆಂದರೆ ಆತನನ್ನು ಕೊಲೆಗಾರ, ಕೊಲೆಪಾತಕ ಎಂದು ಕರೆಯುವುದು ಸರಿಯಲ್ಲ. ಆತ ಕೊಲೆ ಆರೋಪಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಆತನಿಗೆ ಶಿಕ್ಷೆಯಾದರೆ ಮಾತ್ರ ಆತನನ್ನು ಕೊಲೆಪಾತಕಿ, ಕೊಲೆಗಾರ ಎಂದೆಲ್ಲ ಕರೆಯಬಹುದು. ಅಲ್ಲಿಯವರೆಗೆ ಆತ ಕೇವಲ ಕೊಲೆ ಆರೋಪಿ. ಕೆಲವೊಮ್ಮೆ ಆತನೇ ಕೊಲೆಗಾರ ಎಂಬುದು ಗೊತ್ತಿರುತ್ತದೆ. ಆದರೆ ನ್ಯಾಯಾಲಯ ಶಿಕ್ಷೆ ಕೊಡದೇ ನಾವು ಆತನನ್ನು ಕೊಲೆಗಾರ ಎಂದು ಕರೆಯುವಂತಿಲ್ಲ.
-ವಿಶ್ವೇಶ್ವರ ಭಟ್