ಮುಖ್ಯಮಂತ್ರಿ: ಚಾಟಿ ಬೆದರಿಕೆ
ಗ್ರಾಮೀಣ ಅಭಿವೃದ್ಧಿ, ಬಡಜನರ ಯೋಗಕ್ಷೇವು, ಸಮುದಾಯದ ನೆಮ್ಮದಿಗೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿರುವ ಬೇರು ಮಟ್ಟದ ಕಾರ್ಯಕ್ರಮಗಳು ಕರ್ನಾಟಕದಲ್ಲಿ ತೃಪ್ತಿಕರವಾಗಿ ಜಾರಿಗೆ ಬಂದಿಲ್ಲವೆನ್ನುವುದನ್ನು ತಿಳಿಯುವುದಕ್ಕೆ ಕೇಂದ್ರ ಸಚಿವ ಜೈರಾಮ್ ರಮೇಶ್ ಅವರು ಮುಖ್ಯಮಂತ್ರಿಗೆ ಅಂಕಿ-ಅಂಶಗಳನ್ನು ನೀಡುವ ಅಗತ್ಯವೇ ಇರಲಿಲ್ಲ.
ಏಪ್ರಿಲ್-ಮೇ ಮೊದಲ ಭಾಗದಲ್ಲಿ ರಾಜ್ಯದ ಎಲ್ಲ ಕಡೆ ಚುನಾವಣೆ ಪ್ರಚಾರಕ್ಕೆಂದು ಎಲ್ಲ ಪಕ್ಷಗಳ ನಾಯಕರೂ, ಹೋಗಬಹುದಾದ, ಹೋಗಬಾರದ ಭಾಗಗಳಿಗೆಲ್ಲ ಹೋಗಿ ಪರಿಸ್ಥಿತಿಯ ಪ್ರತ್ಯಕ್ಷದರ್ಶನ ಮಾಡಿ ಬಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆ ದಿನಗಳಲ್ಲಿ ರಾಜ್ಯದ ಎಲ್ಲ ಕಡೆಗಳಲ್ಲೂ ಪ್ರವಾಸ ಮಾಡಿದ್ದರು. ಬತ್ತಿದ ನದಿಗಳು, ಮಳೆಬಾರದ ಒಣಭೂಮಿ, ಗ್ರಾಮೀಣ ಬಡಜನರಿಗೆ ಕೆಲಸವೇ ಇಲ್ಲದೆ ಅವರು ಉಪವಾಸ ಮಾಡಬೇಕಾಗಿದ್ದ ದಿನಗಳವು. ಅಂತಹ ಸಮಯದಲ್ಲೂ ಕೇಂದ್ರ ಸರ್ಕಾರದ ಬಹುದೊಡ್ಡ, ಅತಿ ಜನಪ್ರಿಯ ಯೋಜನೆಯಾದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲವೆನ್ನುವ ದೂರುಗಳು ಎಲ್ಲ ಕಡೆ ಕೇಳಿ ಬಂದಿದ್ದವು. ಇನ್ನೂ ಮಳೆ ಬಂದಿಲ್ಲ. ಕೃಷಿಗೆ ಮುನ್ನ ಕೈಗೊಳ್ಳಬೇಕಾದ ಕೆಲಸವೂ ಆಗಿಲ್ಲ. ಎರಡು ತಿಂಗಳಿಂದ ಗ್ರಾಮೀಣ ಉದ್ಯೋಗ ಪೂರೈಕೆ ಖಾತ್ರಿ ಯೋಜನೆಯಂತೆ ಒಂದೇ ಒಂದು ಹೊಸ ಉದ್ಯೋಗವೂ ರೂಪಗೊಂಡಿಲ್ಲ ಎಂದರೆ ಆ ಕಾಲದಲ್ಲಿ ಸರ್ಕಾರಕ್ಕೆ ಗರ ಬಡಿದಿತ್ತೇನು? ಗ್ರಾಮೀಣ ಅಭಿವೃದ್ಧಿ, ಬಡಜನರ ಯೋಗಕ್ಷೇವುದ ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ವಿಶೇಷ ಅಧಿಕಾರಿಗಳೇ ಹೊಣೆಗಾರರೆನ್ನುವುದೇನೂ ಹೊಸ ನಿಯಮವಲ್ಲ.
ನಿಜ. ರಾಜ್ಯದಲ್ಲಿ ಯಾರೂ ಹೊಟ್ಟಿಗಿಲ್ಲದೇ ಹಸಿವೆಯಿಂದ ಸತ್ತಿಲ್ಲ. ಪವಾಡ ಸದೃಶ ರೂಪದಲ್ಲಿ ಹಳ್ಳಿಗಳ ಜನ ಜೀವಧಾರಣೆ ಮಾಡಿಕೊಂಡಿದ್ದಾರೆ. ಇದನ್ನು ಈಗ ತಿಳಿದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ರಾಜ್ಯದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಪ್ರಸ್ತಾಪಿಸಿ ಇನ್ನು ಮುಂದೆ ಇಂತಹ ಆಲಸ್ಯವನ್ನು ಸಹಿಸುವುದಿಲ್ಲವೆಂದೂ, ಇಂತಹ ಕಾರ್ಯಕ್ರಮ ವಿಫಲವಾದರೆ ಅದಕ್ಕೆ ಜವಾಬ್ದಾರಿಯನ್ನು ನಿರ್ದಿಷ್ಟ ಅಧಿಕಾರಿಗಳ ಮೇಲೆ ಹೊರಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಖಚಿತವೆಂದೂ ಹೇಳಿದ್ದಾರೆ. ನಿಜ. ಅಧಿಕಾರಿಗಳು ಇಂತಹ ವೈಫಲ್ಯಕ್ಕೆ ಬಗೆ ಬಗೆಯ ನೆಪಗಳನ್ನು ಹೇಳುತ್ತಾರೆ. ಹಣ ಮಂಜೂರಾಗಿರಲಿಲ್ಲ, ಸಿಬ್ಬಂದಿ ಇರಲಿಲ್ಲ, ಕೆಲವು ಕಡೆ ಕೆಲಸ ಕೇಳಿಕೊಂಡು ಶ್ರಮಿಕರೇ ಬರಲಿಲ್ಲ ಎನ್ನುವ ನೆಪಗಳೂ ಇವೆ. ಈ ನೆಪಗಳನ್ನು ಹೇಳುವ ಅಧಿಕಾರಿಗಳೇ ಅಲ್ಲವೇ ಅದನ್ನು ಬಗೆಹರಿಸಬೇಕಾದವರು? ಸಿದ್ದರಾಮಯ್ಯ ಅವರು ಈ ವಿಚಾರದಲ್ಲಿ ಇನ್ನಷ್ಟು ಆಳಕ್ಕಿಳಿದು ಪರಿಸ್ಥಿತಿಯ ಕಠೋರ ವಾಸ್ತವವನ್ನು ತಿಳಿದುಕೊಳ್ಳಬೇಕು.
ಆ ಕಾಲದಲ್ಲೂ ಎಲ್ಲ ಜಿಲ್ಲೆಗಳಿಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳಿದ್ದರಲ್ಲ. ಅವರು ಈ ವಿಚಾರದಲ್ಲಿ ಏನಾದರೂ ಟಿಪ್ಪಣಿ ಬರೆದಿದ್ದರೆ ಅದನ್ನು ಪ್ರಕಟಿಸಬೇಕು. ಇಲ್ಲದಿದ್ದರೆ ವೈಫಲ್ಯದಲ್ಲಿ ಅಧಿಕಾರಸ್ಥ ರಾಜಕಾರಣಿಗಳ ಪಾಲೂ ಇದೆ ಎಂದೇ ಭಾವಿಸಬೇಕು.
ಸಿದ್ದರಾಮಯ್ಯ ಅವರು ಮೊದಲ ಸಭೆಯಲ್ಲೇ ಪ್ರಕಟಿಸಿರುವ ಜನಪರ ಕಾಳಜಿಯನ್ನು ಮೆಚ್ಚಲೇಬೇಕು. ಆದರೆ ಆ ಕಾಳಜಿ ಕೇವಲ ಎಚ್ಚರಿಕೆಗೆ ಸೀಮಿತವಾಗಬಾರದು. ಇನ್ನು ಮೂರು ತಿಂಗಳಲ್ಲಿ ಪರಿಸ್ಥಿತಿ ಬದಲಾಗುವ ಪ್ರಕ್ರಿಯೆ ಆರಂಭವಾಗಿದೆ ಎನ್ನುವ ಅನುಭವ ಜನರಲ್ಲಿ ಮೂಡಬೇಕು. ಹಾಗೆ ಸಿದ್ದರಾಮಯ್ಯ ಹಾಗೂ ಅವರ ಮಂತ್ರಿಗಳ ರಾಜ್ಯಭಾರ ಆರಂಭವಾಗಬೇಕು. ಮೊದಲ ಮೂರು ತಿಂಗಳಲ್ಲಿ ಯಾವ ಬದಲಾವಣೆಯೂ ಆಗದೇ ಇದ್ದರೆ ಮುಂದೆ ಅದು ಆಗುವುದೇ ಇಲ್ಲ.
ಸಿದ್ದರಾಮಯ್ಯ ಅವರ ಚಾಟಿ ಪ್ರಯೋಗ, ಅವರ ವರುಣಾ ಕ್ಷೇತ್ರದಿಂದಲೇ ಆರಂಭವಾಗಲಿ. ಮಾತಿನ ಪೌರುಷವನ್ನು ಕೆಲಸದಲ್ಲೂ ತೋರಿಸಲಿ.