ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ನಾವು ರಣರಂಗದಲ್ಲಿ ಮಾತ್ರ ಶತ್ರುಗಳು

ಜನರಲ್. ಕೆ.ಎಸ್.ತಿಮ್ಮಯ್ಯನವರು ಭಾರತೀಯ ಸೈನ್ಯದ ಪ್ರಧಾನ ದಂಡನಾಯಕಾರಾಗಿ ಸೇವೆ ಸಲ್ಲಿಸಿದ ನಮ್ಮ ಕೊಡಗಿನ ವೀರ ಕಲಿ. ಸೈನಿಕರ ಬಗ್ಗೆ ಅಪಾರ ಗೌರವವಿದ್ದ ....

Rashmi Kasaragodu
Updated On : 10 Nov 2013, 11:27 am

ಜನರಲ್. ಕೆ.ಎಸ್.ತಿಮ್ಮಯ್ಯನವರು ಭಾರತೀಯ ಸೈನ್ಯದ ಪ್ರಧಾನ ದಂಡನಾಯಕಾರಾಗಿ ಸೇವೆ ಸಲ್ಲಿಸಿದ ನಮ್ಮ ಕೊಡಗಿನ ವೀರ ಕಲಿ. ಸೈನಿಕರ ಬಗ್ಗೆ ಅಪಾರ ಗೌರವವಿದ್ದ ತಿಮ್ಮಯ್ಯನವರು ತಮ್ಮ ಅಧಿಕಾರಾವಧಿಯಲ್ಲಿ ಸೈನಿಕರಿಗಾಗಿ ಅನೇಕ ಸೌಲಭ್ಯಗಳನ್ನು ಒದಗಿಸಿಕೊಟ್ಟರು. ಎರಡನೇ ಮಹಾಯುದ್ಧದಲ್ಲಿ ಅಪ್ರತಿಮ ಸಾಹಸ ತೋರಿದ್ದಕ್ಕಾಗಿ ಅವರನ್ನು ಬ್ರಿಟಿಷ್ ಸರ್ಕಾರ ಬ್ರಿಗೇಡಿಯರ್ ಹುದ್ದೆಗೇರಿಸಿತು. ಇಥಿಯೋಪಿಯಾ ದೇಶಕ್ಕೆ ತೆರಳಿ ಅಲ್ಲಿನ ಸೈನಿಕರಿಗೆ ಅತ್ಯುತ್ತಮ ಸೈನಿಕ ಶಿಕ್ಷಣ ತರಬೇತಿ ನೀಡಿ ಅಲ್ಲಿನ ಸರ್ಕಾರದ ಮೆಚ್ಚುಗೆ ಗಳಿಸಿದರು. ಅಲ್ಲದೆ ನೇಪಾಳ ಮತ್ತು ರಷ್ಯಾಕ್ಕೆ ತೆರಳಿ ಯೋಧರ ಆಯ್ಕೆ, ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯಪಾತ್ರ ವಹಿಸಿದ್ದರು. ಸಂತೃಪ್ತಗೊಂಡ ಆ ದೇಶಗಳು ತಿಮ್ಮಯ್ಯನವರ ಸೇವೆಯ ದ್ಯೋತಕವಾಗಿ ತಮ್ಮ ತಮ್ಮ ದೇಶಗಳ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿದ್ದೂ ಉಂಟು. ಬರ್ಮಾ, ಕಾಶ್ಮೀರ ಯುದ್ಧಗಳಿಂದ ತಿಮ್ಮಯ್ಯನವರ ಸಾಹಸ ವಿಶ್ವದೆಲ್ಲೆಡೆ ಹಬ್ಬಿತು. ಕಾಶ್ಮೀರದ ಜನತೆಯಂತೂ ತಮ್ಮನ್ನು ತಿಮ್ಮಯ್ಯನವರೇ ಆಳಬೇಕೆಂದು ಸರ್ಕಾರಕ್ಕೆ ಕೇಳಿಕೊಂಡದ್ದೂ ಉಂಟು. ಭಾರತ ಸರ್ಕಾರ ಇವರ ಅನುಪಮ ಸೇವೆಯನ್ನು ಗುರುತಿಸಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಜ.ತಿಮ್ಮಯ್ಯನವರ ನೆನಪಿಗೆ ಸೈಪ್ರಸ್ ಅಂಚೆಚೀಟಿಯೊಂದನ್ನು ಹೊರತಂದಿತು. ಭಾರತ-ಪಾಕಿಸ್ತಾನ ಕಾಶ್ಮೀರದ ವಿಷಯದಲ್ಲಿ ಯುದ್ಧ ಘೋಷಿಸಿದಾಗ ಭಾರತೀಯ ಸೈನ್ಯದ ಕಮಾಂಡರ್ ಆಗಿದ್ದ ಜನರಲ್ ತಿಮ್ಮಯ್ಯನವರು ವೀರಾವೇಶದಿಂದ ಹೋರಾಟ ನಡೆಸಿ, ಪಾಕಿಸ್ತಾನದ ಗರ್ವಭಂಗ ಮಾಡಿದರು. ಅಲ್ಲದೆ ಎರಡೂ ದೇಶಗಳು ಯುದ್ಧವಿರಾಮ ಘೋಷಣೆ ಮಾಡಿದವು. 1949ರ ಜನವರಿ ಒಂದರಂದು ಜಮ್ಮು-ಕಾಶ್ಮೀರ ಕದನಕ್ಕೆ ಯುದ್ಧವಿರಾಮ ಘೋಷಣೆಯಾದಾಗ ಜ.ತಿಮ್ಮಯ್ಯನವರು ಮಾಡಿದ ಮೊದಲ ಕೆಲಸವೆಂದರೆ, ಅಲ್ಲಿಯೇ ಇದ್ದ ಪಾಕೀಸ್ತಾನದ ಸರ್ವೋಚ್ಚ ಸೇನಾಪತಿಯನ್ನು ಭೇಟಿಯಾಗಿ ಪ್ರೀತಿಯಿಂದ ಆಲಂಗಿಸಿಕೊಂಡರು. ಅವರ ಪ್ರೀತಿ, ಸ್ನೇಹ ಪೂರ್ವಕ ವರ್ತನೆಯನ್ನು ನೋಡಿದ ವಿಶ್ವ ಸಂಸ್ಥೆಯ ವೀಕ್ಷಕರಿಗೆ ಅಚ್ಚರಿಯಾಯಿತು. ಅಲ್ಲಿದ್ದ ಉಭಯ ಸೇನಾಪಡೆಗಳೂ ಮೂಕವಿಸ್ಮಿತವಾಗಿ ಈ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದವು. ಕುತೂಹಲ ತಡೆಯಲಾರದೆ, ಅವರಲ್ಲೊಬ್ಬರು ತಿಮ್ಮಯ್ಯನವರನ್ನು "ತಾವಿಬ್ಬರೂ ಶತ್ರುಗಳಲ್ಲವೆ?" ಎಂದು ಕೇಳಿದರು. ಅದಕ್ಕೆ ತಿಮ್ಮಯ್ಯನವರು, "ನೀವು ಹೇಳುವುದು ನಿಜ, ನಾವು ಶತ್ರುಗಳು ರಣರಂಗದಲ್ಲಿ ಮಾತ್ರ. ಇಲ್ಲಿ ನಾವಿಬ್ಬರೂ ಹಳೆಯ ಮಿತ್ರರು" ಎಂದರು. ಏಕೆಂದರೆ, ಜನರಲ್ ತಿಮ್ಮಯ್ಯ ಮತ್ತು ಪಾಕ್ ಸೇನಾಧಿಪತಿ ಸ್ಯಾಡ್ಹಲ್ಸರ್ ಶಾಲೆಯಲ್ಲಿ ಸಹಪಾಠಿಗಳಾಗಿದ್ದರಲ್ಲದೆ, ಆತ್ಮೀಯ ಗೆಳೆಯರೂ ಆಗಿದ್ದರು. ಹೀಗೆ ಯುದ್ಧರಂಗದಲ್ಲಿ ವೈರತ್ವವನ್ನು ಹೊಂದಿದ್ದರೂ, ಹೊರಗೆ ಬಂದಾಗ ಸ್ನೇಹ ಅವರ ಬಾಂಧವ್ಯವನ್ನು ಬೆಸೆದಿದ್ದಿತು.


-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments