ಪ್ರಾದೇಶಿಕ ಒತ್ತಡದಲ್ಲಿ ವಿದೇಶಾಂಗ ನೀತಿ
ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಈ ತಿಂಗಳ 15-16 ರಂದು ನಡೆಯಲಿರುವ ಕಾಮನ್ವೆಲ್ತ್ ದೇಶಗಳ ಸರ್ಕಾರಗಳ ಮುಖ್ಯಸ್ಥರ ಶೃಂಗ(ಚೋಗ್ಮ್)ದಲ್ಲಿ ...
ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಈ ತಿಂಗಳ 15-16 ರಂದು ನಡೆಯಲಿರುವ ಕಾಮನ್ವೆಲ್ತ್ ದೇಶಗಳ ಸರ್ಕಾರಗಳ ಮುಖ್ಯಸ್ಥರ ಶೃಂಗ(ಚೋಗ್ಮ್)ದಲ್ಲಿ ಭಾಗವಹಿಸದಿರುವ ನಿರ್ಧಾರವನ್ನು ಪ್ರಧಾನಮಂತ್ರಿ ಡಾ.ಮನಮೋಹನಸಿಂಗ್ ಅವರು ಕೈಗೊಂಡಿದ್ದಾರೆ. ಈ ಸಂಬಂಧದಲ್ಲಿ ಅವರು ಶ್ರೀಲಂಕಾದ ಅಧ್ಯಕ್ಷ ಮಹಿಂದಾ ರಾಜಪಕ್ಷ ಅವರಿಗೆ ಪತ್ರವನ್ನೂ ಬರೆಯಲಿದ್ದಾರೆ. ಶ್ರೀಲಂಕಾದಲ್ಲಿಯ ಭಾರತೀಯ ರಾಯಭಾರಿಯು ಅವರಿಗೆ ಈ ಪತ್ರವನ್ನು ತಲುಪಿಸಲಿದ್ದಾರೆ.
ಸರ್ಕಾರದ ಮುಖ್ಯಸ್ಥರಾಗಿ ಪ್ರಧಾನಿ ಭಾಗವಹಿಸದೆ ಇರುವುದು ಇದೇ ಮೊದಲ ಸಲ ಏನಲ್ಲ. ಇದರ ಮೊದಲ ಶೃಂಗ ನಡೆದದ್ದು 1993ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಹತ್ತು ಶೃಂಗಗಳು ನಡೆದಿವೆ. ಐದು ಬಾರಿ ಪ್ರಧಾನಮಂತ್ರಿ ಭಾಗವಹಿಸಿದ್ದರು. ಉಳಿದ ನಾಲ್ಕು ಸಲ ಸಚಿವರ ಮಟ್ಟದ ನಿಯೋಗ ಭಾಗವಹಿಸಿತ್ತು. ಕಳೆದ ಬಾರಿ ಪರ್ತ್ನಲ್ಲಿ ನಡೆದ ಶೃಂಗದಲ್ಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಭಾಗವಹಿಸಿದ್ದರು. ಈ ಬಾರಿ ಅವರು ಈ ಶೃಂಗದಲ್ಲಿ ಭಾಗವಹಿಸುವ ಬಗ್ಗೆ ಉತ್ಸುಕರಾಗಿಲ್ಲ. ಹೀಗಾಗಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರ ನೇತೃತ್ವದ ನಿಯೋಗ ಭಾಗವಹಿಸಬಹುದಾಗಿದೆ.
ಶ್ರೀಲಂಕಾದ ಉತ್ತರ ಭಾಗದಲ್ಲಿ ಬಹುಸಂಖ್ಯಾತರಾಗಿರುವ ತಮಿಳರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ತಮಿಳರಿಗೆ ರಾಜಕೀಯ ಅಧಿಕಾರವನ್ನು ನೀಡಲು ಶ್ರೀಲಂಕಾ ಸರ್ಕಾರ ಮೀನ-ಮೇಷ ಎಣಿಸುತ್ತಿದೆ ಎಂದು ತಮಿಳುನಾಡಿನಲ್ಲಿಯ ವಿವಿಧ ರಾಜಕೀಯ ಪಕ್ಷಗಳು ಮತ್ತು ಇತರ ಸಂಘಟನೆಗಳು ಆರೋಪಿಸುತ್ತಿವೆ. ಇದೇ ಕಾರಣಕ್ಕೆ ಪ್ರಧಾನಮಂತ್ರಿ ಕಾಮನ್ವೆಲ್ತ್ ಶೃಂಗದಲ್ಲಿ ಭಾಗವಹಿಸಬಾರದು ಎಂದು ಒತ್ತಡ ಹೇರಿದ್ದವು. ತಮಿಳುನಾಡಿನ ಕಾಂಗ್ರೆಸ್ ಪ್ರಮುಖರೂ ಪ್ರಧಾನಿಯು ಶ್ರೀಲಂಕಾಕ್ಕೆ ತೆರಳುವುದಕ್ಕೆ ಪೂರಕ ಅಭಿಪ್ರಾಯವನ್ನು ಹೊಂದಿರಲಿಲ್ಲ. ಪ್ರಧಾನಿಯು ಪ್ರವಾಸ ರದ್ದುಗೊಳಿಸಿರುವುದು ತಮಿಳರ ಭಾವನೆಗಳನ್ನು ಗೌರವಿಸಿದಂತಾಗಿದೆ.
ಅಂಕಿ ಸಂಖ್ಯೆಯ ರಾಜಕೀಯ ಲೆಕ್ಕಾಚಾರದಲ್ಲಿ ಕೇಂದ್ರ ಸರ್ಕಾರವು ತಮಿಳುನಾಡಿನ ಪಕ್ಷಗಳ ಬೆಂಬಲವನ್ನು ನೆಚ್ಚಿಕೊಂಡಿರುವುದು ಸುಳ್ಳಲ್ಲ. ಮುಂಬರುವ ಲೋಕಸಭೆ ಚುನಾವಣೆಯೂ ಪ್ರಧಾನಿ ನಿರ್ಧಾರದ ಮೇಲೆ ಪ್ರಭಾವ ಬೀರಿರಬಹುದು. ಸ್ಥಳೀಯ ರಾಜಕೀಯವು ದೇಶದ ವಿದೇಶಾಂಗ ನೀತಿಯ ಮೇಲೆ ಪ್ರಭಾವ ಬೀರಿರುವುದು ಇದೇ ಮೊದಲ ಸಲವೇನಲ್ಲ.
ಕಳೆದ ಮಾರ್ಚ್ ತಿಂಗಳಲ್ಲಿ ವಿಶ್ವಸಂಸ್ಥೆಯಲ್ಲಿ ಶ್ರೀಲಂಕಾದ ವಿರುದ್ಧ, 2009ರಲ್ಲಿ ತಮಿಳು ಜನಾಂಗದವರ ಮೇಲೆ ದೌರ್ಜನ್ಯ ನಡೆದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅದನ್ನು ಖಂಡಿಸುವ ಒಂದು ಗೊತ್ತುವಳಿಯು ಮಂಡಿತವಾಗಿತ್ತು. ಕೇಂದ್ರದಲ್ಲಿ ಡಿಎಂಕೆಯ ಬೆಂಬಲವನ್ನು ನಂಬಿಕೊಂಡಿದ್ದ ಯುಪಿಎ ಕರುಣಾನಿಧಿಯವರ ಒತ್ತಡಕ್ಕೆ ಮಣಿಯಿತು. ಆ ಗೊತ್ತುವಳಿಯ ಪರವಾಗಿ ಮತವನ್ನು ಹಾಕಿತು. ಶ್ರೀಲಂಕಾ ಸರ್ಕಾರ ಗೊತ್ತುವಳಿಯನ್ನು ವಿರೋಧಿಸುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿತ್ತು. ಭಾರತದ ಅಂತಾರಾಷ್ಟ್ರೀಯ ನೀತಿಗಳ ಮೇಲೆ ಸ್ಥಳೀಯ ಪ್ರಾದೇಶಿಕ ಪಕ್ಷಗಳು ಆಗಲೂ ತಮ್ಮ ಪ್ರಭಾವ ಬೀರಿದ್ದವು.
ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಹಾಗೂ ಅಧಿಕಾರಿಗಳ ವಲಯದಲ್ಲಿ ಪ್ರಧಾನಿ ಶ್ರೀಲಂಕಾಕ್ಕೆ ತೆರಳಿ ಶೃಂಗದಲ್ಲಿ ಪಾಲ್ಗೊಳ್ಳುವುದು ಸೂಕ್ತ ಎಂಬ ಭಾವನೆ ಇದೆ. ಇದು ದೇಶದ ವ್ಯೂಹಾತ್ಮಕ ಮತ್ತು ಸುರಕ್ಷಾ ಕಾರಣಗಳಿಂದ ಮಹತ್ವದ್ದಾಗಿತ್ತು ಎಂದು ಅವರು ಅಂದುಕೊಂಡಿದ್ದಾರೆ. ಆದರೆ ತಮಿಳುನಾಡಿನ ರಾಜಕೀಯ ಪಕ್ಷಗಳು ಪ್ರಧಾನಿಯ ನಿರ್ಧಾರವನ್ನು ಸ್ವಾಗತಿಸಿವೆ. ಭಾರತದ ಒಂದು ಪ್ರದೇಶದ ಜನರ ಭಾವನೆಗಳನ್ನು ನಿರ್ಲಕ್ಷಿಸಿ ಪ್ರಧಾನಿಯು ಶ್ರೀಲಂಕಾಕ್ಕೆ ತೆರಳಿ ಸಾಧಿಸುವಂಥದ್ದು ಏನೂ ಇಲ್ಲ. ಇದು ಬರುವ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ ಯಾವುದಾದರೂ ಒಂದು ಪಕ್ಷದ ಜೊತೆ ಕಾಂಗ್ರೆಸ್ ಮೈತ್ರಿಯನ್ನು ಮಾಡಿಕೊಳ್ಳಲೇಬೇಕು. ಪಕ್ಷ ರಾಜಕಾರಣವೂ ಪ್ರಧಾನಿಯ ನಿರ್ಧಾರವನ್ನು ಇಲ್ಲಿ ಪ್ರಭಾವಿಸಿದೆ.
ರಾಷ್ಟ್ರೀಯ ಹಿತಾಸಕ್ತಿ, ಅಂತಾರಾಷ್ಟ್ರೀಯ ಬಾಧ್ಯತೆಗಳು, ವಿದೇಶಾಂಗ ನೀತಿಯ ಆದ್ಯತೆಗಳು ಇವೆಲ್ಲ ಒಂದು ದೇಶದ ಅಂತಾರಾಷ್ಟ್ರೀಯ ನಡಾವಳಿಗಳನ್ನು ನಿರ್ಧರಿಸುತ್ತವೆ. ಒಂದೇ ರೀತಿಯದು ಎಂದು ಭಾವಿಸಬಹುದಾದ ಎಲ್ಲ ಸನ್ನಿವೇಶಗಳಲ್ಲೂ ಒಂದೇ ರೀತಿಯ ನಿರ್ಧಾರ ಕೈಗೊಳ್ಳಲು ಬರುವುದಿಲ್ಲ. ಪ್ರತಿಯೊಂದನ್ನೂ ಅವುಗಳ ಸಂಕೀರ್ಣತೆಯನ್ನು ಪರಿಗಣಿಸಿ ನಿಭಾಯಿಸಬೇಕಾಗುತ್ತದೆ. ಜಾಫ್ನಾದಲ್ಲಿಯ ತಮಿಳು ಆಡಳಿತದ ಮುಖ್ಯಸ್ಥರೇ ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವಾಗ ತಮಿಳುನಾಡಿನ ರಾಜಕೀಯದ ಖ್ಯಾತೆ ಅರ್ಥವಾಗದು. ಡಿಎಂಕೆ ಮತ್ತು ಅಣ್ಣಾ ಡಿಎಂಕೆಯ ರಾಜಕೀಯದ ಮೇಲಾಟ ಈ ಹಂತದವರೆಗೆ ಮುಟ್ಟಿದ್ದು ರಾಜಕೀಯ ವಿಶ್ಲೇಷಕರು ಬಿಡಿಸಬೇಕಾಗಿರುವ ಹೊಸ ಪ್ರಮೇಯವಾಗಿದೆ.