ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಅತಿರೇಕದ ಓಲೈಕೆ ರಾಜಕಾರಣ

Mainashree
Updated On : 7 Nov 2013, 10:37 am

ಎಣ್ಣೆದೀಪ ಆರುವ ಹಂತಕ್ಕೆ ಬಂದಾಗ ಒಮ್ಮೆ ಜೋರಾಗಿ ಉರಿಯುತ್ತದಂತೆ. ನಮ್ಮ ತಥಾಕಥಿತ "ಜಾತ್ಯತೀತ" ರಾಜಕಾರಣಿಗಳು ದಿನಬೆಳಗಾದರೆ ತಮ್ಮ ಕೊಳಕು ಬುದ್ಧಿ ಮತಬ್ಯಾಂಕ್ ರಾಜಕೀಯ ಮಾಡುವುದು ಈಗೀಗ ಅತಿರೇಕಕ್ಕೆ ಹೋಗುತ್ತಿರುವುದು ನೋಡಿದರೆ, ಇವರ ಅಂತ್ಯಕಾಲವು ಸಮೀಪಿಸುತ್ತಿರಬಹುದು ಅನಿಸುತ್ತದೆ. ಸರ್ಕಾರದ (ಅಂದರೆ ಜನರ ಕಷ್ಟದ) ದುಡ್ಡು ತಮ್ಮ ಪಿತ್ರಾರ್ಜಿತ ಆಸ್ತಿ, ಅದಕ್ಕೆ ಅಲ್ಪಸಂಖ್ಯಾತರು - ಅಂದರೆ ಮುಸ್ಲಿಮರು ಮಾತ್ರ - ಹಕ್ಕುದಾರರು ಎಂದು ಢಾಳಾಗಿ, ನಮ್ಮೆಲ್ಲರ ಮೈ ಉರಿಯುವಂತೆ, ಆ ಧರ್ಮದವರಿಗೆ ಮಾತ್ರ ದಕ್ಕುವಂತೆ ಹೊಸ ಹೊಸ ಯೋಜನೆಗಳನ್ನು ಪ್ರಕಟಿಸುತ್ತಿದ್ದಾರೆ. ಅವರಿಗಾಗಿ ದೇಶದೆಲ್ಲೆಡೆ ಪ್ರತ್ಯೇಕ ಮುಸ್ಲಿಂ ವಿ.ವಿ.ಯಂತೆ.. ಅಮಾಯಕ ಮುಸ್ಲಿಂ ಆರೋಪಿತರನ್ನು ಬಂಧಿಸಬಾರದು ಎಂದು ಹುಕುಂ, ಮುಸ್ಲಿಂ ಬಂಧಿತರಿಗೆ ತ್ವರಿತಗತಿ ನ್ಯಾಯಾಲಯ, ಮುಸ್ಲಿಂ ಸಮಾಜದ ರಕ್ಷಣೆ (?) ಗಾಗಿ 'ಕೋಮು ಹಿಂಸಾ ತಡೆ' ಮಸೂದೆ (ಗಲಭೆ, ಹಿಂಸೆ, ಯಾರಿಂದ?), ಮುಸ್ಲಿಂ ಯುವಕರಿಗೆ ಸ್ವ- ಉದ್ಯೋಗಕ್ಕಾಗಿ ಮತ್ತು ಟ್ಯಾಕ್ಸಿ ಕೊಳ್ಳಲು ಎರಡು ಲಕ್ಷದವರೆಗೆ ಸಾಲ... ಅದನ್ನು ಸರ್ಕಾರಕ್ಕೆ ಹಿಂದಿರುಗಿಸಲೇಬೇಕೆಂಬ ಜರೂರತ್ ಇಲ್ಲ ಎಂಬ ಟಿಪ್ಪಣಿ ಬೇರೆ! ಅವರ ಹೆಣ್ಣು ಮಕ್ಕಳಿಗೆ ಮದುವೆ ಸಹಾಯ ಎಂದು ತಲಾ 50000 ರುಪಾಯಿ, ಪಲ್ಲಂಗ, ಬೆಡ್, ಪಾತ್ರೆ ಪಗಡೆ ಇತ್ಯಾದಿಗಳಂತೆ... ಇದರ ಅರ್ಥವೇನು? ಮಕ್ಕಳ ಹೆರುವುದು ಮಾತ್ರ ನಿಮ್ಮ ಜವಾಬ್ದಾರಿ ಎಂದೇ? ಈ ಸೌಲಭ್ಯ ಪಡೆದವರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೆರಬಾರದು ಎಂದಿದ್ದರೆ ಕುಟುಂಬ ಯೋಜನೆಯಾದರೂ ಆಗುತ್ತಿತ್ತು! ಹಿಂದೂಗಳಲ್ಲಿ ಬಡಹೆಣ್ಣು ಮಕ್ಕಳು ಇಲ್ಲವೆ? ಇನ್ನು ಅವರ ತೀರ್ಥಯಾತ್ರೆಗಾಗಿ ಜಂಬೋ ಸಬ್ಸಿಡಿಯಂತೂ ಹಳೆ ಕಥೆ ಬಿಡಿ. ಬಿಜೆಪಿಯವರು ಮಠ-ಮಂದಿರಗಳಿಗೆ ಕೊಟ್ಟರೆ ಅಪರಾಧ, ಕೇಸರೀಕರಣ ಎಂದು ಬೊಬ್ಬೆ (ಮಠ - ಮಂದಿರಗಳು ಸಮಾಜ ಹಿತಕ್ಕೆ ವಿನಿಯೋಗಿಸುತ್ತವೆ). ನಮ್ಮ ಜನ, ಮಾಧ್ಯಮಗಳು, ಸಂಘಟನೆಗಳು, ಬು.ಜೀ.ಗಳು, ವಿಪಕ್ಷದವರು, ಜಾತ್ಯತೀತರು, ಈಗ 'ಹಸರೀಕರಣ' ಎಂದು ಬೊಬ್ಬೆ ಹೊಡೆಯಬೇಕು, ಪ್ರತಿಭಟಿಸಬೇಕು, ಚಳುವಳಿ ಮಾಡಬೇಕು. ಇಷ್ಟಕ್ಕೂ ಕೋಮುವಾದಿಗಳು ಯಾರು?
- ಇಳಿಮನೆ ಸುಭಾಶ್ಚಂದ್ರ ಹೆಗಡೆ, ಹುಬ್ಬಳ್ಳಿ
'ಮಾನವೀಯ ಧರ್ಮ'ಕ್ಕೆ ನಿಷ್ಠರಾದರೆ ಸಾಕು
ಶೈವರಾದ ಕುರುಬರು ಸ್ವಸಮುದಾಯದ ಹಿತದೃಷ್ಟಿಯಿಂದ ಗುರುಪೀಠವೊಂದನ್ನು ಹೊಂದಬೇಕಾಗಿ ಬಂದಾಗ, ಜನಪ್ರಿಯ ಚಾರಿತ್ರಿಕ ವ್ಯಕ್ತಿಯಾದ ತಮ್ಮ ಕನಕನ ಹೆಸರಿನಲ್ಲಿ ಪೀಠ ಸ್ಥಾಪಿಸಿದರು. ಕನಕದಾಸ ಎಂಬ ಆ ವ್ಯಕ್ತಿಯನ್ನೇ ಸರ್ವಸ್ವವಾಗಿಸಿ ಜಾಣ ತರ್ಕ ಮಾಡಿದ ಪೇಜಾವರ ಮಠಾಧೀಶರು "ಕುರುಬರ ಗುರುಪೀಠ'ದ ಅನುಯಾಯಿಗಳನ್ನು 'ಕನಕದಾಸರ ಆದಿಕೇಶವನ ಅನುಯಾಯಿ'ಗಳೆಂದು ತಾರ್ಕಿಕವಾಗಿ ಪರಿಗಣಿಸಿ ವೈಷ್ಣವ ದೀಕ್ಷೆ ನೀಡಲು ಮುಂದಾದರು. ದೇವರ ವಿಷಯದಲ್ಲಿ 'ತಾರತಮ್ಯ ಭಾವ' ಮತ್ತು ಮತಧರ್ಮಾಚರಣೆಯಲ್ಲಿ 'ನಿತ್ಯನರಕ' ಕಲ್ಪನೆ ಇವು ಈ ಉದ್ದೇಶಿತ ದೀಕ್ಷೆಗೆ ಅನುಕೂಲಾಸ್ತ್ರಗಳು!  ಅರೆ! ಅವರವರ ಭಾವಕ್ಕೆ, ಅವರವರ ಭಕುತಿಗೆ ಅವರವರಿಗೆ ಸರಿಕಾಣುವ ದೇವರನ್ನು ಅವರವರು ಪೂಜಿಸಿದರೆ ಅಂಥವರನ್ನೆಲ್ಲ 'ಅನ್ಯ ದೇವರುಗಳು' ಕುದಿಯೆಣ್ಣೆಯ ಕೊಪ್ಪರಿಗೆಯಲ್ಲಿ ಹಾಕಿ ಸುಡುವರೇ? ಹೌದಾದರೆ, ಅವರು ಯಾವ ಸೀಮೆಯ ದೇವರುಗಳು?! ಯಾಕೆ ಸ್ವಾಮೀ, ಈ ಎಲ್ಲ ಒಣ ಪಂಥಾಹ್ವಾನ- ವಾದ - ವಿವಾದ? 'ಮಾನವೀಯ ಧರ್ಮ'ಕ್ಕೆ ನಿಷ್ಠರಾಗಿ ನಾವೆಲ್ಲ ಬಾಳಿದರೆ ಸಾಲದೆ?  ಅಂದ ಹಾಗೆ, 'ದಲಿತರಿಗೆ ಬ್ರಾಹ್ಮಣರ ಹೆಣ್ಣು ಕೊಟ್ಟು ಮದುವೆ' ಎಂಬ ಮಾತು ಕೇಳಬರುತ್ತಿದೆ. ಬ್ರಾಹ್ಮಣ ಗಂಡುಗಳಿಗೇ ಬ್ರಾಹ್ಮಣ ಹೆಣ್ಣುಗಳು ಸಿಗದೆ, ಅನ್ಯಜಾತಿಯ ಹೆಣ್ಣುಗಳಿಗೆ ಹಸೆಮಣೆ ಹಾಕಲಾಗುತ್ತಿದ್ದು, ಇದಕ್ಕೆ ಪೇಜಾವರ ಶ್ರೀಗಳ 'ಧರ್ಮಸಮ್ಮತಿ'ಯೂ ಇದೆ ಗೊತ್ತೆ?
-ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement