ಕುಡುಕರ ರಾಜ್ಯ ಬೇಡ
ಮುಖ್ಯಮಂತ್ರಿಗಳು 'ಕಡು ಬಡವರಿಗೆ ಒಂದು ಕೆ.ಜಿ ಅಕ್ಕಿಗೆ ಒಂದು ರುಪಾಯಿ' ಪ್ರಕಟಿಸಿ ತಿಂಗಳಿಗೆ ಮೂವತ್ತು ಕೆ.ಜಿ ಅಕ್ಕಿ ವಿತರಿಸುವಂತೆ ಸೂಚಿಸಿದ್ದಾರೆ...
ಮುಖ್ಯಮಂತ್ರಿಗಳು 'ಕಡು ಬಡವರಿಗೆ ಒಂದು ಕೆ.ಜಿ ಅಕ್ಕಿಗೆ ಒಂದು ರುಪಾಯಿ' ಪ್ರಕಟಿಸಿ ತಿಂಗಳಿಗೆ ಮೂವತ್ತು ಕೆ.ಜಿ ಅಕ್ಕಿ ವಿತರಿಸುವಂತೆ ಸೂಚಿಸಿದ್ದಾರೆ. ಜೊತೆಗೆ ಅಗ್ಗದ ಮದ್ಯ ತಯಾರಿಕೆ ಬಗ್ಗೆ ಸಾಧ್ಯತೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಮದ್ಯ ಮಾರಾಟದಿಂದ ರಾಜ್ಯದ ಬೊಕ್ಕಸಕ್ಕೆ ಹಣ ಹರಿದುಬರಬಹುದು, ಆದರೆ ರಾಜ್ಯ 'ಕುಡುಕರ ರಾಜ್ಯ' ವಾಗುವುದು. ನಿಂತು ತೂಕಡಿಸುತ್ತಿದ್ದವನಿಗೆ ಹಾಸಿಗೆ ಹಾಕಿದಂತೆ ಆಗುವುದು. ಹಳ್ಳಿಗಳಲ್ಲಿ ಈಗ ಸ್ವಲ್ಪ ನೆಮ್ಮದಿ ವಾತಾವರಣವಿದೆ. ಅಗ್ಗದ ಮದ್ಯ ಬಂದರೆ ಇಡೀ ಊರು ಕುಡುಕರ ಊರಾಗುವುದು. ಸಂಜೆ ಹೊತ್ತಿನಲ್ಲಿ ಮಹಿಳೆಯರು ಬೀದಿಯಲ್ಲಿ ತಿರುಗಾಡುವುದೇ ಕಷ್ಟವಾಗುತ್ತದೆ. ಸಭ್ಯರು ಮನೆಯಲ್ಲಿ ವಾಸಮಾಡಲಾಗದು. ಅವರ (ಕುಡುಕರ) ಬಾಯಿಯಲ್ಲಿ ಬರುವ ಶಬ್ದಗಳಂತೂ ಕೇಳಲಾಗದಷ್ಟು ಅಶ್ಲೀಲವಾಗಿರುತ್ತವೆ. ಇದರಿಂದ ಗ್ರಾಮದಲ್ಲಿ ಅಶಾಂತಿ ಉಂಟಾಗುತ್ತದೆ.
ಇನ್ನು ಕುಡುಕರ ಮನೆಯ ಬಗ್ಗೆ ನೋಡಿದಾಗ ಹೆಂಡತಿ ದುಡಿಯುವುದು ಅಗ್ಗದ ಅಕ್ಕಿಗಾದರೆ ಗಂಡ ದುಡಿಯುವುದು ಅಗ್ಗದ ಮದ್ಯಕ್ಕಾಗುತ್ತದೆ, ಅಗ್ಗದ ಬೆಲೆಗೆ ಮದ್ಯ ಸಿಕ್ಕಿದರೆ ಕೋಳಿ ಕೂಗುತ್ತಿದ್ದಂತೆ 'ಕಾಫಿ-ಟೀ' ಯ ರೀತಿ ಮದ್ಯ ಕುಡಿಯಲಾರಂಭಿಸುತ್ತಾರೆ, ಈಗಲೂ ಅನೇಕರಿಗೆ ಬೆಳಗಿನ ತಿಂಡಿಯೇ ಕುಡಿತವಾಗಿದೆ. ಕುಡಿಯದೆ ಅವರು ಯಾವ ಕೆಲಸಕ್ಕೂ ಕೈ ಹಚ್ಚುವುದಿಲ್ಲ. ಇನ್ನು ಅಗ್ಗದ ಮದ್ಯ ಸಿಕ್ಕಿದರೆ ಕೇಳಬೇಕೆ? 'ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯರು ಹೇಳಿದ್ದು ಹಾಲು ಅನ್ನ' 'ಕುಡುಕ ಬಯಸಿದ್ದು ಮದ್ಯ, ಸರ್ಕಾರ ಕೊಟ್ಟಿದ್ದು ಮದ್ಯ' ಎನ್ನುವಂತಾಗುತ್ತದೆ. ದುಡಿಯುವುದನ್ನೇ ನಿಲ್ಲಿಸಿ ಬೆಳಗಿನಿಂದ ಸಂಜೆವರೆಗೆ ಕುಡಿಯುವ ಹವ್ಯಾಸಿಗಳಾಗಿ ಮನೆ ರಣರಂಗವಾಗುತ್ತದೆ. ಬೆಳೆಯುವ ಮಕ್ಕಳು ಸಹ ಅಡ್ಡದಾರಿ ತುಳಿಯಲು ದಾರಿ ದೀಪವಾಗುತ್ತದೆ. ಕೆಟ್ಟ ಹವ್ಯಾಸ ಮನೆಗಳಲ್ಲಿ ನಡೆಯುತ್ತಿದ್ದರೆ ಮಕ್ಕಳು ಸುಲಭವಾಗಿ ಅದೇ ದಾರಿ ತುಳಿಯುತ್ತಾರೆ. 'ಮನೆಯೇ ಮೊದಲ ಪಾಠಶಾಲೆ' ಇಲ್ಲಿ ಉತ್ತಮ ಗುಣಗಳನ್ನು ಬೆಳೆಸಿಕೊಂಡರೆ ಮುಂದೆ ಸಮಾಜದಲ್ಲಿ ಸತ್ಪ್ರಜೆಯಾಗಲು ಸಾಧ್ಯ. ಇಲ್ಲವಾದರೆ ಸಮಾಜಕ್ಕೆ ಕಂಟಕವಾಗುತ್ತಾರೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಈ ನಿಟ್ಟಿನಲ್ಲಿ ಚಿಂತಿಸಬೇಕು. ಅಗ್ಗದ ಮದ್ಯ ಜಾರಿಗೆ ತಂದುದ್ದೇ ಆದರೆ ಸಿದ್ಧರಾಮಯ್ಯನವರ ಒಳ್ಳೆಯ ಹೆಸರಿಗೆ ಕಳಂಕವಾಗುತ್ತದೆ. 'ಕುಡುಕರ ರಾಜ್ಯದ ದೊರೆ' ಎಂಬ ಪಟ್ಟ ಕಟ್ಟಿಕೊಳ್ಳಬೇಕಾಗುತ್ತದೆ. ಒಂದು ಲೆಕ್ಕದಲ್ಲಿ ಮದ್ಯವನ್ನು ನಿಷೇಧಿಸುವುದೇ ಉತ್ತಮ. ಮದ್ಯದಿಂದಲೇ ಸರ್ಕಾರ ನಡೆಸಬೇಕಾಗಿಲ್ಲ. ಸರ್ಕಾರಕ್ಕೆ ಬರುವ ಆದಾಯದ ಮೂಲಗಳು ಬಹಳಷ್ಟಿವೆ. ತಮ್ಮ ಚಿಂತನೆ ರಾಜ್ಯದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಬೇಕೆಂಬುದು ಸರಿಯಾದ ಚಿಂತನೆಯೇ. ಆದರೆ ಅಗ್ಗದ ಮದ್ಯ ತಯಾರಿಸಿ ಹಳ್ಳಿ-ಹಳ್ಳಿಯಲ್ಲೂ ಕುಡುಕರ ಸಂಖ್ಯೆ ಹೆಚ್ಚಿಸಿ ಸಮಾಜದ ನೆಮ್ಮದಿಯನ್ನು ಕದಡಿ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು ಸರಿಯೇ?
-ಸಾ.ಮ. ಶಿವಮಲ್ಲಯ್ಯ, ರಾಮನಗರ
ಭ್ರಷ್ಟಾಚಾರಕ್ಕೆ ಅಂಕುಶವಿಲ್ಲವೇ?
ಭ್ರಷ್ಟಾಚಾರ ದೇಶದ ಅತಿ ದೊಡ್ಡ ಪಿಡುಗು. ಇದನ್ನು ತಡೆಯುವುದಕ್ಕಾಗಿ ಅಸ್ತಿತ್ವಕ್ಕೆ ಬಂದ ಸಂಸ್ಥೆ 'ಲೋಕಾಯುಕ್ತ'. ದಿನಬೆಳಗಾದರೆ ಮಾಧ್ಯಮಗಳಲ್ಲಿ ಕೋಟಿಗಟ್ಟಲೆ ಬೇನಾಮಿ ಹಣ, ಚಿನ್ನ, ವಾಹನಗಳ ಬಗ್ಗೆ ಸುದ್ದಿ ಬರುತ್ತಲೇ ಇರುತ್ತದೆ. ಈಗಂತೂ ಇಂಥವರ್ಯಾರೂ ಶಿಕ್ಷೆಗೊಳಗಾದ ಉದಾಹರಣೆಯಿಲ್ಲ. ಬಲ್ಕಿ ಅದೇ ಹುದ್ದೆಯಲ್ಲಿದ್ದು ಭಡ್ತಿ ಪಡೆದು ಐಶಾರಾಮಿ ಜೀವನ ನಡೆಸುತ್ತಿರುವವರನ್ನೂ ಕಾಣುತ್ತೇವೆ. ಮಾಧ್ಯಮಗಳಲ್ಲಿ ಪ್ರಕಟವಾದ 'ಕರ್ನಾಟಕ ಲೋಕಸೇವಾ ಆಯೋಗದ ಕರ್ಮಕಾಂಡ' ಪ್ರತಿಭಾವಂತರನ್ನು ಕಂಗೆಡಿಸಿದೆ. ಏನಾಗಿದೆ ಭಾರತೀಯ ಧರ್ಮಕ್ಕೆ? ಹಿಂದಿನ ಸರ್ಕಾರ ವರ್ಷಾನುಗಟ್ಟಲೆ ಕುಂಟು ನೆಪ ಹೇಳಿ ಲೋಕಾಯುಕ್ತರ ನೇಮಕವನ್ನು ಮುಂದೆ ತಳ್ಳುತ್ತಾ ಹೋಯಿತು. ಈಗಿನ ಸರ್ಕಾರವೂ ನೇಮಕಾತಿಗೆ ಮುಂದಾಗುವುದೋ ಇಲ್ಲವೋ? ರಾಜಕಾರಣಿಗಳಿಗಂತೂ ಭ್ರಷ್ಟಾಚಾರ ದಂಧೆ ಅವ್ಯಾಹತವಾಗಿ ನಡೆಯಬೇಕು, ರಾಮರಾಜ್ಯ ಚರಿತ್ರೆಗೆ ಮಾತ್ರ ಸೀಮಿತವಾಗಿರಬೇಕು ಅಲ್ಲವೇ? ಅದು ಎಲ್ಲಾ ಪಕ್ಷಗಳಿಗೂ 'ಕಬ್ಬಿಣದ ಕಡಲೆ' ಎನ್ನುವುದು ಸುಳ್ಳಲ್ಲ. ಲೋಕಾಯುಕ್ತರನ್ನು ನೇಮಕ ಮಾಡಲು ಮನಸ್ಸಿಲ್ಲವೆಂದರೆ ಆ ಸಂಸ್ಥೆಯನ್ನಾದರೂ ವಿಸರ್ಜಿಸಿಬಿಡಿ. ಅದರ ಘನತೆಯಾದರೂ ಉಳಿದೀತು!
-ಎಮ್.ಮೃತ್ಯುಂಜಯಪ್ಪ, ಚಿತ್ರದುರ್ಗ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com