ಆಳುವವರ ವಿಪರ್ಯಾಸಗಳು
ಸಾಧು ಮಹಾಶಯ ಶೋಭನ್ ಸರ್ಕಾರ್ ಕಂಡ ಕನಸಿನ ಬೆಂಬಲಕ್ಕೆ ನಿಂತ ಕೇಂದ್ರ ಸರ್ಕಾರ ಕನಸಿನ ಹೊನ್ನಿನ ನಿಧಿಯ ಬೆನ್ನಟ್ಟಿ ಉತ್ತರ ಪ್ರದೇಶದ ಉನ್ನಾಂವ್ ಜಿಲ್ಲೆಯಲ್ಲಿ ಉತ್ಖನನಕ್ಕೆ...
ಸಾಧು ಮಹಾಶಯ ಶೋಭನ್ ಸರ್ಕಾರ್ ಕಂಡ ಕನಸಿನ ಬೆಂಬಲಕ್ಕೆ ನಿಂತ ಕೇಂದ್ರ ಸರ್ಕಾರ ಕನಸಿನ ಹೊನ್ನಿನ ನಿಧಿಯ ಬೆನ್ನಟ್ಟಿ ಉತ್ತರ ಪ್ರದೇಶದ ಉನ್ನಾಂವ್ ಜಿಲ್ಲೆಯಲ್ಲಿ ಉತ್ಖನನಕ್ಕೆ ಚಾಲನೆ ನೀಡಿ ಶೋಧ ನಡೆಸಿದ್ದೂ ಆಯಿತು. ಹನ್ನೆರಡು ದಿನಗಳ ಕಾರ್ಯಾಚರಣೆಯಲ್ಲಿ ಕಲ್ಲು ಮಣ್ಣುಗಳ ಹೊರತಾಗಿ ಯಾವೊಂದು ಬೆಲೆ ಬಾಳುವ ವಸ್ತುಗಳಾಗಲೀ, ಪುರಾತತ್ವ ಪಳೆಯುಳಿಕೆಗಳಾಗಲೀ ಪತ್ತೆ ಆಗಿರುವ ಕುರಿತು ವರದಿ ಆಗಿಲ್ಲ. ಭೂಮಿ ಬಗೆದ ಕಾರ್ಯಾಚರಣೆಯಿಂದ ಭೂತಾಯಿಯ ಮಡಿಲ ನರನಾಡಿಗಳು ಸಡಿಲಗೊಂಡ ಹೊರತಾಗಿ ಬೇರಾವ ಲಕ್ಷಣಗಳೂ ಗೋಚರಿಸಲಿಲ್ಲ. ಈ ಘನ ಕಾರ್ಯಕ್ಕೆ ಪ್ರೇರಣೆ ಎಂಬಂತೆ ಇನ್ನೂ ಅನೇಕ ಮಠ ಮಂದಿರಗಳು ಮತ್ತು ಸ್ಮಾರಕಗಳ ಸುತ್ತಲೂ ನಿಧಿ ಅಡಗಿವೆ ಎಂಬ ಕುರಿತು ಪುಕ್ಕಟೆ ಪುಕಾರುಗಳೂ ಅಲ್ಲಲ್ಲಿ ಹಬ್ಬಿರುವ ಕುರಿತು ವರದಿಗಳೂ ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿವೆ. ನಮ್ಮ ಕರ್ನಾಟಕ ಸರ್ಕಾರ ಹೊಸ ಹುರುಪಿನೊಂದಿಗೆ ಮೂಢನಂಬಿಕೆ ಮತ್ತು ಮಾಟ ಮಂತ್ರಗಳ ವಿರುದ್ಧ ಜನಜಾಗೃತಿ ಮೂಡಿಸುವ ದಿಸೆಯಲ್ಲಿ ಸೂಕ್ತ ಕಾನೂನಿನ ರಚನೆ ಕುರಿತ ಚಿಂತನೆ ನಡೆಸುತ್ತಿರುವ ಬಗ್ಗೆಯೂ ವರದಿಯಾಗಿದೆ. ಈ ಕುರಿತ ವಿಧೇಯಕ ಮಂಡನೆಗೂ ತಯಾರಿ ನಡೆಸಿದೆ. ಜನಮಾನಸದಲ್ಲಿ ವೈಚಾರಿಕತೆಯನ್ನು ಹುಟ್ಟು ಹಾಕುವ ದೃಷ್ಟಿಯಿಂದ ಇದೊಂದು ಉತ್ತಮ ಹೆಜ್ಜೆ ಅನ್ನೋಣ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಆಡಳಿತ ನಡೆಸುತ್ತಿರುವ ಒಂದೇ ಪಕ್ಷದ ವಿಭಿನ್ನ ನಿಲುವುಗಳು ಮಾತ್ರ ಜನರ ನಂಬಿಕೆಗಳಲ್ಲಿ ಗೊಂದಲ ಮೂಡಿಸುತ್ತಿವೆ. ಇನ್ನೊಂದೆಡೆ ಜಾತಿಮತ ಭೇದಗಳಿಲ್ಲದೆ ಎಲ್ಲರಿಗೂ ಸಮಪಾಲು, ಸಮಬಾಳು ನೀಡಲು ಬದ್ಧತೆ ಪ್ರದರ್ಶಿಸುವ ನಮ್ಮ ಆಳುವ ದೊರೆಗಳ 'ಶಾದೀ ಭಾಗ್ಯ'ದಂತಹ ಯೋಜನೆ ಮಾತ್ರ ಬಾಲಿಶ ಅನಿಸುತ್ತಿದೆ.
-ಟಿ. ಯಶವಂತ. ಪೈ., ಕೆ.ಜಿ.ಎಫ್.
ಚೇಂಬರ್ಗಳಲ್ಲೇನು ರಹಸ್ಯ!
ಸರ್ಕಾರದ ವಿವಿಧ ಇಲಾಖೆಗಳ ನಿರ್ದೇಶಕ, ಜಂಟಿ ನಿರ್ದೇಶಕ, ಉಪನಿರ್ದೇಶಕ, ಸಹಾಯಕ ನಿರ್ದೇಶಕ, ಕಾರ್ಯದರ್ಶಿ, ಆಯುಕ್ತರ ಮತ್ತು ಆ ಮಟ್ಟದ ಅಧಿಕಾರಿಗಳು ಕರ್ತವ್ಯದ ಮೇಲಿರುವಾಗಲೂ (ಚೇಂಬರ್ನಲ್ಲಿರುವಾಗಲೂ) ಅವರ ಚೇಂಬರ್ ಬಾಗಿಲು ಮುಚ್ಚಿರುತ್ತದೆ. ಜರೂರು ಕೆಲಸಕ್ಕೆ ಅಧಿಕಾರಿಗಳನ್ನು ಭೇಟಿಯಾಗಲು ಬರುವ ಪ್ರಾಮಾಣಿಕ ನಾಗರಿಕರಿಗೆ ಚೇಂಬರಿನೊಳಗೆ ಪ್ರವೇಶ ದುರ್ಲಭ. ಸಾಹೇಬರು ಒಳಗೆ ಮೀಟಿಂಗ್ನಲ್ಲಿದ್ದಾರೆ ಎಂದು ಚೇಂಬರಿನ ಮುಂದೆ ಕುಳಿತಿರುವ 'ಡಿ' ಗ್ರೂಪ್ ಸಿಬ್ಬಂದಿ ಹೇಳಿ ಸಾಗಹಾಕುತ್ತಾನೆ ಅಥವಾ ಮೀಟಿಂಗ್ ಮುಗಿಯುವವರೆಗೂ ಕಾಯುತ್ತ ಕೂಡಲು ಹೇಳುತ್ತಾರೆ. ಎರಡು ತಾಸಾದರೂ ಮೀಟಿಂಗ್ ಮುಗಿಯುವುದಿಲ್ಲ. ಬಾಗಿಲು ತೆರೆಯುವುದಿಲ್ಲ, ತೆರೆದಾಗ ಲಂಚ್ ಅವರ್. ಮುಚ್ಚಿದ ಬಾಗಿಲಿನ ಹಿಂದೆ ಮೀಟಿಂಗ್ ನಡೆದಿರುತ್ತದೆಯೇ? ಅಧಿಕಾರಿ ತನ್ನ ಸ್ನೇಹಿತರೊಂದಿಗೆ, ಸಂಬಂಧಿಕರೊಂದಿಗೆ ರಹಸ್ಯ ಸಮಾಲೋಚನೆ ನಡೆಸುತ್ತಿರಲೂಬಹುದು! ಉನ್ನತಾಧಿಕಾರಿಗಳ ಚೇಂಬರ್ ಬಾಗಿಲುಗಳು ಏಕೆ ಮುಚ್ಚಿರುತ್ತವೆ? ಮೀಟಿಂಗ್ಗಳಾದರೂ ಮುಚ್ಚಿದ ಬಾಗಿಲ ಹಿಂದೆ ಏಕೆ ನಡೆಯುತ್ತವೆ? ಬಾಗಿಲು ಮುಚ್ಚಿ ಮೀಟಿಂಗ್ ನಡೆಸುವಂಥ ರಹಸ್ಯ ಸರ್ಕಾರಿ ಕಚೇರಿಗಳಲ್ಲಿ ಇರುತ್ತದೆಯೇ? ಇದು ಜನತಂತ್ರಕ್ಕೆ ವಿರುದ್ಧವಲ್ಲವೆ? ಅಧಿಕಾರಶಾಹಿಯ ಜನತಂತ್ರ ವಿರೋಧಿ ನೀತಿಯಲ್ಲವೆ? ನಾವಿನ್ನೂ ಬ್ರಿಟಿಷ್ ಭಾರತದಲ್ಲಿ ಬದುಕುತ್ತಿದ್ದೇವೆಯೇ?
-ಮಾಣಿಕರಾವ್ ಪಸಾರ, ಬೆಂಗಳೂರು
ತಿಗಣೆ ಮಾತ್ರೆ ಢ/ಡ ಆತ್ಮಹತ್ಯೆ ಸರಣಿ
ಬೆಂಗಳೂರಿನ ಕೆ.ಪಿ. ಅಗ್ರಹಾರದಲ್ಲಿ ಕಳೆದ ಆರು ತಿಂಗಳ ಅವಧಿಗೆ ಸರಿ ಸುಮಾರು 10 ರಿಂದ 12 ಯುವಕರು, ಸಾಮಾನ್ಯ ಮೆಡಿಕಲ್ ಸ್ಟೋರ್ಸ್ನಲ್ಲಿ ಅತ್ಯಂತ ಸುಲಭವಾಗಿ ಸಿಗುವ ತಿಗಣೆ ಮಾತ್ರೆ ಸೇವಿಸಿ ಸಣ್ಣಪುಟ್ಟ ವಿಷಯಗಳಿಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಸೇವಿಸಿದವರು ಆಸ್ಪತ್ರೆಯಲ್ಲಿ 4 ರಿಂದ 5 ದಿನಗಳವರೆಗೆ ಬದುಕಿ ಲಕ್ಷಾಂತರ ರುಪಾಯಿಗಳು ಖರ್ಚು ಮಾಡಿಸಿ, ಕೊನೆಯುಸಿರೆಳೆಯುತ್ತಿದ್ದಾರೆ. ಒಂದು ಮಾಹಿತಿ ಹಾಗೂ ನಾ ಕಂಡಂತೆ ಈ ಮಾತ್ರೆ ಸೇವಿಸಿ ಬದುಕುಳಿದವರ ಹೆಚ್ಚು ಉದಾಹರಣೆಯೇ ಇಲ್ಲ. ಪುತ್ರಶೋಕಂ ನಿರಂತರಂ ಎಂಬಂತೆ ಪೋಷಕರು ಜೀವಿಸುತ್ತಿದ್ದಾರೆ. ಈ ವಿಷಯವನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತಿಗಣೆ ಮಾತ್ರೆ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ಮನವಿ.
-ವಿಮಲ್ ರಾಜ್, ಬೆಂಗಳೂರು.
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com