ತಪ್ಪಾಯ್ತು ತಿದ್ಕೋತೀವಿ
ಬಿಜಾಪುರದಿಂದ ಜಿ.ಬಿ. ಸಜ್ಜನ ಅವರು ಬರೆಯುತ್ತಾರೆ- 'ನೀವು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದೀರಿ. ನಿಮ್ಮ ಹೆಸರಿಗೆ ಬರೆದ ಕಾಗದಗಳು ನಿಮಗೆ ಮುಟ್ಟುವುದೆಂತು? 'ಸಂಪಾದಕರು' ಎಂಬ ಹೆಸರಿನಲ್ಲಿ ಬರೆದ ಪತ್ರಗಳನ್ನು ಸಂಪಾದಕ ವರ್ಗದ ಯಾರು ಅಥವಾ ಯಾರಿಗೆ ಒಪ್ಪಿಸಲಾಗಿದೆಯೋ ಅವರು ಗಮನಿಸಬಹುದು. ಇ-ಮೇಲ್ನಿಂದ ನಾನು ಕಳುಹಿಸಿದರೆ ನಿಮಗೇ ನೇರ ಪತ್ರ ತಲುಪಬಹುದು.'
'ನಮ್ಮಲ್ಲಿ 'ಕನ್ನಡಪ್ರಭ' ದಿನವೂ ಬರುತ್ತದೆ. ಆದರೆ ನಾನು ಇಲ್ಲಿ ಇರುವವರೆಗೆ ಅದು ನನಗೆ ಲಭ್ಯ. ನ.8ರ ಪತ್ರಿಕೆಯಲ್ಲಿ ಎಂ.ಜೆ. ಅಕ್ಬರ್ ಅವರ ಲೇಖನವನ್ನು ಕನ್ನಡಿಸಿದವರಾರು? ಅಕ್ಬರ್ ಅವರ ಮೂಲ ಲೇಖನ ಇಂಗ್ಲಿಷ್ನಲ್ಲಿರುತ್ತದೆ. ಸಂಪಾದಕ ವರ್ಗದವರು ಯಾರಾದರೂ ಭಾಷಾಂತರಿಸಬಹುದು. ಆದರೆ ಈ ಭಾಷಾಂತರದ ಭಾಷೆಯೇ ಸ್ವಲ್ಪ ವಿಚಿತ್ರವಾಗಿದೆ.'
"ಹಾಗಾಗೇ ಅವರನ್ನು ಅಸಡ್ಡೆ ಮೆರೆಯುತ್ತಿರುವ ಯುಪಿಎ ಸರ್ಕಾರ ತೀವ್ರವಾಗಿ ಕೆರಳಿಸಿದೆ' ಎಂದು ಬರೆಯಲಾಗಿದೆ. 'ಅವರನ್ನು ಅಸಡ್ಡೆಯಿಂದ ಕಾಣುವ ಸರ್ಕಾರ' ಎನ್ನಬಹುದಿತ್ತು. ಇಲ್ಲವೇ, 'ಅವರ ಬಗೆಗಿನ ಅಸಡ್ಡೆಯನ್ನು ಮೆರೆಯುವ' ಎನ್ನಬಹುದಿತ್ತು. 'ತೀವ್ರವಾಗಿ ಕೆರಳಿಸಿದೆ' ಇದರ ಕರ್ಮಪದವಾದ 'ಇವರನ್ನು' ಮೇಲ್ಗಡೆ ಇದೆ ಎನ್ನುವುದು ಸ್ಪಷ್ಟವಿಲ್ಲ. ಒಟ್ಟಾರೆ ವಾಕ್ಯ ರಚನೆ ವಿಚಿತ್ರವಾಗಿದೆ.'
'ಇನ್ನೊಂದು ವಾಕ್ಯ 'ಎನ್ನುವ ಕಾರಣಕ್ಕಲ್ಲ ಬದಲಾಗಿ ದೆಹಲಿ ದರ್ಬಾರಿನ ಮೇಲೆ ಮುತ್ತಿಗೆ ಹಾಕುತ್ತಿದ್ದಾರೆ ಎನ್ನುವ ಕಾರಣಕ್ಕೆ ಜನತೆಯ ಆಕ್ರೋಶದ ಧ್ವನಿ ಮತ್ತು ಫಲಾನುಭವಿ ಆಗುತ್ತಿದ್ದಾರೆ ಮೋದಿ' ಎಂದಿದೆ. 'ಜನತೆಯ ಆಕ್ರೋಶದ ಧ್ವನಿ ಮತ್ತು ಫಲಾನುಭವಿ ಆಗುತ್ತಿದ್ದಾರೆ' ಇದು ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ 'ಜನತೆಯ ಆಕ್ರೋಶದ ಧ್ವನಿಯಾಗುತ್ತಿದ್ದಾರೆ ಮೋದಿಯವರು. ಅಲ್ಲದೇ ಇದೆಲ್ಲದರ ಫಲಾನುಭವಿ ಆಗುತ್ತಿದ್ದಾರೆ ಅವರು' ಎಂದಿದ್ದರೆ ಎಲ್ಲವೂ ಸ್ಪಷ್ಟ.'
'ಮತ್ತೆ 'ಯುಪಿಎ ಸರ್ಕಾರದಡಿಯಲ್ಲಿ ಆಡಳಿತದಲ್ಲಿ ಉದ್ಭವವಾಗಿರುವ ಖಾಲಿ ಜಾಗಕ್ಕೆ ಮೋದಿ ನುಗ್ಗಿದ್ದಾರೆ' ಎಂದಿದೆ. ಇದು 'ಯುಪಿಎ ಸರ್ಕಾರದಾಡಳಿತದಲ್ಲಿ .... ನುಗ್ಗಿದ್ದಾರೆ ಮೋದಿ' ಆಗಬೇಕಿತ್ತು. ಮೋದಿ ನುಗ್ಗಿದ್ದಾರೆ ಎನ್ನುವಲ್ಲಿ ಅವಧಾರಣೆಯ (ಒತ್ತು) ವ್ಯತ್ಯಾಸವಾಗುತ್ತದೆ.'
"ಚರ್ಚೆಯಿಂದಾಗಿ ವ್ಯತ್ಯಾಸವೇನೂ ಆಗುವುದಿಲ್ಲ' ಎನ್ನುವಲ್ಲಿ ಚರ್ಚೆಯಿಂದ ಎಂದಿದ್ದರೆ ವಾಸಿ. 'ಚರ್ಚೆಯಿಂದಾಗಿ' ಎನ್ನುವಾಗ ಏನೋ ಸಂಭವಿಸಿದೆ ಎನ್ನುವುದಾದರೆ ಸೈ. 'ಇನ್ನು ಚುನಾವಣೆಗಳಿಗೆ ಆರು ತಿಂಗಳು ಸಮಯವಿದೆ' ಎಂಬಲ್ಲಿ 'ಇನ್ನೂ' ಇರಬೇಕಾಗಿತ್ತು. 'ಇನ್ನೂ ಆರುತಿಂಗಳವರೆಗೂ' ಎನ್ನುವಲ್ಲಿ 'ಇನ್ನು' ಇರುವುದು ಸಾಧು. ಯಾಕೆಂದರೆ ಒತ್ತು ಮುಂದೆಬರುತ್ತೆ. ಅದು ಎರಡೂಸಲ ಬರುವುದು ವಿಹಿತವಲ್ಲ' ಎಂದಿದ್ದಾರೆ.
ಎಂ.ಜೆ. ಅಕ್ಬರ್ ಅವರ ಲೇಖನದಲ್ಲಿ 'ಹಾಗಾಗೇ ಅಸಡ್ಡೆ ಮೆರೆಯುತ್ತಿರುವ ಯುಪಿಎ ಸರ್ಕಾರ ಅವರನ್ನು ತೀವ್ರವಾಗಿ ಕೆರಳಿಸಿದೆ' ಎಂದಾಗಿದ್ದರೆ ಸೂಕ್ತವಾಗುತ್ತಿತ್ತು. ಇನ್ನು ಉಳಿದ ತಪ್ಪುಗಳನ್ನು ಭಾಷಾಂತರದ ಸಂದರ್ಭದಲ್ಲಿ ಸಾಕಷ್ಟು ಮಂದಿ ಮಾಡುತ್ತಾರೆ. ಯಥಾವತ್ತಾಗಿ ಭಾಷಾಂತರ ಮಾಡಲು ಹೋದಾಗ ಇಂತಹ ತಪ್ಪಾಗುತ್ತವೆ. ಅದರ ಬದಲು ಲೇಖನ ಓದಿ ಅರ್ಥಮಾಡಿಕೊಂಡು ಅಥವಾ ಪ್ಯಾರಾ ಓದಿ ಅರ್ಥಮಾಡಿಕೊಂಡು ಅದನ್ನು ಸರಿಯಾಗಿ ಬರೆಯುವುದು ಉತ್ತಮ ಮಾರ್ಗ.
-ವಿಶ್ವೇಶ್ವರ ಭಟ್