ಬಿಜೆಪಿ: ಜೇಠ್ಮಲಾನಿ ಉಚ್ಚಾಟನೆ
ಭಾರತೀಯ ಜನತಾ ಪಾರ್ಟಿಯ ಅತ್ಯುನ್ನತ ಮಟ್ಟದ ಒಳಜಗಳಕ್ಕೆ ಕೊನೆಯೇ ಇಲ್ಲವೇನೋ ಎನಿಸುತ್ತಿದೆ. ಚುನಾವಣೆಯ ಮುನ್ನಾದಿನಗಳಲ್ಲಿ ಯಾವ ಪಕ್ಷವೂ ಶೃಂಗ ನಾಯಕರ ಸಮುದಾಯದಲ್ಲಿ ಸಂಘರ್ಷವನ್ನು ಅಪೇಕ್ಷಿಸುವುದಿಲ್ಲ. ಆದರೆ ಈಗ ಬಿಜೆಪಿ ಅನಪೇಕ್ಷಿತವಾಗಿ ಸಂಘರ್ಷದ ಸ್ಥಿತಿಯನ್ನು ತಲುಪಿದೆ.
ಪಕ್ಷದ ಅತಿ ಹಿರಿಯರಲ್ಲಿ ಒಬ್ಬರಾದ, ಕ್ರಿಮಿನಲ್ ಕಾಯಿದೆಯಲ್ಲಿನ ಎಲ್ಲ ಒಳದಾರಿಗಳನ್ನು ಬಲ್ಲ ನಿಸ್ಸೀಮ ವಯೋವೃದ್ಧ ವಕೀಲ, ರಾಜ್ಯಸಭೆಯ ಸದಸ್ಯ ರಾಮ್ ಜೇಠ್ಮಲಾನಿ ಅವರನ್ನು ಪಕ್ಷದ ಸಂಸದೀಯ ಮಂಡಳಿ ಅಶಿಸ್ತು ಹಾಗೂ ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ಪಕ್ಷದಿಂದಲೇ ಉಚ್ಚಾಟಿಸಿದೆ.
ರಾಮ್ ಜೇಠ್ಮಲಾನಿ ಕಳೆದ ವರ್ಷ, ಪಕ್ಷದಲ್ಲಿ ಅಧ್ಯಕ್ಷರಾಗಿದ್ದ ನಿತಿನ್ ಗಡ್ಕರಿ ಅವರ ವಿರುದ್ಧ ಮಾಡಿದ್ದ ಟೀಕೆಯೇ ಈಗಿನ ಶಿಸ್ತಿನ ಕ್ರಮಕ್ಕೆ ಕಾರಣ.
ರಾಮ್‌ಜೇಠ್ಮಲಾನಿ ಅವರು ಶಿಸ್ತು ಭಂಗದ ಆರೋಪವನ್ನು ಎದುರಿಸುತ್ತಿರುವುದು ಇದೇ ಮೊದಲ ಬಾರಿ ಏನೂ ಅಲ್ಲ. ಹಿಂದೆ ಲಖನೌದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ವಿರುದ್ಧವೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ, ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ರಾಜ್ಯಸಭೆಯ ಸದಸ್ಯತ್ವವನ್ನು ನೀಡಲಾಗಿತ್ತು. ಆದರೂ ರಾಮ್‌ಜೇಠ್ಮಲಾನಿ ಅವರ ಹರಿತವಾದ ನಾಲಿಗೆ ಸುಮ್ಮನಿರಲಿಲ್ಲ. ಇನ್ನು ಮುಂದೆಯೂ ಅವರು ಸುಮ್ಮನಿರುವುದಿಲ್ಲ. ಆ ಸಂಕಟವನ್ನು ಬಿಜೆಪಿ ಅನುಭವಿಸಲೇಬೇಕು.