ಮದುವೆ ಸರಳವಾಗಿರಲಿ
ಮದುವೆ ಮನಸ್ಸುಗಳ ಮಿಲನವಾಗಬೇಕು ಎಂಬ ಶೀರ್ಷಿಕೆಯ ಡಾ॥ ಶಾಲಿನೀ ರಜನೀಶರ ಲೇಖನ (ಕನ್ನಡ ಪ್ರಭ 28) ಇಂದಿಗೆ ಅತ್ಯಂತ ಅರ್ಥಪೂರ್ಣ ಹಾಗೂ ಸಾಮಯಿಕವಾಗಿದೆ. ಅವರು ವಿಶ್ಲೇಷಿಸಿದಂತೆ "ನನ್ನ ಮನೆಯಲ್ಲಿ ಹೆಣ್ಣು ಮಗು ಏಕಾದರೂ ಹುಟ್ಟಿತು. ಅವಳ ಮದುವೆಗಾಗಿ ಲಕ್ಷಾಂತರ ರುಪಾಯಿಗಳ ಖರ್ಚು ಮಾಡಬೇಕು" ಎಂದು ಇಂದಿಗೂ ಪರಿತಪಿಸುವವರಿದ್ದಾರೆ. ಆದರೆ ಡಾ. ಶಾಲಿನೀ ತಿಳಿಸಿದಂತೆ ವರ ಹಾಗೂ ವಧು ಇವರಿಬ್ಬರ ತಾಯಿ ತಂದೆಯರು ಸರಳ ವಿವಾಹದ ಬಗ್ಗೆ ಏಕಭಿಪ್ರಾಯವನ್ನು ಹೊಂದುವುದಾದರೆ ಅದೇ ನಿಜವಾದ ಸ್ವರ್ಗ! ಸರಳ ಹಾಗೂ ಭಾವಪೂರ್ಣ ಮದುವೆಗಾಗಿ ವರನ ತಾಯಿತಂದೆಯರೇ ಮುಂದಾಗಬೇಕು. ವಧುವಿನ ಕಡೆಯವರು ಈ ವಿಚಾರಕ್ಕೆ ಸ್ಪಂದಿಸಬೇಕು. ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣ ವಿಭಾಗದಲ್ಲಿ ಹಿರಿಯ ಅಧಿಕಾರಿಗಳಾದ ಪ್ರೊ॥ ಟಿ.ಎನ್. ಪ್ರಭಾಕರ್‌ರವರ ಮದುವೆ ಈಗ್ಗೆ 15 ವರ್ಷಗಳ ಹಿಂದೆ ಭಾರೀ ಸುದ್ದಿಯನ್ನು ಮಾಡಿತ್ತು. ಇವರ 17 ಮಂದಿ ಬಂಧುಗಳು ಮಾತ್ರ ಮದುವೆಗಾಗಿ ವಧುಗೃಹಕ್ಕೆ ಹೋಗಿದ್ದರು. ಹಳ್ಳಿಯ ಮನೆಯ ಅಂಗಳದಲ್ಲಿ ಒಂದು ದಿನದ ಸರಳ ಮದುವೆ. ವರೋಪಚಾರ, ವರದಕ್ಷಿಣೆ, ವಾಹನ ಭತ್ಯೆ, ರೇಷ್ಮೆ ಮಕುಟ ಇತ್ಯಾದಿ ಬಯಸಲಿಲ್ಲ; ಪಡೆಯಲಿಲ್ಲ! ಆದರೆ ಆ ಮದುವೆ ಮತ್ತೊಂದು ವಿಷಯದಲ್ಲಿ ಹೊಸ ದಾಖಲೆ ಸ್ಥಾಪಿಸಿತು. ಅದೆಂದರೆ, ಅಂದು ಕಾಳಿದಾಸನ ಶಾಕುಂತಲ ನಾಟಕದ ನಾಲ್ಕನೆಯ ಅಂಕದ ಅಭಿನಯ (ಕಣ್ವರು ತಮ್ಮ ಸಾಕು ಮಗಳಾದ ನವವಧು ಶಕುಂತಲೆಯನ್ನು ದುಷ್ಯಂತನ ಅರಮನೆಗೆ ಕಳುಹಿಸಿಕೊಡುವ ಕರುಣಾರ್ದ್ರ ದೃಶ್ಯ), ವಿವಾಹದ ಬಗ್ಗೆ ಇರುವ ಶೋಭಾನೆ ಪದಗಳ ಗಾಯನ, ವಿವಾಹದ ಉದ್ದೇಶ ಕುರಿತು ಉಪನ್ಯಾಸ ಹಾಗೂ ಶತಾವಧಾನೀ ಡಾ. ಗಣೇಶ್‌ರವರ ಅಷ್ಟಾವಧಾನ ಸಂಸ್ಕೃತಿ -ಜ್ಞಾನ- ಹಾಗೂ ಪ್ರೇರಣೆಯ ಮೃಷ್ಟಾನ್ನ! ಹೀಗೊಂದು ಸರಳ ಹಾಗೂ ಅರ್ಥಪೂರ್ಣ ಸಾಂಸ್ಕೃತಿಕ ವಿವಾಹ ಒಂದು ಮೇಲ್ಪಂಕ್ತಿಯಾಯಿತು.
- ವಿ. ರಾಮಪ್ಪ, ಬೆಂಗಳೂರು
ದೇವರ ಗತಿ!
"ದೇವರ ಚಿತ್ರಗಳನ್ನು ಮದುವೆ ಮುಂತಾದ ಆಮಂತ್ರಣ ಪತ್ರಿಕೆಗಳ ಮೇಲೆ ಮುದ್ರಿಸುವುದು" ಎಷ್ಟರ ಮಟ್ಟಿಗೆ ಸರಿ ಎಂಬ ಲೇಖನ ಪತ್ರಿಕೆಯಲ್ಲಿ ಪ್ರಕಟವಾದ ಕೆಲವೇ ದಿನಗಳಲ್ಲಿ ಓದುಗರೊಬ್ಬರು ಪಟಾಕಿಗಳ ಮೇಲೂ ದೇವರ ಚಿತ್ರಗಳನ್ನು ಮುದ್ರಿಸುವುದು ಸೂಕ್ತ ಅಲ್ಲ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.
ದೇವರ ಚಿತ್ರ ಇರುವ ಮದುವೆ ಆಮಂತ್ರಣ ಪತ್ರಿಕೆಯಿಂದ ಚಿಕ್ಕ ಮಗುವು ಮನೆಯೊಳಗೆ ಮಾಡಿದ ಹೇಸಿಗೆಯನ್ನು ತೆಗೆಯುತ್ತಿರುವುದನ್ನು ಕಣ್ಣಾರೆ ಕಂಡ ನಾನು ಆರೇಳು ವರ್ಷದ ಹಿಂದೆಯೇ ವಾರಪತ್ರಿಕೆಯಲ್ಲಿ ಲೇಖನ ಬರೆದಿದ್ದೆ. ದೇವರ ಪ್ರತಿನಿಧಿಗಳು ತಾವೆಂದು ಹೇಳಿಕೊಳ್ಳುವ ಕೆಲವು ಮಠಾಧಿಪತಿಗಳು ಮತ್ತು ಕೆಲವು ದೇವಾಲಯಗಳವರು ದೇಣಿಗೆ ಕೊಟ್ಟ ಭಕ್ತರಿಗೆ ದೇವರ ಚಿತ್ರ ಇರುವ ಶಾಲನ್ನು ಪ್ರಸಾದ ರೂಪದಲ್ಲಿ ಕೊಡುತ್ತಾರೆ. ದೇವರ ಪ್ರಸಾದ ಎಂದು ಧನ್ಯತಾಭಾವದಿಂದ ಸ್ವೀಕರಿಸಿ ಕೊಂಡು ಹೋದ ಭಕ್ತರೋ ಆ ಶಾಲನ್ನು ಸೊಂಟಕ್ಕೆ ಸುತ್ತಿಕೊಳ್ಳುವುದನ್ನು ಇತ್ತೀಚೆಗೆ ಕಾಣಬಹುದು. ಇಲ್ಲಿ ಗಮನಿಸಿ, ಸೊಂಟಕ್ಕೆ ಸುತ್ತಿಕೊಂಡ ಶಾಲಿನಲ್ಲಿದ್ದ ದೇವರ ಚಿತ್ರ ಸುತ್ತಿಕೊಂಡವನ ಹಿಂಭಾಗಕ್ಕೆ ಸರಿಯಾಗಿ ಬಂದಿರುತ್ತದೆ. ಕೊಳಕು ಕೈಗಳನ್ನು ಅದಕ್ಕೆ ಒರೆಸಿಕೊಳ್ಳುವುದು, ಅವನು ಎಲ್ಲೆಂದರಲ್ಲಿ ಕುಳಿತಾಗ ಆ ದೇವರ ಚಿತ್ರ ಅವನ ಕೆಳಗೆ! ಇದನ್ನೆಲ್ಲ ಗಮನಿಸಿದಾಗ "ದೇವ(ರ)ರೇ ಗತಿ" ಎನ್ನುವುದು ನೆನಪಾಗುತ್ತದೆ. ಇನ್ನಾದರೂ ದೇವಾಲಯಗಳು, ಮಠಮಾನ್ಯಗಳು ಈ ಬಗ್ಗೆ ಚಿಂತನೆ ಮಾಡಿಯಾರೇ!
-ಪಿ.ಮಂಜುನಾಥ್ ಚಡಗ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com