ಇದು ತುಘಲಕ್ ಮಾರ್ಗ
ಪ್ರಪ್ರಥಮವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗಿನಿಂದ ನಡೆದು ಬಂದ ದಾರಿಯನ್ನು ಗಮನಿಸಿದರೆ ನಮಗೆ ನೆನಪಿಗೆ ಬರುವ ಇತಿಹಾಸದ ರಾಜ ಮೊಹಮ್ಮದ್ ಬಿನ್ ತುಘಲಕ್. ಉದಾ: ಶಾದಿ ಭಾಗ್ಯ-ಅಕ್ಕಿ ವಿತರಣೆ ಇವುಗಳನ್ನು ಎರಡೆರಡು ಬಾರಿ ಪುನವಿರ್ಮಶೆಗೆ ಅವಕಾಶ ಮಾಡಿಕೊಟ್ಟಿವೆ. ಮುಖ್ಯವಾಗಿ ಆಶ್ವಾಸನೆ ನೀಡಿರುವ ಮತ್ತು ಅಗತ್ಯವಾಗಿ ಮಾಡಬೇಕಾದ ಅನೇಕ ಕಾರ್ಯಕ್ರಮಗಳು ಬೇಕಾದಷ್ಟಿದ್ದರೂ ಅನರ್ಥಕ್ಕೆ ದಾರಿ ಮಾಡಿಕೊಡುವ ಜ್ಯೋತಿಷ್ಯ-ದೇವರು-ಮೂಢನಂಬಿಕೆ ಇತ್ಯಾದಿಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವುದನ್ನು ನೋಡಿದರೆ ಆಶ್ವಾಸನಾ ಕಾರ್ಯಕ್ರಮಗಳು ಜಾರಿಗೆ ಬರುವುದು ಸಂದೇಹಕ್ಕೆ ಎಡೆ ಮಾಡಿಕೊಟ್ಟಿವೆ. 'ಕುಣಿಯಲಾರದವಳು ನೆಲ ಡೊಂಕು ಎಂದಂತೆ' ಪ್ರಜೆಗಳ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಇದು ಅನ್ನಿಸಲಾರದೆ? ಈ ತುಘಲಕ್ ಮಾರ್ಗಕ್ಕೆ ಬೆಳಕು ಚೆಲ್ಲಿದರೆ ಭವಿಷ್ಯ ಹೀಗೆ ಮಿನುಗೀತು. ದೇವರು ಎನ್ನುವ ಕಲ್ಪನೆಯ ನಂಬಿಕೆಯ ಆಧಾರದ ಮೇಲೆ ಇಂದು ಪ್ರತಿ ಬೀದಿಗೂ -ಪ್ರತಿ ಕೇರಿಗೂ ದೇವಸ್ಥಾನಗಳು ರಚನೆಯಾಗುತ್ತಾ ಇವೆ. ಇದೇ ದೇವರುಗಳ ಮೇಲೆ ನಂಬಿಕೆಯಿಟ್ಟು ಎಷ್ಟೋ ಜನ ನಷ್ಟ ಅನುಭವಿಸಿರುತ್ತಾರೆ. ಉದಾ: ಭೂಗರ್ಭ ಶಾಸ್ತ್ರದ ವಿಫಲತೆಯನ್ನು ಗಮನಿಸಿ. ದೇವರನ್ನು ಬೋರ್‌ವೆಲ್ ಹಾಕಲು "ಹೂ" ಕೇಳುತ್ತಾರೆ. ನೀರು ಬೀಳದಿದ್ದಾಗ ಅನೇಕ ಜನ ನಷ್ಟ ಅನುಭವಿಸಿರುತ್ತಾರೆ. ಈ ಮೌಢ್ಯವನ್ನು ತೊಡೆಯಲು ಇಂತಹ ಎಲ್ಲಾ ದೇವಸ್ಥಾನದ ಬಾಗಿಲುಗಳ್ನು ಮುಚ್ಚಿಸಿ ಅಕ್ಕಿ ವಿತರಣಾ-ಶಾದಿ ಭಾಗ್ಯ ತಾಣಗಳನ್ನಾಗಿ ಪರಿವರ್ತಿಸಿದರೆ, ಸಿದ್ದರಾಮಯ್ಯನವರ ಆಸೆ-ಆಕಾಂಕ್ಷೆಗಳು ಈಡೇರುತ್ತವೆ! ಅಡ್ಮಿಟ್ ಮಾಡಿಸಿಕೊಂಡ ರೋಗಿಗಳ ಕಾಯಿಲೆಗಳ ಬಗ್ಗೆ ಕನ್‌ಫ್ಯೂಸ್ ಮಾಡಿಕೊಂಡ (ವೈಜ್ಞಾನಿಕವಾಗಿ ಅಧ್ಯಯನ ಮಾಡಿದ್ದರೂ), ರೋಗಿ ಕೊನೆಯುಸಿರೆಳೆಯುವನವವರೆಗೂ ಅವರ ಸಂಪರ್ಕದಲ್ಲಿಟ್ಟುಕೊಂಡಿರುವ ವೈದ್ಯರು ಮತ್ತು ಅವರ ತಾಣಗಳ ಬಗ್ಗೆ ಸಿದ್ದರಾಮಯ್ಯನಂತಹ ಮುಖ್ಯ ಸಮಾಜ ಸುಧಾರಕ ಮತ್ತು ಸ್ವಚ್ಛ ರಾಜಕಾರಣಿಗಳು ಏನು ಮಾಡುತ್ತಿದ್ದಾರೆ? ವೇದಿಕೆಯ ಮೇಲೊಂದು ಆಶ್ವಾಸನೆಕೊಟ್ಟು ಅದನ್ನು ನಡೆಸಲಾಗದೆ ವಿಫಲವಾದ ರಾಜಕಾರಣಿಗಳು ಶೇ.90. ಇವರು ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುತ್ತಿಲ್ಲವೇ? ಸಾಗರಕ್ಕೆ ಒಂದು ಕೊಡ ಸಿಹಿ ನೀರು ಹಾಕಿ ಸಾಗರದ ನೀರನ್ನು ಸಿಹಿಯಾಗಿ ಪರಿವರ್ತಿಸುವ ವ್ಯರ್ಥ ಪ್ರಯತ್ನ ಮಾಡುತ್ತಿರುವವರು ಮೂಢರೋ? ದೈನಂದಿನ ಬದುಕಿನಲ್ಲಿ ದೇವರು, ಜ್ಯೋತಿಷ್ಯ, ವೈದ್ಯ, ಗುರು ಇವರನ್ನು ಬಳಸಿಕೊಂಡು ನೆಮ್ಮದಿ ಪಡೆದುಕೊಳ್ಳುತ್ತಿರುವ ಜನ ಮೂಢರೋ? ಕಾಲ ನಿರ್ಧರಿಸುತ್ತದೆ! ಸಿದ್ದರಾಮಯ್ಯನವರಂತಹವರು ಬರುತ್ತಾರೆ-ಹೋಗುತ್ತಾರೆ. ಜನರಲ್ಲಿ ಮೂಡಿರುವ ಇಂತಹ ನಂಬಿಕೆಗಳು ಅಪಾಯಕಾರಿ ಎಂದಾದಾಗ ಜನರೇ ದೂರ ಸರಿಸುತ್ತಾರೆ. ಸತ್ಯ-ಅಸತ್ಯಗಳು ಜನರಿಗೆ ಗೊತ್ತಿಲ್ಲ ತನಗೇ ಗೊತ್ತಿದೆ ಎನ್ನುವ ಅಹಂಕಾರ ಯಾರಿಗೂ ಸಲ್ಲದು! ಅದು ಜನರಿಗೆ ಬಿಟ್ಟ ವಿಚಾರ. ಇಂತಹ ಮೂಢನಂಬಿಕೆಗಳನ್ನು ತೊಡೆಯಲು ಅನೇಕ ತತ್ವಜ್ಞಾನಿಗಳು ಸಿದ್ದರಾಮಯ್ಯನವರು ಜನಿಸುವ ಮೊದಲೇ ಪ್ರಯತ್ನಿಸಿರುವ ಉದಾಹರಣೆಗಳಿವೆ. ಆದರೂ ಸಮಾಜದ ಪರಿವರ್ತನೆ ಆಗಿಲ್ಲ. ಕಾರಣ ಇದು ಪ್ರಬಲವಾದ ನಂಬಿಕೆ. ಇದರಲ್ಲಿ ಸತ್ಯ ಕಂಡಿದ್ದರಿಂದಲೇ ಜನಸಾಮಾನ್ಯರೂ ಇದನ್ನು ಉಳಿಸಿ ಬೆಳೆಸಿಕೊಂಡು ಬಂದಿರುವುದು ಎನ್ನುವ ಸತ್ಯ ಸಿದ್ದರಾಮಯ್ಯನಂತಹವರು ಮನಗಂಡರೆ ಸಮಾಜಕ್ಕೂ, ರಾಜ್ಯಕ್ಕೂ, ದೇಶಕ್ಕೂ ಕ್ಷೇಮ! ಇಂತಹ ವಿಚಾರಗಳನ್ನು ಮೌಢ್ಯವೆಂದು ಕರೆಯುವ ಸಿದ್ದರಾಮಯ್ಯನವರು ರಾಜಕಾರಣದಿಂದ ಹೊರಬಂದು ಈ ಮೌಢ್ಯವನ್ನು ತೊಡೆಯಲು ದಾರ್ಶನಿಕರಾದರೆ ಕರ್ನಾಟಕ ತನ್ನ ಮಡಿಲಲ್ಲಿ ಹುಟ್ಟಿದ ಹೆಮ್ಮೆಯ ಪುತ್ರ ಎಂದು ಸಿದ್ದರಾಮಯ್ಯನವರನ್ನು ಅಭಿನಂದಿಸುತ್ತದೆ.
- ಹೇಮದಳ ಪ್ರಸಾದ್, ಹಿರಿಯೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com