ವ್ಯಂಗ್ಯವಾಗಿ ಬರೆದ ಕವನ ಪ್ರಾರ್ಥನಾ ಪದ್ಯವಾಗಿದ್ದು
ಬೆಟಗೇರಿ ಕೃಷ್ಣಶರ್ಮರು "ಆನಂದ ಕಂದ" ಎಂಬ ಹೆಸರಿನಿಂದ ಖ್ಯಾತರಾದವರು. ಅವರು "ಜಯಂತಿ" ಎಂಬ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಅದು ಆಗ ತುಂಬಾ ಹೆಸರುಗಳಿಸಿತ್ತು...
ಬೆಟಗೇರಿ ಕೃಷ್ಣಶರ್ಮರು "ಆನಂದ ಕಂದ" ಎಂಬ ಹೆಸರಿನಿಂದ ಖ್ಯಾತರಾದವರು. ಅವರು "ಜಯಂತಿ" ಎಂಬ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಅದು ಆಗ ತುಂಬಾ ಹೆಸರುಗಳಿಸಿತ್ತು ಕೂಡ. ಅದರಲ್ಲಿ ನಾಡಿನ ಅನೇಕ ಪ್ರಸಿದ್ಧರು ತಮ್ಮ ಲೇಖನಗಳನ್ನು ಮತ್ತು ಕವನಗಳನ್ನು ಪ್ರಕಟಿಸುತ್ತಿದ್ದರು. ಅದು ಹಿಟ್ಲರ್ ಕುಖ್ಯಾತಿ ಗಳಿಸಿದ್ದ ಕಾಲ. ಅವನ ಉತ್ಕಟ ದೇಶಾಭಿಮಾನ, ಜನಾಂಗಾಭಿಮಾನ. ಈ ಭಾವನೆಯನ್ನು ಬೆಳೆಸಿಕೊಂಡು ಬಂದ ಹಿಟ್ಲರ್ ಹೇಗೆ ವಿಶ್ವ ಯುದ್ಧಕ್ಕೆ ಕಾರಣವಾದ ಎಂಬ ಚರ್ಚೆ ಸಾಹಿತ್ಯವಲಯದಲ್ಲಿಯೂ ನಡೆಯುತ್ತಿತ್ತು. ಇಂತಹ ಹಿಟ್ಲರ್ ಒಂದು ಭೂತವಾಗಿ ಕಾಣ್ತಾ ಇದ್ದಾನಲ್ಲಾ, ಅಂತಹ ಪರಿಸ್ಥಿತಿ ಕರ್ನಾಟಕಕ್ಕೆ, ಕನ್ನಡ ಭಾಷೆಗೆ ಬಂದರೆ ಏನಾಗುತ್ತದೆ ಎಂಬುದನ್ನು ಬಿಂಬಿಸಲು ಶಿವರಾಮ ಕಾರಂತರು "ಕರ್ನಾಟಕದಲ್ಲಿ ಜರ್ಮನಿ" ಎಂಬ ಲೇಖನವನ್ನು ಜಯಂತಿ ಪತ್ರಿಕೆಗೆ ಬರೆದಿದ್ದರು. ಅದರಲ್ಲಿ ನಮ್ಮ ಕನ್ನಡದ ಬಗ್ಗೆ ಪ್ರೇಮವಿರಬೇಕು ನಿಜ, ಆದರೆ ಅನಾವಶ್ಯಕವಾಗಿ ತೋರುವ ಉತ್ಕಟ ಪ್ರೀತಿ ಒಮ್ಮೊಮ್ಮೆ ಹೇಗೆ ಕನ್ನಡಕ್ಕೆ ಉರುಳಾಗಬಹುದು ಎಂಬುದನ್ನು ನಿದರ್ಶನಗಳ ಮೂಲಕ ಎಚ್ಚರಿಸಿದ್ದರು. ಅದರಲ್ಲಿ ಭಾಷಾಪ್ರೇಮವಿರಬೇಕೆಂದೂ ಅದು ಅತಿಯಾದರೆ ಭಾಷೆಗೆ ಆಗುವ ಹಾನಿಯನ್ನು ಕುರಿತು ಎಳೆಎಳೆಯಾಗಿ ಬಿಡಿಸಿಟ್ಟಿದ್ದರು. ಅದೇ ರೀತಿ ದ.ರಾ.ಬೇಂದ್ರೆಯವರು ಸಹ "ಹರಬೆಂಡರ್" ಹೆಸರಿನಲ್ಲಿ ಒಂದು ಕವನವನ್ನೂ ಪ್ರಕಟಿಸಿದ್ದರು. ಅದೊಂದು ವಿಡಂಬನಾತ್ಮಕವಾಗಿ ಬರೆದ ಕವನವಾಗಿದೆ. ಅದರ ಕೆಲವು ಸಾಲುಗಳು ಹೀಗಿದ್ದವು...
"ಒಂದೇ ಒಂದೇ ಕರ್ನಾಟಕ ಒಂದೇ,
ಹಿಂದೆ ಮುಂದೆ, ಒಂದೆ ಕರ್ನಾಟಕ ಒಂದೇ
ಇದನ್ನೊಪ್ಪದ ಹೆರವರು
ಇದ್ದರೂ ಒಂದೇ ಇರದಿದ್ದರೂ ಒಂದೇ
ಒಂದೇ ಒಂದೇ ಕರ್ನಾಟಕ ಒಂದೇ"
ವ್ಯಂಗ್ಯಕ್ಕಾಗಿ ಬರೆದ ಈ ಕವನ ಅದೆಷ್ಟು ಪ್ರಸಿದ್ಧಿ ಪಡೆಯಿತೆಂದರೆ, ಅದನ್ನು ನಾಟಕ ಕಂಪನಿಯೊಂದು ಪ್ರಾರ್ಥನಾ ಗೀತೆಯಾಗಿ ಪ್ರಾರಂಭದಲ್ಲಿ ಬಳಸಿಕೊಂಡಿತು. ನಾಡಗೀತೆಯೇನೋ ಎನ್ನುವ ರೀತಿಯಲ್ಲಿ ಭಕ್ತಿಭಾವದಿಂದ ಹಾಡುತ್ತಿದ್ದರಿಂದ ಅದನ್ನು ಕೇಳಿದ ಜನರ ಬಾಯಲ್ಲಿಯೂ ಈ ಗೀತೆ ನಲಿದಾಡುತ್ತಿತ್ತು. ಈ ಬಗ್ಗೆ ಬೇಂದ್ರೆಯವರ ಗಮನ ಸೆಳೆದಾಗ ಅವರು ನಕ್ಕು ನುಡಿದರು, "ಅವರವರ ಭಾವಕ್ಕೆ, ಅವರವರ ಭಕುತಿಗೆ ಭಂಗತರಬಾರದು" ಎಂದು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.