ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಬಲಪಂಥ ಟೆರರ್ ಯಾರದ್ದು?

Vishwanath S
Updated On : 23 May 2013, 9:55 am

ಮಹಾರಾಷ್ಟ್ರದ ಮಾಲೆಗಾಂವ್‌ನ ಬಾಂಬ್ ಸ್ಫೋಟದಲ್ಲಿ 37 ಮಂದಿ ನಿಧನರಾದ ಘಟನೆಯಾದ ಏಳು ವರ್ಷಗಳ ಅನಂತರ ಪೊಲೀಸರು ನ್ಯಾಯಾಲಯದಲ್ಲಿ ಮೊದಲ ಆರೋಪ ಪಟ್ಟಿಯನ್ನು ಸಲ್ಲಿಸಿ, ಅದರಲ್ಲಿ ನಾಲ್ವರು ಹಿಂದೂ ಜನಾಂಗಕ್ಕೆ ಸೇರಿದವರ ಹೆಸರುಗಳನ್ನು ಹಾಕಿದ್ದಾರೆ.
ಇದಕ್ಕೆ ಮೊದಲು ಈ ಬಾಂಬ್ ಸ್ಫೋಟಕ್ಕೆ ಒಂದು ಮುಸ್ಲಿಮ್ ಸಂಘಟನೆ ಕಾರಣವೆಂದು ಭಾವಿಸಿ, ಒಂಬತ್ತು ಮಂದಿ ಮುಸ್ಲಿಮರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ಸಂಝೋತಾ ಎಕ್ಸ್‌ಪ್ರೆಸ್ ಮೇಲಿನ ಬಾಂಬ್ ದಾಳಿಯ ತನಿಖೆಯ ಸಂಬಂಧದಲ್ಲಿ ಅಸೀಮಾನಂದ ಎನ್ನುವವರು ಅಭಿನವ ಭಾರತ್ ಸಂಸ್ಥೆಯ ಹೆಸರನ್ನು ಹೇಳಿದ ಅನಂತರ ಮಾಲೆಗಾಂವ್ ಸ್ಫೋಟಕ್ಕೆ ಹೊಣೆಯನ್ನು ಆ ಸಂಸ್ಥೆಯ ಮೇಲೆ ಹೊರಿಸಿ, ಸಾಧ್ವಿ ಪ್ರಜ್ಞಾ ಹಾಗೂ ಶ್ರೀಕಾಂತ ಪುರೋಹಿತ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು. ಈ ಹಂತದಲ್ಲಿ ಹಿಂದೆ ಬಂಧಿತರಾಗಿದ್ದ ಮುಸ್ಲಿಮ್ ಬಂಧಿತರ ಜಾಮೀನು ಅರ್ಜಿಯನ್ನು ಪೊಲೀಸರು ವಿರೋಧಿಸಲಿಲ್ಲವಾದ್ದರಿಂದ ಅವರಿಗೆ ಜೈಲಿನಿಂದ ಮುಕ್ತಿ ದೊರೆಯಿತು.
ಇಷ್ಟೆಲ್ಲ ಆದ ಮೇಲೆ, ಪೊಲೀಸರು ಸಲ್ಲಿಸಿದ ಮೊದಲ ಆರೋಪ ಪಟ್ಟಿಯಲ್ಲಿ ಸಾಧ್ವಿ ಪ್ರಜ್ಞಾ ಹಾಗೂ ಶ್ರೀಕಾಂತ ಪುರೋಹಿತರ ಹೆಸರಿಲ್ಲ. ಏನಿದರ ಅರ್ಥ? ಮೊದಲು ದಾಳಿ ನಡೆಸಿದ್ದು ಮುಸ್ಲಿಮ್ ಭಯೋತ್ಪಾದಕರೆಂದು ಹೇಳಿದ್ದೂ ಪೊಲೀಸರೇ. ಅನಂತರ ಆ ದಾಳಿಗೆ ಹೊಣೆಗಾರರು ಬಲಪಂಥೀಯ ಹಿಂದೂ ಭಯೋತ್ಪಾದಕರೆಂದು ಹೇಳುತ್ತಿರುವವರೂ ಅವರೇ.
ಭಯೋತ್ಪಾದಕರಿಗೆ ಜಾತಿ-ಮತದ ಭೇದವಿಲ್ಲ ಎಂದು ಹೇಳುತ್ತಲೇ, ಪೊಲೀಸರೇ ಮುಸ್ಲಿಮ್ - ಹಿಂದೂ ಭಯೋತ್ಪಾದನೆಗಳು ಬೇರೆ ಬೇರೆ ಎಂದು ಹೇಳುವುದರ ಹಿಂದೆ ಯಾವ ಶಕ್ತಿಯ ಕೈವಾಡ ಇದೆಯೋ ಗೊತ್ತಿಲ್ಲ. ಪೊಲೀಸರ ಹೇಳಿಕೆಗಳಲ್ಲಿ ಕಣ್ಣಿಗೇ ಕಾಣುವಂತೆ ರಾಜಕೀಯ ಇರಬಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement