ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಉತ್ತಮ ಅವಕಾಶ ಕೈಬಿಡಬಾರದು

Mainashree
Updated On : 3 Nov 2013, 10:07 am

ಈ ತಿಂಗಳ 15ರಂದು ಕೊಲಂಬೋದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ದೇಶಗಳ ಸರ್ಕಾರಗಳ ಮುಖ್ಯಸ್ಥರ ಸಭೆ(ಚೋಗ್ಮ್)ಯಲ್ಲಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಭಾಗವಹಿಸುವ ಸಂಬಂಧದಲ್ಲಿ ತಮಿಳುನಾಡಿನ ರಾಜಕಾರಣಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಶ್ರೀಲಂಕಾದಲ್ಲಿ ತಮಿಳರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬುದು ಅವರ ಆರೋಪವಾಗಿದೆ.
ಕೇಂದ್ರ ಸರ್ಕಾರದಲ್ಲಿರುವ ತಮಿಳುನಾಡಿನ ಸಚಿವರು ಕೂಡ ಪ್ರಧಾನಿಯ ಕೊಲಂಬೋ ಭೇಟಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೇಂದ್ರ ಹಣಕಾಸು ಸಚಿವ ಚಿದಂಬರಂ ಈ ಎಲ್ಲ ವಿರೋಧಗಳನ್ನು ಕೇಂದ್ರವು ಎಚ್ಚರಿಕೆಯಿಂದ ಪರಿಶೀಲಿಸುತ್ತಿದೆ. ಸರ್ಕಾರ ಸರಿಯಾದ ನಿರ್ಧಾರವನ್ನೇ ಕೈಗೊಳ್ಳುವುದು ಎಂಬ ಹೇಳಿಕೆ ನೀಡಿದ್ದಾರೆ.
ಶ್ರೀಲಂಕಾದ ವಿಚಾರದಲ್ಲಿ ಗಮನಿಸಬೇಕಾದ ಕೆಲವು ವಿಚಾರಗಳಿವೆ. ಅಲ್ಲಿ ಎಲ್‌ಟಿಟಿಇ ತಲೆಯಾಳುಗಳನ್ನು ಸದೆಬಡಿದ ಬಳಿಕ ಶಾಂತಿಯನ್ನು ಮರಳಿ ಸ್ಥಾಪಿಸಲು ಅಲ್ಲಿಯ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಬಹಳ ಮಹತ್ವದ್ದೆಂದರೆ ಅಲ್ಲಿಯ ಉತ್ತರ ಪ್ರಾಂತ್ಯದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾವಣೆಯನ್ನು ನಡೆಸಿದೆ. ತಮಿಳರೇ ಬಹುಮತವನ್ನು ಪಡೆದು ಅಲ್ಲಿ ಸರ್ಕಾರವನ್ನೂ ರಚಿಸಿದ್ದಾರೆ. ಆ ಸರ್ಕಾರದ ಮುಖ್ಯಸ್ಥರಾಗಿರುವ ವಿಘ್ನೇಶ್ವರನ್ ಅವರು ಚೋಗ್ಮ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ತೆರಳುತ್ತಿದ್ದಾರೆ. ಹೀಗಿರುವಾಗ ಭಾರತದ ಪ್ರಧಾನಿ ಅಲ್ಲಿಗೆ ಹೋಗಬಾರದು ಎಂದು ಹೇಳುವುದರಲ್ಲಿ ಏನೂ ಅರ್ಥ ಕಾಣುವುದಿಲ್ಲ. ಶ್ರೀಲಂಕಾದ ಉತ್ತರ ಪ್ರಾಂತ್ಯದಲ್ಲಿ ಚುನಾವಣೆ ನಡೆಸುವುದರ ಹಿಂದೆ ಭಾರತದ ಒತ್ತಡವಿತ್ತು ಎಂಬುದನ್ನು ನೆನೆಯಲೇ ಬೇಕು. ತಮ್ಮ ಆಯ್ಕೆಯ ಬಳಿಕ ವಿಘ್ನೇಶ್ವನ್ ಅವರು ಅಲ್ಲಿ ಚುನಾವಣೆ ನಡೆಯುವುದಕ್ಕೆ ಕಾರಣವಾಗಿದ್ದಕ್ಕಾಗಿ ಭಾರತವನ್ನು ಅಭಿನಂದಿಸಿದ್ದರು.
ತಮಿಳುನಾಡಿನ ರಾಜಕೀಯದಲ್ಲಿ ಕೇಂದ್ರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯಾವುದಾದರೂ ನೆಪವನ್ನು ಹುಡುಕುತ್ತಿರುವುದು ಸಾಮಾನ್ಯವಾಗಿದೆ. ಡಿಎಂಕೆ ಮತ್ತು ಅಣ್ಣಾ ಡಿಎಂಕೆ ಎರಡೂ ಪಕ್ಷಗಳು ಈ ವಿಚಾರದಲ್ಲಿ ಒಂದೇ ನಿಲವನ್ನು ತಾಳಿವೆ. ಭಾಗವಹಿಸದೇ ಇರುವುದರ ಬದಲು ಅದರಲ್ಲಿ ಭಾಗವಹಿಸಿ ವಿಶ್ವದ ಒಂದು ಬಹುಮುಖ್ಯ ಸಂಘಟನೆಯ ಮುಂದೆ ಶ್ರೀಲಂಕಾ ತಮಿಳರ ಬವಣೆಯನ್ನು ಪ್ರಸ್ತಾಪಿಸುವುದಕ್ಕೆ ಅವಕಾಶವಿದೆ. ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಬೇಕೋ ಬೇಡವೋ ಎಂಬುದು ದೇಶದ ರಾಷ್ಟ್ರೀಯ ಹಿತಾಸಕ್ತಿ ಮತ್ತು ವಿದೇಶಾಂಗ ನೀತಿಗಳು ಹಾಗೂ ಅಂತಾರಾಷ್ಟ್ರೀಯ ಬಾಧ್ಯತೆಗಳನ್ನು ಅವಲಂಬಿಸಿರುತ್ತದೆ.
ಮಾನವ ಹಕ್ಕುಗಳ ವಿಷಯದಲ್ಲಿ ಶ್ರೀಲಂಕಾದ ದಾಖಲೆ ಏನೇ ಇರಬಹುದು. ಅದಕ್ಕಿಂತಲೂ ಚೋಗ್ಮ್ ಸಮ್ಮೇಳನ ದೊಡ್ಡದು ಎಂಬ ಅಭಿಪ್ರಾಯ ಕಾಮನ್‌ವೆಲ್ತ್ ದೇಶಗಳ ಪ್ರಮುಖರಲ್ಲಿದೆ. ಸಮ್ಮೇಳನದಿಂದ ದೂರ ಇರುವುದಕ್ಕಿಂತ ಭಾರತವು ಅದರಲ್ಲಿ ಭಾಗವಹಿಸಿ ತಮಿಳರ ಬವಣೆಯ ಸಂಬಂಧದಲ್ಲಿ ತನ್ನ ನಿಲವನ್ನು ಮಂಡಿಸುವುದೇ ಸೂಕ್ತ. ಇಲ್ಲದಿದ್ದರೆ ಸಿಕ್ಕಿದ ಒಂದು ಅವಕಾಶವನ್ನು ತಪ್ಪಿಸಿಕೊಂಡಂತೆ ಆಗುತ್ತದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement