ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಐತಿಹಾಸಿಕ ತೀರ್ಪು

Mainashree
Updated On : 1 Nov 2013, 10:06 am

ಪ್ರಜಾಪ್ರಭುತ್ವದ ಮೂರು ಆಧಾರ ಸ್ತಂಭಗಳಲ್ಲಿ ಕಾರ್ಯಾಂಗಕ್ಕೆ ವಿಶೇಷ ಸ್ಥಾನವಿದೆ. ಏಕೆಂದರೆ ಶಾಸಕಾಂಗವು ಕೈಗೊಳ್ಳುವ ಯೋಜನೆಗಳೆಲ್ಲ ಕಾರ್ಯಗತವಾಗುವುದು ಈ ಕಾರ್ಯಾಂಗದ ಮೂಲಕವೇ. ಕಾರ್ಯಾಂಗವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲು ಶಾಸಕಾಂಗವು ಪ್ರಯತ್ನಿಸುತ್ತಲೇ ಇರುತ್ತದೆ. ಸರ್ಕಾರವೊಂದು ಬದಲಾಯಿತು ಅಂದಕೂಡಲೇ ಅಧಿಕಾರಿಗಳ ಬದಲಾವಣೆ ಪರ್ವ ಆರಂಭವಾಗಿ ಬಿಡುವುದು. ಆಯಕಟ್ಟಿನ ಸ್ಥಳಗಳಲ್ಲಿ ತಮಗೆ ಬೇಕಾದ ಅಧಿಕಾರಿಗಳನ್ನು ತಂದು ಕೂರಿಸುವುದು ಶಾಸಕಾಂಗದ ರೂಢಿಯಾಗಿಬಿಟ್ಟಿದೆ. ಅಧಿಕಾರಶಾಹಿಯನ್ನು ರಾಜಕೀಯ ಹಸ್ತಕ್ಷೇಪದಿಂದ ಮುಕ್ತಗೊಳಿಸುವುದು ಸಾಧ್ಯವಿಲ್ಲವೇನೋ ಎನ್ನುವಂಥ ಸ್ಥಿತಿ ತಲೆದೋರಿತ್ತು. ಈ ಪರಿಸ್ಥಿತಿಯ ವಿರುದ್ಧ ನಿವೃತ್ತ ಹಿರಿಯ ಅಧಿಕಾರಿಗಳು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ದಾಖಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪೀಠವು ಅಧಿಕಾರಿಗಳು ಜನಪ್ರತಿನಿಧಿಗಳ ಮೌಖಿಕ ಆದೇಶದ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹೇಳಿದೆ. ಇದೊಂದು ಐತಿಹಾಸಿಕ ತೀರ್ಪು ಎಂದೇ ಹೇಳಬೇಕು. ಅಧಿಕಾರಿಗಳನ್ನು ಮನಬಂದಂತೆ ವರ್ಗಾವಣೆ ಮಾಡುವುದಕ್ಕೂ ಸುಪ್ರೀಂಕೋರ್ಟ್ ಅಂಕುಶ ಹಾಕಿದೆ. ಒಬ್ಬ ಅಧಿಕಾರಿಯನ್ನು ಒಂದು ಸ್ಥಳಕ್ಕೆ ವರ್ಗಾವಣೆ ಮಾಡಿದರೆ ಆ ಸ್ಥಳದಲ್ಲಿ ಅವರು ಇಂತಿಷ್ಟು ಕಾಲ ಇರಲೇಬೇಕು ಎಂಬ ಕಾಯಿದೆಯನ್ನು ಕಡ್ಡಾಯಗೊಳಿಸಲೂ ಅದು ಸೂಚಿಸಿದೆ. ನೇಮಕಾತಿ, ವರ್ಗಾವಣೆ ಮತ್ತು ಅಧಿಕಾರಿಗಳ ವಿರುದ್ಧ ಕೈಗೊಳ್ಳಬಹುದಾದ ಶಿಸ್ತುಕ್ರಮ ಕುರಿತು ಹೊಸ ಕಾನೂನು ರಚಿಸಬೇಕು ಎಂದು ಹೇಳಿರುವುದು ಮಹತ್ವದ ಅಂಶವಾಗಿದೆ. ಏಕೆಂದರೆ ಶಾಸಕಾಂಗದ ಹಿಡಿತದಿಂದ ತಪ್ಪಿಸಿಕೊಂಡ ಅಧಿಕಾರಶಾಹಿ ತನ್ನ ಮೂಗಿನ ನೇರಕ್ಕೇ ನಡೆಯುವ ಅಪಾಯವಿತ್ತು. ಸಾರ್ವಜನಿಕ ಸೇವೆಯಲ್ಲಿರುವವರು ಉತ್ತರದಾಯಿತ್ವದಿಂದ ತಪ್ಪಿಸಿಕೊಳ್ಳದಂತೆ ಸುಪ್ರೀಂಕೋರ್ಟ್ ಈ ಮೂಲಕ ಕಡಿವಾಣ ಹಾಕಿದೆ. ಅಧಿಕಾರಸ್ಥ ರಾಜಕೀಯ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳುವುದೇ ಅಸಾಧ್ಯ ಎನ್ನುವಂಥ ಸ್ಥಿತಿ ಇದ್ದ ಈ ದಿನಗಳಲ್ಲಿ ಸುಪ್ರೀಂಕೋರ್ಟ್‌ನ ಈ ಆದೇಶ ಅಧಿಕಾರಶಾಹಿಗೆ ನಿರಾಳತೆ ಒದಗಿಸಿದೆ. ರಾಬರ್ಟ್ ವಾದ್ರಾ ಮತ್ತು ಡಿಎಲ್‌ಎಫ್ ಪ್ರಕರಣದಲ್ಲಿ ದಿಟ್ಟ ಕ್ರಮ ಕೈಗೊಂಡ ಅಶೋಕ ಖೇಮ್ಕಾ, ಉತ್ತರ ಪ್ರದೇಶದ ಐಎಎಸ್ ಅಧಿಕಾರಿ ದುರ್ಗಾ ಶಕ್ತಿ ಮೊದಲಾದವರು ಅಧಿಕಾರಸ್ಥ ರಾಜಕಾರಣಿಗಳಿಂದ ಯಾವ ರೀತಿ ಕಿರುಕುಳ ಅನುಭವಿಸಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಕರ್ನಾಟಕದಲ್ಲಿಯೂ ಅಧಿಕಾರಸ್ಥರ ವಿರುದ್ಧ ಕ್ರಮಕ್ಕೆ ಮುಂದಾದವರು ಕಷ್ಟ ಅನುಭವಿಸಿದ ಉದಾಹರಣೆಗಳಿವೆ.
ಹುದ್ದೆಗಳ ನಿಯೋಜನೆ, ವರ್ಗಾವಣೆ ಮತ್ತು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಸಂಬಂಧದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಗರಿಕ ಸೇವೆಗಳ ಮಂಡಳಿಗಳನ್ನು ಸ್ಥಾಪಿಸಬೇಕು. ಇಂಥ ಮಂಡಳಿಗಳನ್ನು ಸ್ಥಾಪಿಸುವ ಸಂಬಂಧದಲ್ಲಿ ಸಂಸತ್ತು ಮೂರು ತಿಂಗಳೊಳಗೆ ಕಾನೂನನ್ನು ರಚಿಸಬೇಕು. ರಾಜಕಾರಣಿಗಳು ಮೌಖಿಕವಾಗಿ ನೀಡಿದ ಆದೇಶವನ್ನು ಅಧಿಕಾರಿಗಳು ಕಡತಗಳ ಮೇಲೆ ಲಿಖಿತದಲ್ಲಿ ದಾಖಲಿಸುವ ಅಧಿಕಾರವನ್ನು ಪಡೆಯುತ್ತಾರೆ. ರಾಜಕಾರಣಿಗಳು ರೂಢಿಸಿಕೊಂಡಿದ್ದ ಮೌಖಿಕ ಆದೇಶಗಳು ಉತ್ತರದಾಯಿತ್ವದಿಂದ ಅವರನ್ನು ಹೊರಗೆ ಇಡುತ್ತಿದ್ದವು. ರಾಜಕಾರಣಿಯ ಮಾತು ಕೇಳಿ ಅಧಿಕಾರಿಗಳು ಜೈಲಿಗೆ ಹೋಗುವ ಸ್ಥಿತಿ ಕೂಡ ಇತ್ತು. ಈ ಸುಧಾರಣೆಯಿಂದಾಗಿ ಭ್ರಷ್ಟಾಚಾರ ಕಡಿಮೆಯಾಗುವ ಮತ್ತು ಉತ್ತರದಾಯಿತ್ವದ ಭರವಸೆ ದೊರೆತಿದೆ. ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮಗಳು ಬಡ ಜನತೆಗೆ ತಲುಪುವುದಕ್ಕೆ ಇದರಿಂದ ಸಹಕಾರಿಯಾಗಲಿದೆ. ಪೊಲೀಸ್ ಅಧಿಕಾರಿಗಳು ಒಂದು ಸ್ಥಳದಲ್ಲಿ ಕಾರ್ಯನಿರ್ವಹಿಸುವ ಸಂಬಂಧದಲ್ಲಿ ಸುಪ್ರೀಂಕೋರ್ಟ್ 2006ರಲ್ಲಿಯೇ ಪ್ರಕಾಶಸಿಂಗ್ ಎನ್ನುವವರ ಪ್ರಕರಣದಲ್ಲಿ ನೀಡಿದ ಆದೇಶವನ್ನು ರಾಜ್ಯ ಸರ್ಕಾರಗಳು ಜಾರಿಗೊಳಿಸಲು ಮೀನ-ಮೇಷ ಎಣಿಸುತ್ತಿವೆ. ಅಧಿಕಾರಶಾಹಿಯನ್ನು ರಾಜಕೀಯದಿಂದ ಮುಕ್ತಗೊಳಿಸುವ ಸಂಬಂಧದಲ್ಲಿ ಈಗಾಗಲೇ ನಾಲ್ಕು ಉನ್ನತಾಧಿಕಾರದ ಸಮಿತಿಗಳು ವಿವಿಧ ಸಲಹೆಗಳನ್ನು ನೀಡಿವೆ. ಆದರೆ ಅವು ಯಾವುವೂ ಅನುಷ್ಠಾನ ಆಗದಿರುವುದಕ್ಕೆ ಕಾರಣ ಅಧಿಕಾರಸ್ಥ ರಾಜಕಾರಣಿಗಳಿಗೆ ಅದನ್ನು ಜಾರಿ ಮಾಡುವುದಕ್ಕೆ ಮನಸ್ಸಿಲ್ಲದಿರುವುದು. ವರ್ಗಾವಣೆ ಎಂಬುದು ರಾಜಕಾರಣಿಗಳಿಗೆ ಒಂದು ದಂಧೆಯಾಗಿದೆ. ಹೀಗಾಗಿ ಭ್ರಷ್ಟಾಚಾರ ಠಳಾಯಿಸುತ್ತಿದೆ. ಅದಕ್ಕೆಲ್ಲ ಈಗ ತಡೆ ಬೀಳಲಿದೆ. ಸುಪ್ರೀಂಕೋರ್ಟ್‌ನ ಈ ಆದೇಶದಿಂದ ಅಧಿಕಾರಶಾಹಿಯ ಮೇಲೆ ಜವಾಬ್ದಾರಿ ಹೆಚ್ಚಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement