ಬ್ಯಾಂಕ್ಗಳ ಮೇಲಿನ ಆರೋಪ ಸ್ವಲ್ಪ ಸತ್ಯಾಂಶ ಇದೆ
ಇಂಟರ್ನೆಟ್ ವಾರ್ತಾ ಸಂಸ್ಥೆ, ಕೋಬ್ರಾ ಪೋಸ್ಟ್ ಹಲವು ಪ್ರತಿಷ್ಠಿತ ಬ್ಯಾಂಕ್ಗಳು ಹಾಗೂ ವಿತ್ತೀಯ ಸಂಸ್ಥೆಗಳ ಕಾರ್ಯಾಚರಣೆ ಕುರಿತಂತೆ ಕುಟುಕು ತನಿಖೆ ನಡೆಸಿದ ಅನಂತರ ಕೆಲವು ಬ್ಯಾಂಕ್ಗಳ ಅಧಿಕಾರಿಗಳು ಕಳ್ಳ ಹಣವನ್ನು ಸಾಚಾ ಹಣವನ್ನಾಗಿ ಮಾಡುವ ಪ್ರಯತ್ನದಲ್ಲಿ ನೆರವು ನೀಡಿದ್ದಾರೆ ಎಂದು ಆರೋಪಿಸಿ ಅದಕ್ಕೆ ಬೆಂಬಲವಾಗಿ ತನ್ನಲ್ಲಿದ್ದ ಸಾಕ್ಷ್ಯ, ಆಧಾರಗಳನ್ನು ಒದಗಿಸಿದ್ದು ಈಗ ಹಳೆಯ ಮಾತು.
ಕೋಬ್ರಾ ಪೋಸ್ಟ್ನ ತನಿಖಾ ವರದಿ ಪ್ರಕಟವಾದ ಕೂಡಲೇ, ಸಾಮಾನ್ಯವಾಗಿ ಇಂತಹ ಸನ್ನಿವೇಶಗಳಲ್ಲಿ ಆಗುವಂತೆ, ಕಳ್ಳಹಣ ಸಾಚಾ ಆಗುವಂತಹದ್ದೇನೂ ಆಗಿಲ್ಲ. ಅಲ್ಲಿ ಇಲ್ಲಿ ಅನುಸರಿಸಬೇಕಾದ ಕ್ರಮಗಳಲ್ಲಿ ಅಲ್ಪ ಸ್ವಲ್ಪ ತಪ್ಪುಗಳಾಗಿರಬಹುದಷ್ಟೇ ಎನ್ನುವ ಸಮಾಧಾನದ ಹೇಳಿಕೆಯೂ ಪ್ರಕಟವಾಯಿತು.
ಈ ಪ್ರಕರಣ ಅಲ್ಲಿಗೇ ನಿಲ್ಲಲಿಲ್ಲ. ಹಲವಾರು ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಅತಿಪ್ರತಿಷ್ಠಿತವೆನಿಸಿದ ಬ್ಯಾಂಕ್ಗಳಲ್ಲೂ ಹೀಗಾಗಿರಬಹುದೇ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಲು ಹೊರಟವು. ಕೋಬ್ರಾಪೋಸ್ಟ್ ಪ್ರಕಟಿಸಿದ್ದಕ್ಕಿಂತ ಹೆಚ್ಚಿನ ಮಾಹಿತಿ ಆ ಸಂಸ್ಥೆಯಲ್ಲಿ ಇರಬಹುದೆನ್ನುವ ಮಾತೂ ಕೇಳಿಬಂದಿತ್ತು.
ರಿಸರ್ವ್ ಬ್ಯಾಂಕ್ ಸುಮ್ಮನಿರಲಿಲ್ಲ. ಸದ್ದು-ಗದ್ದಲವಿಲ್ಲದೇ, ಆಂತರಿಕ ತನಿಖೆ ನಡೆಸಿದಾಗಲೇ ಅಲ್ಲಿನ ಅಧಿಕಾರಿಗಳಿಗೆ ಇದು ಸರಳವಾದ, ಅಲ್ಲಿ-ಇಲ್ಲಿ, ಅಷ್ಟಿಷ್ಟು ತಪ್ಪಾದ ವಿಚಾರ ಅಲ್ಲ ಎನ್ನುವುದರ ಅರಿವಾಯಿತು. ಆದರೆ ಇದಕ್ಕೆಲ್ಲ ರಿಸರ್ವ್ ಬ್ಯಾಂಕ್ ಪ್ರಚಾರ ಕೊಡಲಿಲ್ಲ. ಆ ನಿರ್ಧಾರ ಅರ್ಥವಾಗುವಂತಹದ್ದು.
ಆದರೆ ರಿಸರ್ವ್ ಬ್ಯಾಂಕ್ನ ಗವರ್ನರ್ ದುವ್ವೂರಿ ಸುಬ್ಬರಾವ್ ಹೋದ ಕಡೆಗಳಲ್ಲೆಲ್ಲ, ಔಪಚಾರಿಕ-ಅನೌಪಚಾರಿಕ ಕೂಟಗಳಲ್ಲಿ ಕಳ್ಳಹಣ ಸಾಚಾ ಆಗುವುದಕ್ಕೆ ಬ್ಯಾಂಕ್ಗಳ ನೆರವಿನ ಪ್ರಕರಣದ ಪ್ರಸ್ತಾಪವಾಗುವುದು ವಾಡಿಕೆಯಾದಾಗ ಅಲ್ಪ-ಸ್ವಲ್ಪ ವಿವರಗಳು ಪ್ರಕಟವಾದವು.
ಗುರುವಾರ ರಿಸರ್ವ್ ಬ್ಯಾಂಕಿನ ಗವರ್ನರ್ ಸುಬ್ಬರಾವ್ ಅಹಮದಾಬಾದ್ನ ಒಂದು ಸಭೆಯಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರ ನೀಡಿ ಆ (ಕೋಬ್ರಾ ಪೋಸ್ಟ್) ವರದಿಯಲ್ಲಿ ಸ್ವಲ್ಪ ಸತ್ಯಾಂಶವಿದೆ ಎಂದು ಗಂಭೀರವಾಗಿಯೇ ಹೇಳಿದ್ದಾರೆ.
ನಿಜ. ಸುಬ್ಬರಾವ್ ಅವರು ಕಳ್ಳಹಣ ಸಾಚಾ ಆಗುವ ದಂಧೆಯ ಪ್ರಸ್ತಾಪವನ್ನು ನೇರವಾಗಿ ಮಾಡಿಲ್ಲ. ಆದರೆ ಅವರು ಕೋಬ್ರಾ ಪೋಸ್ಟ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿಯೂ ಇಲ್ಲ. ಇನ್ನೂ ತನಿಖೆ ನಡೆದಿದೆ. ಹಲವು ಕಡೆಗಳಿಂದ ವಿವರಗಳನ್ನು ಪಡೆಯಬೇಕಾಗಿದೆ ಎಂದು ಅರ್ಥ ಗರ್ಭಿತ ರೀತಿಯಲ್ಲಿ ಸ್ವಲ್ಪ ಸತ್ಯಾಂಶವನ್ನು ತಿಳಿಸಿದ್ದಾರೆ.
ಇದು ತುಂಬಾ ಗಂಭೀರವಾದ ವಿಚಾರ. ರಹಸ್ಯವಾಗಿ ತನಿಖೆ ನಡೆಸಿ, ಎಲ್ಲಾದರೂ ತಪ್ಪಾಗಿದ್ದರೆ, ತಪ್ಪಿತಸ್ಥರನ್ನು ಪತ್ತೆ ಹಚ್ಚಿ, ಅವರಿಗೆ ಬ್ಯಾಂಕ್ಗಳ ನಿಯಮಗಳಂತೆ ವಿಧಿಸಬೇಕಾದ ಶಿಕ್ಷೆಯನ್ನು ವಿಧಿಸಿದರೆ, ಅದರಿಂದ ಏನೂ ಪ್ರಯೋಜನವಾಗುವುದಿಲ್ಲ.
ಇಂತಹ ವಿಚಾರಗಳಲ್ಲಿ ಘಟನೆಯ ಅನಂತರ ರಿಸರ್ವ್ ಬ್ಯಾಂಕ್ ಹಾಗೂ ಸಂಬಂಧಪಟ್ಟ ಬ್ಯಾಂಕ್ಗಳು ಕೈಗೊಂಡ ಕ್ರಮಗಳಿಗೆ ಪ್ರಚಾರ ನೀಡಲೇಬೇಕು. ಅಂತಹ ಕ್ರಮದಿಂದಲೇ ಸಾರ್ವಜನಿಕರು ಬ್ಯಾಂಕುಗಳಲ್ಲಿ ಇಟ್ಟಿರುವ ವಿಶ್ವಾಸ ಇನ್ನಷ್ಟು ಹೆಚ್ಚುವುದು. ಇಂತಹ ಪ್ರಕರಣಗಳಲ್ಲಿ, ತಪ್ಪಿತಸ್ಥರು ಯಾರೇ ಆಗಿರಲಿ ಅವರನ್ನು ಶಿಕ್ಷಿಸುವುದಷ್ಟೇ ಅಲ್ಲ ಉಳಿದೆಲ್ಲ ವಿವರಗಳನ್ನು ಬಹಿರಂಗವಾಗಿ ಪ್ರಕಟಿಸಬೇಕು. ಈಗಾಗಲೇ ಪ್ರಕಟವಾಗಿರವ ವರದಿಗಳಂತೆ ಕೆಲವು ಅತಿಪ್ರತಿಷ್ಠಿತ ಖಾಸಗಿ ಬ್ಯಾಂಕ್ಗಳಲ್ಲಿ ಇಂತಹ ವ್ಯವಹಾರ ಆಗಿದೆ ಎನ್ನುವ ಭಾವನೆ ಜನರಲ್ಲಿದ್ದರೂ, ಕೆಲವು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳೂ ಆರೋಪಗಳಿಂದ ಮುಕ್ತವಾಗಿಲ್ಲ ಎನ್ನಲಾಗಿದೆ. ಈ ವ್ಯವಹಾರ ಕೇವಲ ರಿಸರ್ವ್ ಬ್ಯಾಂಕ್ ಹಾಗೂ ಸಂಬಂಧಪಟ್ಟ ಬ್ಯಾಂಕ್ಗಳಿಗೇ ಸೀಮಿತವಾದ ವ್ಯವಹಾರ ಅಲ್ಲ. ಈಗಾಗಲೇ ಪ್ರಕರಣಕ್ಕೆ ಸಾರ್ವಜನಿಕ ಮೌಲ್ಯದ ಲೇಪ ಹಚ್ಚಿಕೊಂಡಿದೆ. ಅದನ್ನು ಕಡೆಗಾಣಿಸಬಾರದು.