ಪ್ರತ್ಯೇಕತೆ ಯಾಕೆ ಬೇಕು?
ನಮ್ಮ ಸಂವಿಧಾನದಲ್ಲಿ ಭಾಷಾವಾರು ಹಾಗೂ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಅವರದ್ದೇ ಆದ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ, ನಡೆಸಿಕೊಂಡು ಬರುವ ಹಕ್ಕಿದೆ...
ನಮ್ಮ ಸಂವಿಧಾನದಲ್ಲಿ ಭಾಷಾವಾರು ಹಾಗೂ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಅವರದ್ದೇ ಆದ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ, ನಡೆಸಿಕೊಂಡು ಬರುವ ಹಕ್ಕಿದೆ. ಅದನ್ನು ಸಂವಿಧಾನ ಜಾರಿಗೆ ಬರುವುದಕ್ಕೆ ಮುಂಚೆಯೂ ಕ್ರಿಶ್ಚಿಯನ್ ಹಾಗೂ ಮುಸ್ಲಿಮ್ ಸಂಘಟನೆಗಳು ಕಾನ್ವೆಂಟ್- ಮದರಸಾಗಳ ಸ್ಥಾಪನೆಯ ಮೂಲಕ ಚಲಾಯಿಸುತ್ತಿದ್ದವು.
ಆರಂಭದಲ್ಲಿ ಇಂತಹ ಸಂಸ್ಥೆಗಳು ಧಾರ್ಮಿಕ ವಿಧಿ-ವಿಧಾನಗಳಿಗೆ ಅಗತ್ಯವಿರುವ ವಿಷಯಗಳಲ್ಲಿ ಶಿಕ್ಷಣ ನೀಡಲಿವೆ ಎಂದು ಜನ ಭಾವಿಸಿದ್ದರೂ ಕಾಲಕ್ರಮದಲ್ಲಿ ಆ ಸಂಸ್ಥೆಗಳೂ ಆಧುನಿಕ, ಸಮಕಾಲೀನ ಶಿಕ್ಷಣ ವ್ಯವಸ್ಥೆಯಲ್ಲೂ ಪಾಲುದಾರಿಕೆಯನ್ನು ಪಡೆದಿದ್ದೂ ನಿಜ. ಇಲ್ಲಿ ಮತ ಭೇದವಿರಲಿಲ್ಲ.
ದೇಶದ ಅನೇಕ ಕಡೆಗಳಲ್ಲಿ ಕ್ರೈಸ್ತ ಮಿಷನರಿಗಳು ಸ್ಥಾಪಿಸಿದ ಸಾರ್ವತ್ರಿಕ ಶಿಕ್ಷಣ ಸಂಸ್ಥೆಗಳು ಇಂದಿಗೂ ಶೈಕ್ಷಣಿಕ ವ್ಯವಸ್ಥೆಯಲ್ಲಿ ದಾರಿದೀಪದಂತೆಯೇ ಇರುವುದು ನಿಜ. ಹಲವಾರು ವಿಶ್ವವಿದ್ಯಾಲಯಗಳು ಪ್ರಖ್ಯಾತವಾಗಿವೆ.
ಉತ್ತರ ಪ್ರದೇಶದ ಅಲಿಘರದ ಮುಸ್ಲಿಮ್ ಯೂನಿವರ್ಸಿಟಿ, ಹೈದರಾಬಾದ್ನ ಉಸ್ಮಾನಿಯಾ ಯೂನಿರ್ವಸಿಟಿ, ವಾರಾಣಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯಗಳು ಇಂತಹ ಸಂಸ್ಥೆಗಳಿಗೆ ಉದಾಹರಣೆಯ ರೂಪದಲ್ಲಿವೆ. ಈ ಸಂಸ್ಥೆಗಳಿಗೆ ಇತರ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ನೆರವು ಕೊಡುವಂತೆಯೇ ಸರ್ಕಾರ ನೆರವನ್ನು ಕೊಡುತ್ತಿದೆ. ಈ ವಿಚಾರದಲ್ಲಿ ಯಾವ ತಕರಾರೂ ಇರಲಿಲ್ಲ. ಆದರೆ ಈಗ ಕೇಂದ್ರ ಸರ್ಕಾರದ ಅಲ್ಪ ಸಂಖ್ಯಾತರ ಹಿತರಕ್ಷಣೆ ಮಂತ್ರಾಲಯವೇ, ಶ್ರೀರಂಗಪಟ್ಟಣದಲ್ಲಿ ಟಿಪ್ಪೂ ಕೇಂದ್ರ ವಿಶ್ವವಿದ್ಯಾಲಯವೂ ಸೇರಿದಂತೆ ದೇಶದಲ್ಲಿ ಐದು ಮುಸ್ಲಿಮ್ ಕೇಂದ್ರ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಚಿಂತನೆಯನ್ನು ಪ್ರಕಟಿಸಿದಾಗ ಅದಕ್ಕೆ ವಿರೋಧ ಬಂದಿದ್ದೇಕೆ?
ಕೇಂದ್ರ ಸರ್ಕಾರದ ನೆರವಿನಿಂದ ನಡೆಯಬೇಕಾದ ಈ ವಿಶ್ವವಿದ್ಯಾಲಯಗಳಲ್ಲಿ ಪ್ರತ್ಯೇಕತೆಯ ಅಗತ್ಯವನ್ನು ಪ್ರತಿಪಾದಿಸಿದ್ದೇ ವಿರೋಧಕ್ಕೆ ಕಾರಣ. ಸಂವಿಧಾನದಲ್ಲಿ ಜಾತಿ- ಮತಗಳ ಆಧಾರದ ಮೇಲೆ ಪ್ರತ್ಯೇಕವಾಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅವಕಾಶವಿದೆಯೇ ಎನ್ನುವುದನ್ನು ಪರಿಶೀಲಿಸಿ ಸರ್ಕಾರಕ್ಕೆ ಸೂಕ್ತ ಸಲಹೆ ನೀಡಲು ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿಯ ಅಧ್ಯಕ್ಷ ಸುಖದೇವ್ ಥೋರಟ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಇದು ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ವಿಷಯ.
ಪ್ರಕಟಿತ ವರದಿಗಳಂತೆ, ಈ ಸಮಿತಿ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿ, ಅಲ್ಪಸಂಖ್ಯಾತರು (ಭಾಷೆ- ಧರ್ಮ ಆಧರಿತ) ತಮಗೆ ಬೇಕಾದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕನ್ನು ಪಡೆದಿದ್ದರೂ, ಸರ್ಕಾರ ಅಥವಾ ಸರ್ಕಾರಿ ಸಂಸ್ಥೆಗಳು, ನಿಗಮಗಳು ಅಂತಹ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದಕ್ಕೆ ಅವಕಾಶವಿಲ್ಲವೆಂದು ಹೇಳಿದೆ.
ದೇಶದಲ್ಲಿ ಹಲವು ಸಂಸ್ಥೆಗಳು ವಿಶೇಷವಾದ ಕಾಯಿದೆಯ ಮೂಲಕ ಸ್ಥಾಪನೆಯಾಗಿರುವುದೂ ಉಂಟು. ಆ ವಿಚಾರ ಈಗ ನ್ಯಾಯಾಲಯಗಳ ಮುಂದಿದೆ. ಕೆಲವು ಸಂಸ್ಥೆಗಳಲ್ಲಿ ನಿರ್ದಿಷ್ಟ ಭಾಷೆಗಳು ಅಥವಾ ಧಾರ್ಮಿಕ ವಿಚಾರಗಳಿಗೆ ವಿಶೇಷವಾದ ವಿಭಾಗ ಹಾಗೂ ಒತ್ತನ್ನು ಕೊಡುವುದಕ್ಕೂ ಅವಕಾಶವಿದೆ. ಆದರೆ ಎಲ್ಲೂ ಪ್ರತ್ಯೇಕತೆಯನ್ನು ಒಪ್ಪುವಂತಿಲ್ಲ. ಈಗ ಪ್ರಕಟವಾಗಿರುವ ಅಲ್ಪಸಂಖ್ಯಾತ ಕೇಂದ್ರ ವಿಶ್ವ ವಿದ್ಯಾಲಯಗಳನ್ನು ವಕ್ಫ್ ಮಂಡಳಿಯ ಅಧೀನದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಪ್ರತಿಷ್ಠಾನದ ಮೂಲಕ ಸ್ಥಾಪಿಸುವ ಉದ್ದೇಶವಿದೆ. ಸಚಿವ ರಹಮಾನ್ ಖಾನ್ ಹಿಂದೆ ತಿಳಿಸಿದ್ದರು.
ಜ್ಞಾನ ದಾಸೋಹದ ವಿಚಾರದಲ್ಲಿ ಯಾವುದೇ ರೀತಿಯ ಪ್ರತ್ಯೇಕತೆಯ ವ್ಯವಸ್ಥೆಯ ಆಚರಣೆಗೆ ಅವಕಾಶವಿರಬಾರದು. ಅದಕ್ಕೆ ಸೆಕ್ಯೂಲರ್ ಸರ್ಕಾರಗಳು ಬೆಂಬಲ ಕೊಡಬಾರದು. ಹಿಂದಿನ ಹೈದರಾಬಾದ್ ಸಂಸ್ಥಾನದಲ್ಲಿ ಉರ್ದು ಭಾಷೆಯ ಮೂಲಕವೇ ಬೋಧನೆ ನಡೆಯುತ್ತಿತ್ತು. ಆದರೆ ಅಲ್ಲಿ ಎಲ್ಲರಿಗೂ ಅವಕಾಶವಿತ್ತು. ಹಳೆಯ ಮೈಸೂರು ಸಂಸ್ಥಾನದಲ್ಲಿ ಬೇಡಿಕೆ ಇದ್ದ ಶಾಲೆಗಳಲೆಲ್ಲ ಉರ್ದು ಭಾಷೆಯ ವಿಭಾಗಗಳಿದ್ದವು. ಅಲ್ಲೂ ಪ್ರತ್ಯೇಕತೆ ಇರಲಿಲ್ಲ. ರಾಜ್ಯಕ್ಕೊಂದು ಹೊಸ ಕೇಂದ್ರೀಯ ವಿಶ್ವವಿದ್ಯಾಲಯ ಬರುವುದು ಒಳ್ಳೆಯದು. ಆದರೆ ಅಲ್ಲಿ ಪ್ರತ್ಯೇಕತೆಗೆ ಅವಕಾಶವಿರಬಾರದು.