ತಪ್ಪಾಯ್ತು ತಿದ್ಕೋತೀವಿ
ಉಡುಪಿ ಜಿಲ್ಲೆ ಸಾಸ್ತಾನದಿಂದ ಪಿ.ಮಂಜುನಾಥ ಚಡಗ ಅವರು ಬರೆಯುತ್ತಾರೆ, 'ಈ ಅಂಕಣಕ್ಕೆ ಪದೇ ಪದೆ ಪತ್ರ ಬರೆಯುತ್ತಿರುವುದರಿಂದ ವಿಶ್ವೇಶ್ವರ ಭಟ್ ಅವರಿಗೆ ನನ್ನ ಮೇಲೆ ಕೋಪ ಬಂದಿರಬಹುದು. 'ತಪ್ಪಾಯ್ತು ತಿದ್ಕೋತೀವಿ' ಅಂಕಣಕ್ಕೆ ಬರೆಯಲು ನನಗೂ ಬೇಸರ. ಆದರೆ ಮುಖಪುಟದಲ್ಲಿಯೇ ತಪ್ಪುಗಳು ಕಾಣಿಸಿದಾಗ ಬರೆಯಬೇಕು ಎನಿಸುತ್ತದೆ. ಅ.28ರ ಮುಖಪುಟದ 'ಹನಿ ಸುದ್ದಿ'ಯ '2004ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ.....' ಎಂದಿದೆ. ಇನ್ನು ಪುಟ 10ರಲ್ಲಿ ಇದಕ್ಕೆ ವಿವರಣೆ ನೀಡುವಾಗ 2014ರ ಲೋಕಸಭೆ ಚುನಾವಣೆ ಎಂದು ಬರೆಯಲಾಗಿದೆ. ಇವೆರಡು ಸುದ್ದಿಗಳಲ್ಲಿ ಯಾವುದು ಸರಿ?'
'ಶಿವಮೊಗ್ಗ ಆವೃತ್ತಿಯ ಪುಟ 3ರಲ್ಲಿ 'ಪದವಿ ಕಾಲೇಜು ವಿಸ್ತರಣಾ.....' ಶೀರ್ಷಿಕೆಯಡಿಯ ಬಾಕ್ಸ್‌ನಲ್ಲಿರುವ ಸುದ್ದಿಯಲ್ಲಿ 'ಮುಂದಿನ ವರ್ಷದಿಂದ ಮಹಿಳಾ ಕಾಲೇಜು' ಉಪಶೀರ್ಷಿಕೆಯಡಿ ಮುಂದಿನ ಶೈಕ್ಷಣಿಕ ಸಾಲಿನಿಂದ ಮಹಿಳಾ ಪದವಿ ಕಾಲೇಜು 2013-14ನೇ ಸಾಲಿನಿಂದ ಅಂತ ಇದೆ. ಆದರೆ ಅದು 2014-15 ಎಂದು ಆಗಬೇಕಿತ್ತು ಎಂದನಿಸುತ್ತದೆ. ಇನ್ನು ಅದೇ ಸುದ್ದಿಯ 10ನೇ ಸಾಲಿನಲ್ಲಿ 'ಮಹಿಳಾ ವಿದ್ಯಾರ್ಥಿನಿಯರು ಹೆಚ್ಚಿನ ಶಿಕ್ಷಣ ಪಡೆಯಲು ಅನುಕೂಲವಾಗಿದೆ....' ಎಂದಿದೆ. ಇಲ್ಲಿ 'ವಿದ್ಯಾರ್ಥಿನಿಯರು' ಎಂದ ಮೇಲೆ 'ಮಹಿಳಾ' ಎಂಬ ಪದದ ಅಗತ್ಯವಿರಲಿಲ್ಲ.'
'ಪುಟ7ರ ಹಿರಿಯರ ಹಾದಿ ಅಂಕಣದ 15ನೇ ಸಾಲಿನಲ್ಲಿ 'ಕಸ ಹೊಡೆಯುವುದರಿಂದ....' ಅಂತ ಇದೆ. 22ನೇ ಸಾಲಿನಲ್ಲಿ 'ಗೋಡೆಗೆ ಮೊಳೆ ಹೊಡೆಯುವಾಗ' ಅಂತ ಇದೆ. ಇಲ್ಲಿ ಎರಡು ಕಡೆ ಪದ ಪ್ರಯೋಗ ಗಮನಿಸಿದರೆ ಮೊದಲನೆಯದು 'ಕಸ ಗುಡಿಸುವುದರಿಂದ' ಅಂತ ಆಗಬೇಕಿತ್ತು ಅನ್ನಿಸುತ್ತೆ. ಹೀಗೆಯೇ ಇತರ ಲೇಖನಗಳಲ್ಲಿ ಮಂಡಳಿ ಮಂಡ ಆಗಿದೆ, ಸಬ್ಸಿಡಿ ಸಬ್ಸಿಬ್ಸಡಿ, ಮಳಿಗೆಗಳಿಗೆ ಮಳಿಗಳಿಗೆ ಎಂದಾಗಿದೆ. ಎಲ್ಲವನ್ನೂ ಬರೆಯುತ್ತಾ ಹೋದರೆ 'ತಪ್ಪಾಯ್ತು ತಿದ್ಕೋತೀವಿ' ಹೆಸರಿನ ಪತ್ರಿಕೆಯೊಂದನ್ನು ಪ್ರಕಟಿಸಬಹುದೇನೋ!?' ಎಂದು ಅವರು ಆಶ್ಚರ್ಯವ್ಯಕ್ತಪಡಿಸಿದ್ದಾರೆ.
ಮೈಸೂರಿನ ಬೆಟ್ಟದಪುರದಿಂದ ಬಿ.ಕೆ.ಶ್ರೀಕಾಂತ್ ಅವರು ಪತ್ರ ಕಳುಹಿಸಿದ್ದಾರೆ, 'ಅ.8ರ ಸಂಚಿಕೆಯ ಮೈಸೂರು ಆವೃತ್ತಿಯ ಪುಟ 2ರಲ್ಲಿ 'ಯೋಜನೆಗಳನ್ನು ಅರ್ಹರಿಗೆ ತಲುಪಿಸಿ' ಶೀರ್ಷಿಕೆಯ ವಿವರದಲ್ಲಿ 'ಹಾಲು ಶಿಥಲೀಕರಣ ಕೇಂದ್ರ ಹಾಗೂ ನೂತನ ಡೈರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು' ಎಂದಿದೆ. ಶಿಥಲೀಕರಣ ಹಾಗೂ ಶೀತಲೀಕರಣ ಪದಗಳ ಅರ್ಥವ್ಯತ್ಯಾಸ ನಿಮ್ಮ ವರದಿಗಾರರಿಗೆ ತಿಳಿದಿಲ್ಲವೆಂದು ಕಾಣುತ್ತದೆ. ಇನ್ನು ಅ.10 ಪುಟ 8ರಲ್ಲಿ ಪ್ರಕಟವಾದ 'ಗೂಫ ಬಣ್ಣ ಬದಲು' ಕಾರ್ಟೂನ್ ಅ.12ರಂದು ಮರುಪ್ರಕಟವಾಗಿದೆ' ಎಂದು ಅವರು ಹೇಳಿದ್ದಾರೆ.
ವಿಶ್ವೇಶ್ವರ ಭಟ್