ಕ್ರಿಕೆಟ್ನ ಉತ್ತುಂಗ
ಇದೀಗ ಮುಗಿದಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಕ್ರಿಕೆಟ್ ಸರಣಿ ಹಲವು ಸ್ಮರಣೀಯ ದಾಖಲೆಗಳನ್ನು ನಿರ್ಮಿಸಿದೆ. ಏಳು ಪಂದ್ಯಗಳಿಗೆ ನಿಗದಿಯಾಗಿದ್ದ ಈ ಸರಣಿಯಲ್ಲಿ ಎರಡು ಪಂದ್ಯಗಳನ್ನು ಮಳೆಯು ಆಹುತಿ ಪಡೆಯಿತು. ಉಳಿದ ಐದು ಪಂದ್ಯಗಳಲ್ಲಿ ಭಾರತವು ಮೂರರಲ್ಲಿ ಮತ್ತು ಆಸ್ಟ್ರೇಲಿಯಾ ಎರಡರಲ್ಲಿ ಗೆಲವು ಸಾಧಿಸಿದವು. ಸರಣಿ ಭಾರತದ ಮಡಿಲಿಗೆ ಬಿತ್ತು.
ಸರಣಿಯುದ್ದಕ್ಕೂ ವಿಜೃಂಭಿಸಿದ್ದು ಎರಡೂ ತಂಡಗಳ ಬ್ಯಾಂಟಿಂಗ್ ವೈಭವ. ನೆಲಕಚ್ಚಿದ್ದು ಬೌಲಿಂಗ್ ಪಡೆ. ಎರಡೂ ತಂಡಕ್ಕೂ ಮುನ್ನೂರಕ್ಕೂ ಅಧಿಕ ಓಟಗಳನ್ನು ಪೇರಿಸುವುದಾಗಲೀ ಆ ಮೊತ್ತವನ್ನು ಬೆನ್ನಟ್ಟುವುದಾಗಲೀ ಸವಾಲೇ ಅಲ್ಲ ಅನ್ನಿಸಿತು. ಸರಣಿಗೂ ಮುನ್ನ ಭಾರತವೇ ನೆಚ್ಚಿನ ತಂಡವಾಗಿತ್ತು. ಘಟಾನುಘಟಿಗಳ ನಿವೃತ್ತಿಯ ನಂತರ ಆಸ್ಟ್ರೇಲಿಯಾ ತಂಡ ಸೊರಗಿತ್ತು. ಆ ತಂಡದಲ್ಲೂ ಹೊಸ ರಕ್ತ ತುಂಬಿಕೊಂಡಿದೆ. ಆ ತಂಡದ ಹಂಗಾಮಿ ನಾಯಕ ಜಾರ್ಜ್ ಬೈಲಿ, ಆಲ್ರೌಂಡರ್ ಫಾಕ್ನರ್, ಗ್ಲೆನ್ ಮ್ಯಾಕ್ಸ್ವೆಲ್, ಶೇನ್ ವ್ಯಾಟ್ಸನ್ ಇಲ್ಲಿ ಉತ್ತಮ ಪ್ರದರ್ಶನವನ್ನು ನೀಡಿ ಭವಿಷ್ಯದಲ್ಲಿ ಆಸ್ಟ್ರೇಲಿಯಾ ಉತ್ತಮ ತಂಡವಾಗುವ ಭರವಸೆ ಮೂಡಿಸಿದ್ದಾರೆ.
ಭಾರತ ತಂಡದ ಶಿಖರ್ ಧವನ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ನಾಯಕ ಧೋನಿ ಸರಣಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ನಡೆದ ಅಂತಿಮ ಪಂದ್ಯದಲ್ಲಿ ರೋಹಿತ್ ಶರ್ಮಾ ಅಬ್ಬರಿಸಿದ ರೀತಿ ಬಹುಕಾಲ ನೆನಪಿನಲ್ಲಿರುವಂಥದ್ದು. ಒಂದು ಸರದಿಯಲ್ಲಿ ಹದಿನಾರು ಸಿಕ್ಸರ್ಗಳನ್ನು ಸಿಡಿಸಿದ್ದು ಒಂದು ದಾಖಲೆಯೇ. ಒಂದು ದಿನದ ಪಂದ್ಯದಲ್ಲಿ 200 ಓಟ ಸಿಡಿಸಿದ ಮೂರನೆಯ ಭಾರತೀಯ ಅವರು. ಭಾರತದ ಮೊತ್ತ ಕೂಡ ಆಸ್ಟ್ರೇಲಿಯಾ ವಿರುದ್ಧ ಒಂದು ದಾಖಲೆ. ಧೋನಿಯವರು 38 ಎಸೆತಗಳಲ್ಲಿ ಸಿಡಿದ 62 ಓಟಗಳು ಭಾರತದ ಗೆಲವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿತು.
ಏಕದಿನ ಪಂದ್ಯಗಳಲ್ಲಿ ಭಾರತದ ಈ ರೀತಿಯ ಚೇತರಿಕೆಗೆ ಕಾರಣ ಐಪಿಎಲ್ ಪಂದ್ಯಾವಳಿ ಎಂದರೆ ತಪ್ಪಾಗಲಿಕ್ಕಿಲ್ಲ. ಐಪಿಎಲ್ನಲ್ಲಿ ಆಡಿದ ಆಸ್ಟ್ರೇಲಿಯಾದ ಆಟಗಾರರಿಗೆ ಭಾರತವು ಮನೆಯಂಗಳದಂತೆ ಆಗಿದೆ. ಇಲ್ಲಿಯ ಬೌಲರುಗಳ ಪರಿಚಯ ಅವರಿಗಿದೆ. ಇಪ್ಪತ್ತು ಓವರುಗಳ ಹೊಡಿಬಡಿಯ ಆಟವು ಐವತ್ತು ಓವರುಗಳಿಗೆ ಮುಂದುವರಿದಾಗ ಇಂಥ ಬೃಹತ್ ಮೊತ್ತ ಸುಲಭಸಾಧ್ಯವಾಗಿದೆ. ಕ್ರಿಕೆಟ್ನ ರೋಚಕತೆ ಹೆಚ್ಚಿದೆ. ಈ ಸರಣಿ ಭಾರತೀಯ ಬೌಲಿಂಗ್ ದೌರ್ಬಲ್ಯಗಳನ್ನು ಹೊರಚೆಲ್ಲಿದೆ. ಅದನ್ನು ಹೇಗೆ ಮೊನಚುಗೊಳಿಸಬೇಕು ಎಂಬುದನ್ನು ಚಿಂತಕರ ಚಾವಡಿ ಚರ್ಚಿಸಿ ಕ್ರಮಕೈಗೊಳ್ಳಬೇಕು. ಪಂದ್ಯ ಮತ್ತು ಸರಣಿ ಗೆದ್ದ ತಂಡಕ್ಕೆ ಅಭಿನಂದನೆಗಳು.