ಶಿವಮೂರ್ತಿ ಶಾಸ್ತ್ರಿಗಳ ಖಾದಿ ಪ್ರೀತಿ
ಡಾ.ಬಿ.ಶಿವಮೂರ್ತಿ ಶಾಸ್ತ್ರಿಗಳು ಪ್ರಖ್ಯಾತ ವಿದ್ವಾಂಸರಾಗಿ, ಪತ್ರಿಕೋದ್ಯಮಿಯಾಗಿ, ಕೀರ್ತನಕಾರರಾಗಿ, ಕನ್ನಡ ಏಕೀಕರಣದ ಅಧ್ವೈರ್ಯುವಾಗಿ ಹೆಸರು ಗಳಿಸಿದವರು. ಯಾವ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರೂ ಅಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯನ್ನು ಕಾಪಾಡಿಕೊಂಡು ಬಂದವರು. ಶಿಕ್ಷಕಿಯಾಗಿದ್ದ ಅವರ ಅಕ್ಕ ಗಂಗಮ್ಮ ತಮ್ಮ ತಮ್ಮನ ಪ್ರತಿಭೆಯನ್ನು ಚಿಕ್ಕಂದಿನಲ್ಲಿಯೇ ಗುರುತಿಸಿ ವಿದ್ಯಾಭ್ಯಾಸ ಮಾಡಿಸಿದರು. ಚಿಕ್ಕಂದಿನಿಂದಲೂ ಗಾಂಧಿಯವರ ಬಗ್ಗೆ ಅಪಾರ ಗೌರವವನ್ನೂ, ತಾಯ್ನಾಡಿನ ಬಗ್ಗೆ ಪ್ರೀತಿಯನ್ನೂ ಬೆಳಸಿಕೊಂಡಿದ್ದರು ಶಾಸ್ತ್ರಿಗಳು. ಕರ್ನಾಟಕ ಸಂದರ್ಶನ, ವೀರಶೈವ ಮಹಾಪುರುಷರು, ವೀರಶೈವ ಸಾಹಿತ್ಯ ಮತ್ತು ಇತಿಹಾಸ ಕೃತಿಗಳನ್ನು ರಚಿಸಿ ಪ್ರಸಿದ್ಧರಾಗಿದ್ದರೆ. ಗಾಂಧೀಜಿಯವರು ಕರೆನೀಡಿದಂತೆ ಅವರು ಮರಣಿಸುವವರೆಗೂ ಖಾದಿ ವ್ರತಧಾರಿಗಳಾಗಿ ಆದರ್ಶವನ್ನು ಮೆರೆದವರು. ಮನೆಯಲ್ಲಿದ್ದ ಪ್ರತಿ ವಸ್ತ್ರವೂ ಖಾದಿಯಿಂದ ಮಾಡಿದ್ದುದಾಗಿತ್ತು. ಅವರ ತಲೆಯ ಮೇಲೊಂದು ಗಾಂಧಿ ಟೊಪ್ಪಿ ಸದಾ ರಾರಾಜಿಸುತ್ತಿತ್ತು. ಅವರು ಗುಬ್ಬಿಯಲ್ಲಿ ಶಿಕ್ಷಕರಾಗಿದ್ದಾಗ ಶಾಲೆಗೆ ಸದಾ ಟೋಪಿ ಧರಿಸಿ ಬರುತ್ತಿದ್ದುದನ್ನು ಗಮನಿಸಿದ ಮುಖ್ಯ ಶಿಕ್ಷಕರು ಬ್ರಿಟಿಷರ ಕಾಲವಾದ್ದರಿಂದ ಶಾಲೆಗೆ ಗಾಂಧಿ ಟೊಪ್ಪಿ ಧರಿಸಿಬರಬಾರದೆಂದು ಆದೇಶಿಸಿದರು. ಅದಕ್ಕೆ ಶಾಸ್ತ್ರಿಗಳು ತಾವು ಬೇಕಾದರೆ ನೌಕರಿಗೆ ರಾಜೀನಾಮೆ ನೀಡುವುದಾಗಿಯೂ ಟೊಪ್ಪಿಯನ್ನು ಮಾತ್ರ ಎಂದೆಂದಿಗೂ ಬಿಡಲಾರೆನು ಎಂದು ತಿಳಿಸಿದರು.
ಇದು ಅವರಿಗೆ ಖಾದಿಯ ಬಗ್ಗೆ ಇದ್ದ ಪ್ರೀತಿಯನ್ನು ತೋರಿಸುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಮಯದಲ್ಲಿ ಮೊದಲ ಬಾರಿಗೆ ಪರಿಷತ್ತಿಗೆ ಸರ್ಕಾರದ ಅನುದಾನ ತಂದ ಅಧ್ಯಕ್ಷರು ಎಂಬ ಅಭಿದಾನಕ್ಕೆ ಪಾತ್ರರಾದವರು. ಆಗಿನ ಮುಖ್ಯ ಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರನ್ನು ಭೇಟಿ ಮಾಡಿ ಪರಿಷತ್ತಿನ ಕಾರ್ಯ ಕಲಾಪಗಳಿಗೆ ಐದು ಸಾವಿರ ರು.ಗಳನ್ನು ನೀಡಬೇಕೆಂಬ ಅರ್ಜಿಯನ್ನು ನೀಡಿದಾಗ ಕೆಂಗಲ್ಲರು ಗಟ್ಟಿಯಾಗಿ ನಕ್ಕರು. "ಅಲ್ಲಾ ಶಾಸ್ತ್ರಿಗಳೇ, ಸರ್ಕಾರದಿಂದ ಕೇವಲ ಐದು ಸಾವಿರ ಪಡೆಯಲು ಅರ್ಜಿ ತಂದಿದ್ದೀರಲ್ಲಾ, ಅದರ ಮುಂದೊಂದು ಸೊನ್ನೆಯನ್ನು ಸೇರಿಸಿ ತನ್ನಿ" ಎಂದು ಹೇಳಿ ಮೊದಲ ಬಾರಿಗೆ ಸರ್ಕಾರದ ನೆರವು ಕೊಡಿಸಿದರು. ಅವರ ಮನೆ ಏಕೀಕರಣದ ಚಳವಳಿಯಲ್ಲಿ ಭಾಗವಹಿಸಿದವರಿಗೆ ಚರ್ಚಾಸ್ಥಳವಾಗಿ ಮಾರ್ಪಟ್ಟಿತ್ತು. ಸ್ವಾತಂತ್ರ್ಯ ಯೋಧರಿಗೆ ಭೂಗತರಾಗಿ ಉಳಿಯುವ ಆಶ್ರಯ ತಾಣವಾಗಿ ಪರಿವರ್ತಿಸಲ್ಪಟ್ಟಿತ್ತು. ಹೀಗೆ ಇಡೀ ಜೀವನವನ್ನು ಸಮಾಜಕ್ಕಾಗಿ ಮೀಸಲಾಗಿಟ್ಟ ಶಿವಮೂರ್ತಿ ಶಾಸ್ತ್ರಿಗಳು ಸಾರ್ವಜನಿಕ ಸೇವೆಯಲ್ಲಿರುವವರಿಗೆ ಆದರ್ಶವಾಗಿದ್ದಾರೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.