ಚುನಾವಣಾ ಪೂರ್ವ ಸಮೀಕ್ಷೆ ನಿರ್ಬಂಧಿಸುವ ಅಗತ್ಯವಿಲ್ಲ
ಚುನಾವಣೆ ಪೂರ್ವದಲ್ಲಿ ಮಾಡುವ ಮತದಾರರ ಸಮೀಕ್ಷೆಗೆ ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ಪಕ್ಷವು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದು ಚರ್ಚೆಗೆ ...
ಚುನಾವಣೆ ಪೂರ್ವದಲ್ಲಿ ಮಾಡುವ ಮತದಾರರ ಸಮೀಕ್ಷೆಗೆ ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ಪಕ್ಷವು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಮತದಾರರನ್ನು ಇಂಥ ಸಮೀಕ್ಷೆಗಳು ತಪ್ಪುದಾರಿಗೆ ಎಳೆಯುತ್ತವೆ. ಮತ್ತು ಇಂಥ ಸಮೀಕ್ಷೆಗಳನ್ನು ಹೇಗೆಬೇಕೋ ಹಾಗೆ ಮಾಡಿಸಿಕೊಳ್ಳಬಹುದು. ಇದು ವೈಜ್ಞಾನಿಕವಾದುದೂ ಅಲ್ಲ, ಪಾರದರ್ಶಕವೂ ಆಗಿರುವುದಿಲ್ಲ. ಪ್ರಜಾತಂತ್ರಕ್ಕೆ ಇಂಥ ಸಮೀಕ್ಷೆ ಸೂಕ್ತವಾದುದಲ್ಲ ಎಂಬ ಅಭಿಪ್ರಾಯ ಆ ಪಕ್ಷದ್ದು. ಇಂಥ ಸಮೀಕ್ಷೆಗಳನ್ನು ನಿಷೇಧಿಸಬೇಕೆಂಬ ಚುನಾವಣಾ ಆಯೋಗದ ಆಲೋಚನೆಗೆ ಅದು ಬೆಂಬಲವನ್ನು ಸೂಚಿಸಿದೆ.
ಚುನಾವಣಾ ಪೂರ್ವ ಸಮೀಕ್ಷೆಗಳ ಸಂಬಂಧದಲ್ಲಿ ಚುನಾವಣಾ ಆಯೋಗವು ಎಲ್ಲ ರಾಜಕೀಯ ಪಕ್ಷಗಳಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಈ ಅಭಿಪ್ರಾಯ ಹೊರಬಿದ್ದಿದೆ. ಇದಕ್ಕೆ ಪ್ರಮುಖ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ಒಂದು ವೇಳೆ ಈಗ ಪ್ರಕಟಗೊಳ್ಳುತ್ತಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷದ ಪರವಾಗಿ ಇದ್ದಿದ್ದರೆ ಆ ಪಕ್ಷ ಇಂಥ ಅಭಿಪ್ರಾಯ ವ್ಯಕ್ತಪಡಿಸುತ್ತಿರಲಿಲ್ಲ. ಪ್ರತಿಕೂಲ ಫಲಿತಾಂಶ ಕಾಣುತ್ತಿರುವುದರಿಂದ ಕಾಂಗ್ರೆಸ್ ಹೀಗೆ ಹೇಳುತ್ತಿದೆ ಎಂಬುದು ಟೀಕೆ. ಚುನಾವಣಾ ಪೂರ್ವ ಸಮೀಕ್ಷೆಗಳು ಜಗತ್ತಿನಾದ್ಯಂತ ಪ್ರಯೋಗದಲ್ಲಿರುವಂಥ ಒಂದು ವ್ಯವಸ್ಥೆ. ಭಾರತದಲ್ಲಿಯೂ 1957ರ ಲೋಕಸಭೆ ಚುನಾವಣೆಯ ಹೊತ್ತಿಗೇ ಇದು ಒಂದು ಸಂಸ್ಥೆಯಿಂದ ನಡೆದಿತ್ತು. ಚುನಾವಣಾ ಪೂರ್ವ ಸಮೀಕ್ಷೆಗಳು, ಮತದಾನದ ಬಳಿಕ ಮತಗಟ್ಟೆಯ ಬಳಿ ನಡೆಸುವ ಸಮೀಕ್ಷೆಗಳು ಇವೆಲ್ಲ ಇಂದು ಅತ್ಯಂತ ವ್ಯವಸ್ಥಿತ ಸಾಂಸ್ಥಿಕ ಸ್ವರೂಪವನ್ನು ಪಡೆದುಕೊಂಡಿವೆ. ಯಾವುದೋ ಪತ್ರಿಕೆಯೋ ಟೀವಿ ವಾಹಿನಿಯೋ ಸ್ವತಂತ್ರವಾಗಿ ನಡೆಸುವ ಸಮೀಕ್ಷೆ ಇದಲ್ಲ. ಇಂಥ ಸಮೀಕ್ಷೆಗಳನ್ನು ನಡೆಸುವ ಸಂಸ್ಥೆಗಳೇ ಇರುತ್ತವೆ. ಸಮೀಕ್ಷೆಯ ಬಳಿಕ ಇವು ಕೇವಲ ಫಲಿತಾಂಶವನ್ನು ಹೇಳುವುದಿಲ್ಲ. ಸಮೀಕ್ಷೆಯಲ್ಲಿ ತಾವು ಯಾವ ಯಾವ ಕ್ರಮಗಳನ್ನು ಅನುಸರಿಸಿದ್ದೇವೆ ಎಂಬುದನ್ನೂ ಹೇಳುತ್ತವೆ. ಮತದಾರರ ಮೇಲೆ ಪ್ರಭಾವ ಬೀರುವುದನ್ನು ತಡೆಯುವುದಕ್ಕೆ ಚುನಾವಣಾ ಆಯೋಗ ಹಲವು ನಿಯಮಗಳನ್ನು ರೂಪಿಸಿದೆ. ಮತದಾನಕ್ಕೆ ನಲ್ವತ್ತೆಂಟು ಗಂಟೆಗಳ ಪೂರ್ವದಲ್ಲಿ ಯಾವುದೇ ರೀತಿಯ ಬಹಿರಂಗ ಪ್ರಚಾರ ಇರುವುದಿಲ್ಲ. ಮತದಾರ ಯಾವ ಪ್ರಭಾವಕ್ಕೂ ಒಳಗಾಗದೆ ತನ್ನದೇ ನಿರ್ಧಾರಕ್ಕೆ ಬರುವುದಕ್ಕೆ ಈ ಅವಧಿ ಸಾಕಾಗಬಹುದು. ಯಾವ ಮತದಾರನೂ ಯಾರೋ ಬಂದು ಕೇಳಿದಾಗ ತನ್ನ ಅಂತರಂಗದಲ್ಲಿರುವುದನ್ನೆಲ್ಲ ಹೇಳಿಯೇ ಬಿಡುತ್ತಾನೆ ಎಂದೇನೂ ಇಲ್ಲ. ಹಿಂದೆ ಕೆಲವು ಚುನಾವಣಾ ಪೂರ್ವ ಸಮೀಕ್ಷೆಗಳು ತಪ್ಪಾಗಿರುವುದೂ ಇದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಪ್ರಜಾಪ್ರಭುತ್ವದ ಒಂದು ಭಾಗವೆಂದು ಚುನಾವಣಾ ಆಯೋಗ ಪರಿಗಣಿಸುವ ಅಗತ್ಯವಿದೆ. ಜೊತೆಯಲ್ಲಿ ಈ ಸಮೀಕ್ಷೆಗಳು ಹೆಚ್ಚು ನಿಖರವಾಗಿರಲು ಏನೇನು ಮಾಡಬೇಕು ಎಂಬ ಒಂದು ಕಾರ್ಯಸೂಚಿಯನ್ನು ಅದನ್ನು ನಡೆಸುವ ಸಂಸ್ಥೆಗಳಿಗೆ ನೀಡಬಹುದಾಗಿದೆ.