ತೆಲಂಗಾಣ ಅಡಕ್ಕೊತ್ತು
ತೆಲಂಗಾಣ ರಚನೆಯ ವಿಷಯದಲ್ಲಿ ನಿಮ್ಮ ನಿಲವೇನು ಎಂಬುದನ್ನು ಸ್ಪಷ್ಟಪಡಿಸಿ ಎಂದು ಕೇಂದ್ರ ಗೃಹಸಚಿವರು ಆಂಧ್ರಪ್ರದೇಶದಲ್ಲಿಯ ರಾಜಕೀಯ ಪಕ್ಷಗಳ ಮುಖಂಡರಿಗೆ ಪತ್ರ ...
ತೆಲಂಗಾಣ ರಚನೆಯ ವಿಷಯದಲ್ಲಿ ನಿಮ್ಮ ನಿಲವೇನು ಎಂಬುದನ್ನು ಸ್ಪಷ್ಟಪಡಿಸಿ ಎಂದು ಕೇಂದ್ರ ಗೃಹಸಚಿವರು ಆಂಧ್ರಪ್ರದೇಶದಲ್ಲಿಯ ರಾಜಕೀಯ ಪಕ್ಷಗಳ ಮುಖಂಡರಿಗೆ ಪತ್ರ ಬರೆದಿರುವುದು ಕಾಂಗ್ರೆಸ್ ಪಕ್ಷದ ದೃಷ್ಟಿಯಿಂದ ಒಂದು ಮುತ್ಸದ್ಧಿತನದ ನಡೆ ಎಂದೇ ಹೇಳಬೇಕು. ಕಾಂಗ್ರೆಸ್ ಪಕ್ಷವು ತೆಲಂಗಾಣ ರಚನೆಗೆ ಒಲವು ಹೊಂದಿದ್ದು ಈ ಸಂಬಂಧದಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವನ್ನೂ ಕೈಗೊಳ್ಳಲಾಗಿದೆ. ಬರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ತೆಲಂಗಾಣ ರಚನೆಯ ಮಸೂದೆಯೂ ಮಂಡನೆಯಾಗಲಿದೆ. ಬರುವ ಲೋಕಸಭೆ ಚುನಾವಣೆಗೂ ಮೊದಲೇ ತೆಲಂಗಾಣ ರಚನೆಯಾಗಲಿದೆ ಎಂದು ಕಾಂಗ್ರೆಸ್ ಪಕ್ಷವು ಹೇಳಿಕೊಳ್ಳುತ್ತಿದೆ. ಜೊತೆಯಲ್ಲಿ ಸಂಸತ್ತಿನಲ್ಲಿ ಎಲ್ಲ ಪಕ್ಷಗಳು ಸಹಕರಿಸಿ ಮಸೂದೆಯನ್ನು ಪಾಸ್ ಮಾಡಿಸಬೇಕು ಎಂದೂ ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ಅದು ಆಂಧ್ರಪ್ರದೇಶದ ರಾಜಕೀಯ ಪಕ್ಷಗಳಿಗೆ ಬರೆದಿರುವ ಪತ್ರಕ್ಕೆ ಮಹತ್ವವಿದೆ. ಈ ಸಂಬಂಧದಲ್ಲಿ ರಾಜಕೀಯ ಪಕ್ಷಗಳು ಒಂದು ನಿಲವನ್ನು ಪ್ರಕಟಿಸಲೇಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿವೆ. ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಎರಡೂ ಕಡೆ ಮಾತನಾಡುವವರ ಬಣ್ಣ ಬಯಲು ಮಾಡುವುದಕ್ಕೇ ಕಾಂಗ್ರೆಸ್ ಈ ತಂತ್ರ ಅನುಸರಿಸಿದೆ. ಲೋಕಸಭೆಯಲ್ಲಿ ಸಂಖ್ಯಾಬಲದ ದೃಷ್ಟಿಯಿಂದ ಕಾಂಗ್ರೆಸ್ಗೆ ಆಂಧ್ರಪ್ರದೇಶವು ಮಹತ್ವದ ರಾಜ್ಯವಾಗಿದೆ. ತೆಲಂಗಾಣ ರಚನೆಯಿಂದ ತಾನು ಆದಷ್ಟು ಲಾಭ ಮಾಡಿಕೊಳ್ಳಬೇಕು ಎಂಬುದು ಅದರ ಆಲೋಚನೆಯಾಗಿದೆ. ಚಂದ್ರಬಾಬು ನಾಯ್ಡು ಮೊದಲು ತೆಲಂಗಾಣ ರಚನೆಯ ಪರವಾಗಿದ್ದವರು ಈಗ ತಿರುಗಿಬಿದ್ದಿದ್ದಾರೆ. ಆಂಧ್ರದ ಸದ್ಯದ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿಯವರು ವಿಭಜನೆ ವಿರೋಧಿಸಿ ಬೇರೆಯೇ ಪಕ್ಷವನ್ನು ಕಟ್ಟುವ ಮಾತನಾಡುತ್ತಿದ್ದವರು ಈಗ ತಣ್ಣಗಾಗಿದ್ದಾರೆ. ತೆಲಂಗಾಣ ಪರವಾಗಿ ಮಾತನಾಡಿದರೆ ಸೀಮಾಂಧ್ರದಲ್ಲಿ ಮತಗಳು ಬೀಳುವುದಿಲ್ಲ, ಅಖಂಡ ಆಂಧ್ರದ ಪರ ಮಾತನಾಡಿದರೆ ತೆಲಂಗಾಣದಲ್ಲಿ ಮತಗಳು ಬೀಳುವುದಿಲ್ಲ. ರಾಜಕೀಯ ಪಕ್ಷಗಳಿಗೆ ಇದೊಂದು ಅಡಕ್ಕೊತ್ತಿನ ಪರಿಸ್ಥಿತಿ. ತಮ್ಮ ರಾಜಕೀಯ ಹಿತಾಸಕ್ತಿಗಿಂತ ಜನತೆಯ ಹಿತ ಮುಖ್ಯವೆಂಬುದನ್ನು ಅಲ್ಲಿಯ ನಾಯಕರು ಅರಿತು ಒಂದು ಜನಪರ ನಿರ್ಧಾರವನ್ನು ಕೈಗೊಳ್ಳಬೇಕು.